ಎಕ್ಸ್‌ಪ್ರೆಸ್‌ವೆಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 100ಕ್ಕೂ ಹೆಚ್ಚು ವಾಹನ ಸವಾರರ ಮೇಲೆ ಕೇಸ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯುವ ಬಿಟ್ಟಿನಲ್ಲಿ ಬೈಕ್, ಆಟೋ ಹಾಗೂ ಟ್ರ್ಯಾಕ್ಟರ್ ಸೇರಿ ಇತರ ವಾಹನಗಳಿಗೆ ಆ.1ರಿಂದ ನಿಷೇಧ ಹೇರಲಾಗಿದೆ. ಆದರೂ ಕೂಡ ಕೆಲವರು ನಿಯಮ ಉಲ್ಲಂಘಿಸಿ ಬೈಕ್, ಆಟೋಗಳನ್ನು ಹೆದ್ದಾರಿಗೆ ಇಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ತೀವ್ರ ತಪಾಸಣೆ ನಡೆಸಿ ಮೊದಲ ದಿನವೇ ಬರೋಬ್ಬರಿ 137 ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇನ್ನುಮುಂದೆ ನಕಲಿ ಔಷಧಿಗಳ ಆಟ ನಡೆಯಲ್ಲ – ಔಷಧಿಗಳ ಮೇಲೆ QR ಕೋಡ್ ಕಡ್ಡಾಯ!
ನಗರ ಸಂಚಾರಿ ಪೊಲೀಸರು ಮೊದಲ ದಿನ ರಾಮನಗರದ 9 ಎಂಟ್ರಿ ಹಾಗೂ ಎಕ್ಸಿಟ್‍ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಹೆದ್ದಾರಿಯಲ್ಲಿ ಬಂದ ಸುಮಾರು 137 ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ. ಮೊದಲ ದಿನ ಬರೋಬ್ಬರಿ 68,500 ರೂ. ದಂಡ ವಸೂಲಿ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಪೊಲೀಸರು ಫೈನ್ ಹಾಕುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಕೆಲ ವಾಹನ ಸವಾರರು ವಾಹನವನ್ನು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನೂ ಕೆಲ ವಾಹನ ಸವಾರರು ದಂಡ ಕಟ್ಟಿ ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ಬುಧವಾರ ಕೂಡ ಪೊಲೀಸರು ಹೆದ್ದಾರಿಯಲ್ಲಿ ನಿಗಾ ವಹಿಸಲಿದ್ದಾರೆ.
ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಹಲವಾರು ಅಪಘಾತಗಳು ನಡೆದಿದ್ದವು. ಈ ಅಪಘಾತದಲ್ಲಿ ಜೀವ ಹಾನಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯಲು ಬೈಕ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿಷೇಧಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ.