ಕಾರವಾರದ ಕಡಲತೀರಗಳಲ್ಲಿ ಬಿಪರ್‌ಜಾಯ್ ಎಫೆಕ್ಟ್ – ಅಲೆಗಳ ಆರ್ಭಟಕ್ಕೆ ಕೊಚ್ಚಿಹೋದ ತಡೆಗೋಡೆಗಳು
ಬಿಪರ್‌ಜಾಯ್ ಚಂಡಮಾರುತ ಕರಾವಳಿಯ ಸಮುದ್ರತೀರಗಳಲ್ಲಿ ಕೋಲಾಹಲ ಸೃಷ್ಟಿಸಿದೆ. ಸಮುದ್ರತೀರದ ಪ್ರದೇಶಗಳ ನಿವಾಸಿಗಳು ಕಂಗಾಲಾಗಿದ್ದಾರೆ. ಆಳೆತ್ತರದ ಅಲೆಗಳು ಸಮುದ್ರತೀರದಲ್ಲಿ ಆರ್ಭಟಿಸುತ್ತಿದೆ. ಅದರಲ್ಲೂ ಕಾರವಾರದ ಸಮುದ್ರ ತೀರಗಳಲ್ಲಿ ಅಲೆಗಳ ಆರ್ಭಟ ಭೀತಿಹುಟ್ಟಿಸುವಂತಿದೆ. ಮಾಜಾಳಿ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಇದನ್ನೂ ಓದಿ: ಅಲೆಗಳ ಅಬ್ಬರ.. ಬಿರುಗಾಳಿ ಆರ್ಭಟ – ಸೈಕ್ಲೋನ್ ಎಫೆಕ್ಟ್ ಗೆ ಕರ್ನಾಟಕದ ಕರಾವಳಿ ತತ್ತರ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಚೆಲ್ಲಾಪಿಲ್ಲಿಯಾಗಿದೆ. ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಜೋರಾಗಿದೆ. ಕಡಲ್ಕೊರೆತ ತಪ್ಪಿಸಲು ಕಟ್ಟಿದ್ದ ತಡೆಗೋಡೆ ಸಮುದ್ರ ಪಾಲಾಗಿದ್ದು, ಗಿಡಗಳ ಬೇರುಗಳು ಆಚೆ ಬಂದಿವೆ.
ಬಿಪರ್‌ಜಾಯ್ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರಗಳು ಖಾಲಿ ಖಾಲಿಯಾಗಿವೆ. ಗೋಕರ್ಣ, ಮುರುಡೇಶ್ವರ, ಕಾರವಾರ ಕಡಲತೀರಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. 4 ರಿಂದ 5 ಮೀಟರ್ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.