ಶಾಲಾ, ಕಾಲೇಜುಗಳಿಗೆ ರಜೆ.. ನಿವಾಸಿಗಳ ಸ್ಥಳಾಂತರ – ಬಿಪರ್ ಜೋಯ್ ಚಂಡಮಾರುತದ ಹೊಡೆತಕ್ಕೆ ಗುಜರಾತ್ ಗಢಗಢ

ಶಾಲಾ, ಕಾಲೇಜುಗಳಿಗೆ ರಜೆ.. ನಿವಾಸಿಗಳ ಸ್ಥಳಾಂತರ – ಬಿಪರ್ ಜೋಯ್ ಚಂಡಮಾರುತದ ಹೊಡೆತಕ್ಕೆ ಗುಜರಾತ್ ಗಢಗಢ

ಮರಗಿಡಗಳನ್ನೇ ಬುಡಮೇಲಾಗಿಸುತ್ತಿರುವ ಬಿರುಗಾಳಿ.. ಸಿಕ್ಕಿದ್ದೆಲ್ಲವನ್ನೂ ಸರ್ವನಾಶ ಮಾಡುತ್ತಿರುವ ರಕ್ಕಸರೂಪಿ ಅಲೆಗಳು.. ಬಿಪರ್ ಜೋಯ್ ಚಂಡಮಾರುತ ಅಕ್ಷರಶಃ ರಣಚಂಡಿ ಅವತಾರ ತಾಳಿದೆ.. ಸಮುದ್ರತಟಗಳು ಮೃತ್ಯುಕೂಪಗಳಾಗಿ ಬದಲಾಗಿವೆ.. ಕ್ಷಣಕ್ಷಣಕ್ಕೂ ಕರಾಳವಾಗುತ್ತಿರೋ ಬಿಪರ್‌ಜೋಯ್ ಚಂಡಮಾರುತದಿಂದಾಗಿ ಕೇರಳ, ಗುಜರಾತ್ ಮತ್ತು ಮುಂಬೈನಲ್ಲಿ ಪ್ರಕ್ಷುಬ್ಧತೆ ಉಂಟಾಗಿದೆ..  ಗುಜರಾತ್‌ನ ಕಚ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ, ರಾಜ್‌ಕೋಟ್, ಜುನಾಗಢ್ ಮತ್ತು ಮೊರ್ಬಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭಾರೀ ಮಳೆಯಾಗುತ್ತಿದೆ.. ಜೂನ್ 15 ರವರೆಗೆ ಪೂರ್ವ-ಮಧ್ಯ, ಪಶ್ಚಿಮ-ಮಧ್ಯ ಮತ್ತು ಉತ್ತರ ಅರೇಬಿಯನ್ ಸಮುದ್ರದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ರೈಲು ಹಳಿ ಮೇಲೆ ಬಿದ್ದ ಬೃಹದಾಕಾರದ ಬಂಡೆ – 2 ಗಂಟೆ ನಿಂತಲ್ಲೇ ನಿಂತ ಪ್ಯಾಸೆಂಜರ್‌ ಟ್ರೈನ್‌

ಈಗಾಗಲೇ ಕಚ್ ಜಿಲ್ಲೆಯ ಅಧಿಕಾರಿಗಳು ತಗ್ಗು ಪ್ರದೇಶಗಳ ನಿವಾಸಿಗಳನ್ನ ತಾತ್ಕಾಲಿಕವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ತಿಥಾಲ್ ಬೀಚ್ ಅನ್ನು ಎತ್ತರದ ಅಲೆಗಳ ಕಾರಣ ಬಂದ್ ಮಾಡಲಾಗಿದೆ. ಗುಜರಾತ್, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ದ್ವಾರಕಾದಲ್ಲಿ ಸಮುದ್ರದಂಚಿನ ಮನೆಗಳಲ್ಲಿರುವ 1,300ಕ್ಕೂ ಹೆಚ್ಚು ಜನ್ರನ್ನ ರಕ್ಷಣೆ ಮಾಡಲಾಗಿದೆ. 3 ಮೀಟರ್ ಎತ್ತರಕ್ಕೆ ಅಲೆಗಳು ಚಿಮ್ಮುತ್ತಿದ್ದು, ಸಮುದ್ರದಂಚಿನ ಸಣ್ಣ ಮನೆಗಳು ಅಲೆಗಳಿಗೆ ಆಹುತಿಯಾಗಿವೆ. ಚಂಡಮಾರುತದ ವೇಗ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರೋದ್ರಿಂದ ಗುಜರಾತ್ ನ ಕಛ್, ಜಮ್ನಾಗರ್, ಜುನಾಗಢ್, ದ್ವಾರಕಾ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

suddiyaana