ಪ್ರಧಾನಿ ಮೋದಿಯನ್ನ ಭೇಟಿಯಾದ ಬಿಲ್ ಗೇಟ್ಸ್ – ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹೇಳಿದ್ದೇನು..?

ಪ್ರಧಾನಿ ಮೋದಿಯನ್ನ ಭೇಟಿಯಾದ ಬಿಲ್ ಗೇಟ್ಸ್ – ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹೇಳಿದ್ದೇನು..?

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದಾರೆ. ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸವಾಲುಗಳ ಬಗ್ಗೆ ಇಬ್ಬರು ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಬಗ್ಗೆ ಬಿಲ್ ಗೇಟ್ಸ್ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಗತ್ತು ಹಲವಾರು ಸವಾಲುಗಳನ್ನು ಹೊಂದಿರುವ ಸಮಯದಲ್ಲಿ, ಭಾರತದಂತಹ ಕ್ರಿಯಾತ್ಮಕ ಮತ್ತು ಸೃಜನಶೀಲ ಸ್ಥಳಕ್ಕೆ ಭೇಟಿ ನೀಡುವುದು ಸ್ಪೂರ್ತಿದಾಯಕವಾಗಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ಬಗ್ಗೆಯು ತಿಳಿಸಿರುವ ಬಿಲ್ ಗೇಟ್ಸ್ ನನ್ನ ಪ್ರವಾಸದ ಪ್ರಮುಖ ಅಂಶವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಾಗಿದೆ. ಅವರು ತಮ್ಮ ಸಮಯವನ್ನು ನನ್ನ ಭೇಟಿಗೆ ಇಟ್ಟಿರುವುದು ನನಗೆ ತುಂಬಾ ಖುಷಿ ವಿಚಾರವಾಗಿದೆ. ಭಾರತದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ವಿಜ್ಞಾನ ಮತ್ತು ನಾವೀನ್ಯತೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ನಾವು ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :  67ನೇ ವಯಸ್ಸಿನಲ್ಲಿ ಬಿಲ್ ಗೇಟ್ಸ್ ಡೇಟಿಂಗ್ – ಪೌಲಾ ಹರ್ಡ್ ಜೊತೆ ಪ್ರೀತಿಯಲ್ಲಿ ಬಿದ್ದ ಬಿಲೇನಿಯರ್

ಸಾಂಕ್ರಾಮಿಕ ರೋಗದಿಂದಾಗಿ ನಾನು ಕಳೆದ ಮೂರು ವರ್ಷಗಳಿಂದ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಭಾರತಕ್ಕೆ ಬಂದು ಪ್ರಧಾನಿ ಮೋದಿ ಮತ್ತು ನಾನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ವಿಶೇಷವಾಗಿ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಭಾರತದ ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಬಿಲ್ ಗೇಟ್ಸ್ ಮಾತನಾಡಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡುವ ಮೂಲಕ ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲು ಸಂತೋಷವಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ, ಅಭಿವೃದ್ಧಿ ಮತ್ತು ಹವಾಮಾನದಂತಹ ಕ್ಷೇತ್ರಗಳಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ ಬಿಲ್ ಗೇಟ್ಸ್ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಿದಾಗ ಸಾಧ್ಯವಿರುವ ಬಗ್ಗೆ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಭಾರತವು ಸಾಕಷ್ಟು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಲಸಿಕೆಗಳನ್ನು ತಯಾರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ, ಈ ಕಾರ್ಯಕ್ಕೆ ಗೇಟ್ಸ್ ಫೌಂಡೇಶನ್‌ ಕೂಡ ಸಾಕಷ್ಟು ಬೆಂಬಲವನ್ನು ನೀಡಿದೆ. ಭಾರತದಲ್ಲಿ ಉತ್ಪಾದಿಸಲಾದ ಲಸಿಕೆಗಳು ಕೊರೊನಾದಿಂದ ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಪ್ರಪಂಚದಾದ್ಯಂತ ಇತರ ರೋಗಗಳನ್ನು ತಡೆಗಟ್ಟಿವೆ ಎಂದು ಹೇಳಿದ್ದಾರೆ.

suddiyaana