ಚುನಾವಣೆ ಹೊಸ್ತಿಲಲ್ಲೇ ಬಿಹಾರ ಜನತೆಗೆ ಬಂಪರ್! – ಬಿಸಿಯೂಟ ತಯಾರಕರು, ಶಿಕ್ಷಕರ ಗೌರವಧನ ಡಬಲ್!

ಬಿಹಾರದಲ್ಲಿ ಈ ವರ್ಷಾಂತ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣ ಅಖಾಡಕ್ಕಿಳಿಯಲು ಸಜ್ಜಾಗಿದ್ದು ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೀಗ ಬಿಹಾರ ಮುಖ್ಯಮಂತ್ರಿ ಅಲ್ಲಿನ ಜನತೆಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಿಎಂ ನಿತೀಶ್ ಕುಮಾರ್ ಈಗ ಬಿಸಿಯೂಟ ತಯಾರಕರು, ದೈಹಿಕ, ಆರೋಗ್ಯ ಶಿಕ್ಷಕರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ!
ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ, ವಿದ್ಯುತ್ ಸೇರಿದಂತೆ ಈಗಾಗಲೇ ಹಲವು ಉಚಿತ ಭರವಸೆಯನ್ನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ ಮಾಡ್ತಿದೆ. ಇದೀಗ ಬಿಸಿಯೂಟ ತಯಾರಕರು, ರಾತ್ರಿ ಕಾವಲುಗಾರರು ಹಾಗೂ ಗೌರವ ಧನವನ್ನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ಅಡುಗೆಯವರು (ಬಿಸಿಯೂಟ ತಯಾರಕರು), ರಾತ್ರಿ ಕಾವಲುಗಾರರು ಮತ್ತು ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು, ಈ ಕಾರ್ಮಿಕರ ಗೌರವಧನವನ್ನ ದ್ವಿಗುಣಗೊಳಿಸುವ ಮೂಲಕ ಗೌರವಾನ್ವಿತ ಹೆಚ್ಚಳ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ನಿತೀಶ್ ಪೋಸ್ಟ್ ಹಂಚಿಕೊಂಡಿದ್ದಾರೆ.
2005ರ ನವೆಂಬರ್‌ನಲ್ಲಿ ನಮ್ಮ ಸರ್ಕಾರ ರಚನೆಯಾದಾಗಿನಿಂದ, ನಾವು ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. 2005 ರಲ್ಲಿ ಶಿಕ್ಷಣದ ಒಟ್ಟು ಬಜೆಟ್ 4,366 ಕೋಟಿ ರೂ.ಗಳಾಗಿದ್ದು, ಈಗ ಅದು 77,690 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯ ಶಿಕ್ಷಕರ ನೇಮಕಾತಿ, ಹೊಸ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ಕಂಡುಬಂದಿದೆ.
ಶಿಕ್ಷಣ ಇಲಾಖೆ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿ ಕೆಲಸ ಮಾಡುವ ಅಡುಗೆಯವರ ಗೌರವಧನವನ್ನ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಬಿಸಿಯೂಟ ತಯಾರಕರ ಗೌರವಧನವನ್ನ 1,650 ರೂ.ಗಳಿಂದ 3,300 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಮಾಧ್ಯಮಿಕ/ಉನ್ನತ ಶಿಕ್ಷಣ ಶಾಲೆಯಲ್ಲಿ ಕೆಲಸ ಮಾಡುವ ರಾತ್ರಿ ಕಾವಲುಗಾರರ ಗೌರವಧನವನ್ನ 5000 ರಿಂದ 10,000 ರೂ.ಗಳಿಗೆ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೇ, ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರ ಗೌರವಧನವನ್ನ 8 ಸಾವಿರದಿಂದ 16,000 ರೂ. ಗಳಿಗೆ, ವಾರ್ಷಿಕ ವೇತನವನ್ನ 200 ರೂ.ಗಳಿಂದ 400 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ಕಾರ್ಯನಿರತ ಸಿಬ್ಬಂದಿ ಮನೋಸ್ಥೈರ್ಯವನ್ನ ಹೆಚ್ಚಿಸುತ್ತದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

ನೋಡಿರಿ

