ಬೈಕ್ ಡಿಕ್ಕಿಯಾಗಿ ಯುವಕ ಸಾವು – ಸ್ಥಳಕ್ಕೆ ತೆರಳುತ್ತಿದ್ದ ಕುಟುಂಬಸ್ಥರು ಕೂಡ ಅಪಘಾತದಲ್ಲಿ ನಿಧನ!
ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ದೇಶದಾದ್ಯಂತ ಶಾಲಾ – ಕಾಲೇಜುಗಳಲ್ಲಿ, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಜನರ ಓಡಾಟ ಹೆಚ್ಚಾಗಿದೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಒಂದು ಕಡೆ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದರೆ, ಇನ್ನೊಂದು ಕಡೆ ವಿಪರೀತ ಚಳಿಯಿಂದಾಗಿ ಮಂಜು ಮುಸುಕಿದ ವಾತಾವರಣವಿದೆ. ಇದರಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಇದೀಗ ಇಲ್ಲೊಂದು ಕಡೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ವ್ಯಕ್ತಿಗೆ ಬೈಕ್ ಗುದ್ದಿದ ಪರಿಣಾಮ ಮೃತಪಟ್ಟಿದ್ದಾನೆ. ಈ ಮಾಹಿತಿ ತಿಳಿದ ಕುಟುಂಬದ ಸದಸ್ಯರು ಕಾರಿನ ಮೂಲಕ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಈ ಕಾರು ಕೂಡ ಅಪಘಾತಕ್ಕೀಡಾಗಿದ್ದು, ಆತನ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿದ್ದು ಇರಾನ್! – ಸ್ಫೋಟಕ ಹೇಳಿಕೆ ನೀಡಿದ ಅಮೆರಿಕ!
ಹೌದು, ಈ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯ NH 186ರಲ್ಲಿ ನಡೆದಿದೆ. ವೆಂಪಹಾಡ್ ಬಳಿ 19 ವರ್ಷದ ರಾಮಾವತ್ ಕೇಶವ್ ಭಾನುವಾರ (ಡಿ.24) ರಾತ್ರಿ ನಡೆದುಕೊಂಡು ತೆರಳುತ್ತಿದ್ದ. ಇದೇ ವೇಳೆ 28 ವರ್ಷದ ನಾಗರಾಜು ಬೈಕ್ ಮೂಲಕ ಆಗಮಿಸಿದ್ದಾರೆ. ಮಂಜು ಮುಸುಕಿದ ವಾತಾವರಣ ಕಾರಣ ಪಾದಾಚಾರಿ ಕೇಶವ್ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಹಾಗೂ ಕೇಶವ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ರಮಾವತ್ ಕೇಶವ್ ಕುಟುಂಬಸ್ಥರಿಗೆ ಅಪಘಾತದ ಮಾಹಿತಿ ಸಿಕ್ಕಿದೆ. ಆಘಾತಕಾರಿ ಮಾಹಿತಿ ಸಿಕ್ಕ ಬೆನ್ನಲ್ಲೇ ಕುಟುಂಬದ 7 ಸದಸ್ಯರು ಕಾರಿನ ಮೂಲಕ ಸ್ಥಳಕ್ಕೆ ಧಾವಿಸಿದ್ದಾರೆ. ಆದ್ರೆ ವಿಧಿಯ ಆಟಕ್ಕೆ ರಮಾವತ್ ಕೇಶವ್ ಕುಟುಂಬದ ಮೂವರು ಸದಸ್ಯರು ಬಲಿಯಾಗಿದ್ದಾರೆ.
ಪಾರ್ವತಿಪುರಂ ಬಳಿ ರಮಾವತ್ ಕುಟುಂಬಸ್ಥರ ಕಾರು ಆಯಿಲ್ ಟ್ಯಾಂಕರ್ಗೆ ಡಿಕ್ಕಿಯಾಗಿದೆ. ಇಲ್ಲೂ ಕೂಡ ಮಂಜು ಕವಿದ ವಾತಾರಣದ ಕಾರಣ ಚಾಲನೆ ವೇಳೆ ಸ್ಪಷ್ಟ ಗೋಚರತೆ ಇರಲಿಲ್ಲ. ಹೀಗಾಗಿ ಅಪಘಾತದ ತೀವ್ರತೆ ಹೆಚ್ಚಾಗಿದೆ. ಸ್ಥಳದಲ್ಲೇ ಮೂವರು ಕುಟಂಬ ಸದಸ್ಯರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ರಾಮಾವತ್ ಪಾಂಡೆ(40), ರಾಮಾವತ್ ಗಾನ್ಯ(38) ಹಾಗೂ ರಾಮಾವತ್ ಬಿಜ್ಜು(38) ಮೃತ ದುರ್ದೈವಿಗಳು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.