ಭಾರತದ ಸ್ಪಿನ್ ದಂತಕಥೆ ಬಿಶನ್ ಸಿಂಗ್ ಬೇಡಿ ಇನ್ನಿಲ್ಲ

ಭಾರತದ ಸ್ಪಿನ್ ದಂತಕಥೆ ಬಿಶನ್ ಸಿಂಗ್ ಬೇಡಿ ಇನ್ನಿಲ್ಲ

ಕ್ರಿಕೆಟ್‌ ಪ್ರೇಮಿಗಳಿಗೆ ಬೇಸರದ ಸುದ್ದಿಯೊಂದಿದೆ. ಟೀಂ ಇಂಡಿಯಾದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಭಾರತ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದ ಬಿಶನ್ ಸಿಂಗ್ ಬೇಡಿಯವರು ಕಳೆದ ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ಸರ್ಜರಿಗಳಿಗೂ ಒಳಗಾಗಿದ್ದರು. ಇನ್ನು ಕಳೆದ ತಿಂಗಳಷ್ಟೇ ಬಿಷನ್ ಸಿಂಗ್ ಬೇಡಿಯವರು ಮೊಣಕಾಲಿನ ಸರ್ಜರಿಯನ್ನು ಮಾಡಿಸಿಕೊಂಡಿದ್ದರು. ಸೋಮವಾರ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಬಿಷನ್ ಸಿಂಗ್ ಬೇಡಿಯವರು ಪತ್ನಿ ಅಂಜು ಹಾಗೂ ತಮ್ಮ ಇಬ್ಬರು ಮಕ್ಕಳಾದ ನೇಹಾ ಹಾಗೂ ಅಂಗದ್ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ – ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ದಾಖಲೆ ಮುರಿದ ಮಹಮ್ಮದ್ ಶಮಿ

ಬಿಷನ್‌ ಸಿಂಗ್‌ ಬೇಡಿ ಅವರು 1967 ಮತ್ತು 1979 ರ ನಡುವೆ ಭಾರತದ ಪರ 67 ಟೆಸ್ಟ್ ಪಂದ್ಯಗಳನ್ನಾಡಿ 266 ಟೆಸ್ಟ್ ವಿಕೆಟ್​ ಕಬಳಿಸಿದ್ದರು. ಅಷ್ಟೇ ಅಲ್ಲದೇ ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಪಂದ್ಯಗಳಿಂದ 7 ವಿಕೆಟ್​ಗಳನ್ನು ಪಡೆದಿದ್ದರು.

ಅಮೃತಸರದಲ್ಲಿ 1946ರ ಸೆಪ್ಟೆಂಬರ್‌ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್‌ ಪಡೆದಿದ್ದಾರೆ. ದೇಶೀಯ ಲೀಗ್‌ನಲ್ಲಿ ದೆಹಲಿ ಪರ ಸಿಂಗ್‌ ಆಡಿದ್ದರು. ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದಾಗ ಇಂಗ್ಲೆಂಡ್ ವಿರುದ್ಧದ 1971 ರ ಭಾರತ ಐತಿಹಾಸಿಕ ಸರಣಿ ಜಯ ದಾಖಲಿಸಿತ್ತು.

Shwetha M