ಜೆಡಿಎಸ್ ಗೆ ಮೋಸ ಮಾಡಿತಾ ಬಿಜೆಪಿ? – ಮಂಡ್ಯಕ್ಕೆ HDK.. ಸುಮಲತಾ ಸದ್ದಡಗಿತಾ?
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಈಗಾಗ್ಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನೂ ಘೋಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸೋದು ಈ ಎರಡೂ ಪಕ್ಷಗಳ ನಾಯಕರ ಗುರಿ. ಆದ್ರೆ ಸಮರಕ್ಕೂ ಮುನ್ನವೇ ದೋಸ್ತಿಯಲ್ಲಿ ಬಿರುಕು ಮೂಡಿದೆ. ಕ್ಷೇತ್ರಗಳ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ವಿಚಾರವಾಗಿ ಕುಸ್ತಿ ಶುರುವಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಬಗ್ಗೆ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದಾರೆ. ಒಂದೇ ದಿನದಲ್ಲಿ ತೇಪೆ ಹಚ್ಚುವ ಕೆಲಸವನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಅಧಿಕೃತ ಚಾಲನೆ – ಮೊದಲ ಹಂತದ ಚುನಾವಣೆಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭ
ದೋಸ್ತಿಯಲ್ಲಿ ಕುಸ್ತಿ!
ಬಿಜೆಪಿ ಜೊತೆಗಿನ ಮೈತ್ರಿಯಿಂದ ನಮಗೇನು ಲಾಭ ಇಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ. 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಶೇ.3ರಷ್ಟಿದ್ದು, ವೋಟ್ ಸ್ವಿಂಗ್ ಆದ್ರೆ ಬಿಜೆಪಿಗೆ ಅನುಕೂಲವಾಗಲಿದೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಅಂತ ನಮ್ಮ ಮುಖಂಡರು ಹೇಳಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಸಿಟ್ಟು ಹೊರ ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಯಾವ ರೀತಿ ಬಳಸಿಕೊಳ್ಳಬೇಕು ಅನ್ನೋದರ ಚರ್ಚಿಸಬೇಕಿದೆ. ಹಾಸನ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳು ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ರೂ ಗೆಲ್ಲುತ್ತಾರೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ರು. ಆದ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಒಂದೇ ದಿನಕ್ಕೆ ಕುಮಾರಣ್ಣ ಯೂಟರ್ನ್ ಕೂಡ ಹೊಡೆದಿದ್ರು.
ಬಿಜೆಪಿ-ಜೆಡಿಎಸ್ ಮೈತ್ರಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಕೊನೆಗೂ ಮೂರು ಕ್ಷೇತ್ರಗಳನ್ನು ಪಡೆದುಕೊಂಡಿದೆ. ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಹೀಗೆ ಒಂದ್ಕಡೆ ಸೀಟು ಹಂಚಿಕೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬ್ಯುಸಿಯಾಗಿರೊ ಕುಮಾರಣ್ಣ ಈ ಬಾರಿ ಖುದ್ದು ತಾವೇ ಲೋಕಸಭಾ ಅಖಾಡಕ್ಕೆ ಇಳಿಯೋಕೆ ಸಜ್ಜಾಗಿದ್ದಾರೆ.
ಮಂಡ್ಯದಿಂದ ಹೆಚ್ ಡಿಕೆ ಸ್ಪರ್ಧೆ!
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್ ಪಾಲಾದರೆ ಅಭ್ಯರ್ಥಿ ಯಾರೆನ್ನುವುದು ಮತ್ತೊಂದು ಯಕ್ಷ ಪ್ರಶ್ನೆಯಾಗಿತ್ತು. ಕಳೆದ ಬಾರಿಯಂತೆ ನಿಖಿಲ್ ಕುಮಾರಸ್ವಾಮಿ ಮತ್ತೆ ಸ್ಪರ್ಧೆಗಳಿಯಬಹುದೇ..? ಪಕ್ಷ ಸಂಘಟನೆ ಸೇರಿದಂತೆ ಈಗಾಗಲೇ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಸಿ.ಎಸ್ ಪುಟ್ಟರಾಜು ಅಭ್ಯರ್ಥಿಯಾಗಬಹುದೇ ಎನ್ನುವ ಕುತೂಹಲವಿತ್ತು..? ಇದೀಗ ಕೊನೆ ಕ್ಷಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಶತಾಯಗತಾಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಲು ಸಜ್ಜಾಗುತ್ತಿರುವ ಮೈತ್ರಿ ನಾಯಕರು ಈ ಬಾರಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯೇ ಮಂಡ್ಯ ಲೋಕ ಅಖಾಡದಿಂದ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಕಣಕ್ಕಿಳಿದರೆ ಅವರ ಬಹುದೊಡ್ಡ ಅಭಿಮಾನಿ ಬಳಗ ಒಂದಾಗಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಅಭ್ಯರ್ಥಿಯಾದರೆ ಸ್ಥಳೀಯ ನಾಯಕರಲ್ಲಿ ಯಾವುದೇ ಅಸಮಾಧಾನ ಇಲ್ಲದೇ ಪಕ್ಷ ಚುನಾವಣೆ ಎದುರಿಸಬಹುದು ಹಾಗೂ ಬಿಜೆಪಿಯ ನಾಯಕರು ಸಹ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಚಾರವಾಗಿದೆ. ಮುಖ್ಯವಾಗಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಕೂಡ ಹೆಚ್ಚು ವಿರೋಧ ಮಾಡುವುದಿಲ್ಲ ಎನ್ನುವ ಲೆಕ್ಕಾಚಾರದ ಮೇಲೆ ಕುಮಾರಸ್ವಾಮಿಯನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹೀಗೆ ಕುಮಾರಣ್ಣ ಲೋಕಸಭೆಗೆ ಸ್ಪರ್ಧಿಸೋಕೆ ಸಜ್ಜಾಗ್ತಿದ್ರೆ ಅತ್ತ ಸುಮಲತಾ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಬಿಜೆಪಿ ಟಿಕೆಟ್ ಸಿಗದೆ ಮುಂದೇನು ಮಾಡಬೇಕು ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಪದೇ ಪದೇ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.