ಬಿಪರ್‌ ಜಾಯ್‌ ಚಂಡಮಾರುತದ ಎಫೆಕ್ಟ್‌ ನಿಂದಾಗಿ ರಾಜ್ಯದಲ್ಲಿ ಶೇ. 71 ರಷ್ಟು ಮಳೆ ಕೊರತೆ!

ಬಿಪರ್‌ ಜಾಯ್‌ ಚಂಡಮಾರುತದ ಎಫೆಕ್ಟ್‌ ನಿಂದಾಗಿ ರಾಜ್ಯದಲ್ಲಿ ಶೇ. 71 ರಷ್ಟು ಮಳೆ ಕೊರತೆ!

ಬೆಂಗಳೂರು: ಕಳೆದ ವಾರ ಅಪ್ಪಳಿಸಿದ ಬಿಪರ್‌ ಜಾಯ್‌ ಚಂಡಮಾರುತದಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿತ್ತು. ತೀರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿತ್ತು. ನೂರಾರು ಮನೆಗಳು ಜಲಾವೃತವಾಗಿತ್ತು. ಗುಜರಾತ್‌ ನಲ್ಲಿ ಒಂದು ವಾರಗಳ ಕಾಲ ಅಬ್ಬರಿಸಿದ್ದ ಬಿಪರ್‌ಜಾಯ್ ಚಂಡಮಾರುತ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಪ್ರಗತಿಯ ಮೇಲೆ ಭಾರಿ ಪರಿಣಾಮ ಬೀರಿದೆ.

ಬಿಪರ್‌ಜಾಯ್‌ ಚಂಡಮಾರುತ ಕಳೆದ ವಾರ ಗುಜರಾತ್‌ನಲ್ಲಿ ತನ್ನ ಅಟ್ಟಹಾಸವನ್ನು ತೋರಿಸಿತ್ತು. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಉಂಟಾಗಿತ್ತು. ಇದೀಗ ಚಂಡಮಾರುತದ ಎಫೆಕ್ಟ್‌ ಕರ್ನಾಟಕದಲ್ಲಿ ಮುಂಗಾರು ಮೇಲೆ ಪ್ರಭಾವ ಬೀರಿದೆ. ಜೂನ್ 1 ರಿಂದ ಕರ್ನಾಟಕದಲ್ಲಿ ಇದುವರೆಗೆ 34.3 ಮಿಮೀ ಮಳೆಯಾಗಿದೆ. ಇದು ಸಾಮಾನ್ಯ ಮಳೆಯ 119.6 ಮಿಮೀ ವಿರುದ್ಧ ಶೇ 71 ರಷ್ಟು ಕೊರತೆಯಾಗಿದೆ. ಇದಕ್ಕೆ ಬಿಪರ್‌ ಜಾಯ್‌ ಚಂಡಮಾರುತವೇ ಪ್ರಮುಖ ಕಾರಣ. ಬಿಪರ್‌ಜಾಯ್ ದಕ್ಷಿಣ ಭಾರತದಿಂದ ತೇವಾಂಶವನ್ನು ಹೀರಿಕೊಂಡು ಈ ಕೊರತೆಯನ್ನು ಉಂಟುಮಾಡಿದೆ ಎಂದು ಐಎಂಡಿ ಹೇಳಿದೆ.

ಇದನ್ನೂ ಓದಿ: ಆದಿಪುರುಷ್ ವಿವಾದ – ಭಾರತೀಯ ಚಲನಚಿತ್ರಗಳು ಕಠ್ಮಂಡುವಿನಲ್ಲಿ ಬ್ಯಾನ್!

ಇನ್ನು ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯ 49 ಸೆಂ.ಮೀ (ಶೇ 72 ನಷ್ಟು ಕೊರತೆ) ಗಳಿಗೆ ಹೋಲಿಸಿದರೆ 13 ಸೆಮೀ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಕೇವಲ 2 ಸೆಂ.ಮೀ (ಸಾಮಾನ್ಯ 7 ಸೆಂ.ಮೀ), ಶೇ 68 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಸಹ ಕೇವಲ 3 ಸೆಂ.ಮೀ ಮಳೆಯೊಂದಿಗೆ (ಸಾಮಾನ್ಯ 9 ಸೆಂ.ಮೀ) ಶೇ 73 ರಷ್ಟು ಕೊರತೆಯನ್ನು ಎದುರಿಸುತ್ತಿದೆ. ಬೆಂಗಳೂರಿನಲ್ಲಿ 3 ಸೆಂ.ಮೀ (ಸಾಮಾನ್ಯ 6 ಸೆಂ.ಮೀ) ಮಳೆಯಾಗುವುದರೊಂದಿಗೆ, ಶೇ 50 ರಷ್ಟು ಕೊರತೆಯೊಂದಿಗೆ ನಗರದಲ್ಲಿ ಸಹ ಪರಿಸ್ಥಿತಿಗಳು ಭಿನ್ನವಾಗಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಈ ಬಗ್ಗೆ ಐಎಂಡಿಯ ಬೆಂಗಳೂರು ನಿರ್ದೇಶಕ ಎ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ. ‘ಬಿಪರ್‌ಜಾಯ್ ಚಂಡಮಾರುತವು ಮಾನ್ಸೂನ್ ಗಾಳಿಯ ಪ್ರಸರಣ ಮಾದರಿಯ ಮೇಲೆ ಪರಿಣಾಮ ಬೀರಿದೆ. ಇದು ಗುಜರಾತ್ ಅನ್ನು ದಾಟಿರುವುದರಿಂದ, ಮುಂಗಾರು ಪುನಶ್ಚೇತನಗೊಳ್ಳುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕದಲ್ಲಿ ಭಾನುವಾರದಿಂದ ವ್ಯಾಪಕ ಮಳೆಯಾಗುತ್ತಿದೆ. ಪಶ್ಚಿಮ ದಿಕ್ಕಿನ ಮಾರುತಗಳು ಮುನ್ನಡೆಯುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಮಾನ್ಸೂನ್ ಮತ್ತಷ್ಟು ಚುರುಕು ಪಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಲಿದೆ’ ಎಂದು ಹೇಳಿದರು.

ಒಂದು ತಿಂಗಳ ಕಾಲ ವಿಸ್ತೃತ ಹವಾಮಾನ ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ಜೂನ್ 21 ರಿಂದ ಎರಡು ವಾರಗಳವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಇಲಾಖೆ ನಿರೀಕ್ಷಿಸುತ್ತಿದೆ. ಮಾನ್ಸೂನ್‌ನ ಮತ್ತಷ್ಟು ಪ್ರಗತಿಗೆ ಪರಿಸ್ಥಿತಿಗಳು ಅನುಕೂಲಕರವಾಗಿವೆ ಮತ್ತು ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಪ್ರಸಾದ್ ಹೇಳಿದರು

suddiyaana