ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರದ ಆತಂಕ- ಕರ್ನಾಟಕದ ಗಡಿಭಾಗಗಳಲ್ಲಿ ಹೈಅಲರ್ಟ್
ಕೇರಳದಲ್ಲಿ ಹಕ್ಕಿ ಜ್ವರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕೇಂದ್ರದ ಮಾರ್ಗಸೂಚಿಯಂತೆ ಎಲ್ಲಾ ಕ್ರಮಗಳನ್ನು ಕೈಗೊಂಡರೂ ಕೂಡಾ ಹಕ್ಕಿ ಜ್ವರ ಕಡಿಮೆಯಾಗಿಲ್ಲ. ಈಗಾಗಲೇ ಸಾವಿರಾರು ಕೋಳಿಗಳು ಜ್ವರಕ್ಕೆ ಬಲಿಯಾಗಿವೆ. ನೆರೆ ರಾಜ್ಯದಲ್ಲಿ ಹಕ್ಕಿಜ್ವರದ ಆತಂಕ ಹೆಚ್ಚಾಗಿರುವಾಗಲೇ ಕರ್ನಾಟಕದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಬಂಡೀಪುರ ಅಭಯಾರಣ್ಯದ ಕೇರಳ ಕರ್ನಾಟಕ ಗಡಿ ಮೂಳೆ ಹೊಳೆಯಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಭಯಾರಣ್ಯದ ಬಳಿ ಹಕ್ಕಿ ಜ್ವರ ಭೀತಿಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕೇರಳದಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಇದನ್ನೂ ಓದಿ: ಬಡಕುಟುಂಬಕ್ಕೆ ತಿಂಗಳಿಗೆ 2 ಸಾವಿರ ರೂಪಾಯಿ – ರಾಜ್ಯಸರ್ಕಾರದ ನಿರ್ಧಾರ
ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು, ಕೋಳಿ ತುಂಬಿದ್ದ ವಾಹನಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ನಾಟಿ ಕೋಳಿಗಳು ಸಾವನ್ನಪ್ಪಿದ್ದವು. ಇದರಿಂದ ಹಕ್ಕಿ ಜ್ವರದ ಆತಂಕವಿತ್ತು. ಇದೀಗ ಆ ಕೋಳಿಯ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ರವಾನಿಸಲಾಗಿದೆ. ಸದ್ಯ ಯಾವುದೇ ಭಯಪಡುವ ಅಗತ್ಯವಿಲ್ಲ, ವರದಿ ಬಂದ ನಂತರ ಮತ್ತಷ್ಟು ಸೂಕ್ತ ಕ್ರಮ ವಹಿಸುತ್ತೇವೆ ಎಂದು ಚಾಮರಾಜನಗರದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.