ಬಿಹಾರದಲ್ಲಿ ಡಿಲಿಟ್ ಮಾಡಿದ ಮಾಹಿತಿ ಕೊಡಿ ಎಂದ ಸುಪ್ರೀಂ – ಆಗಲ್ಲ ಎಂದ ಚುನಾವಣಾ ಆಯೋಗ

ಬಿಹಾರದ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಮತ್ತು ನವೆಂಬರ್ 14ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ನವೆಂಬರ್ 6 ಮತ್ತು ನ. 11ಕ್ಕೆ ಚುನಾವಣೆ ನಡೆಯಲಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಂತರ ಚುನಾವಣೆ ನಡೆಯುತ್ತಿರುವುದರಿಂದ, ಬಿಹಾರದ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ, ಸರ್ವೋಚ್ಚ ನ್ಯಾಯಾಲಯ, ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆಯೊಂದನ್ನು ನೀಡಿದೆ.
ಬಿಹಾರದ ಚುನಾವಣೆಯ ಆಸುಪಾಸಿನಲ್ಲೇ, ಕೇಂದ್ರ ಚುನಾವಣಾ ಆಯೋಗ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ನಡೆಸಲು ಮುಂದಾಗಿತ್ತು. ಇದಕ್ಕೆ, ಕಾಂಗ್ರೆಸ್, ಆರ್ಜೆಡಿ ಸೇರಿದಂತೆ, ಮಹಾಘಟಬಂಧನ್ ಒಕ್ಕೂಟದ ಪಾರ್ಟಿಗಳು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿತ್ತು. ಜೊತೆಗೆ, ವೋಟ್ ಚೋರಿ ಎಂದು ವೋಟರ್ ಅಧಿಕಾರ್ ಯಾತ್ರೆಯನ್ನು ನಡೆಸಿತ್ತು. ಕೇಂದ್ರ ಚುನಾವಣಾ ಆಯೋಗವು ಪರಿಷ್ಕರಣೆ ಪಟ್ಟಿಯನ್ನು ಅಂತಿಮಗೊಳಿಸಿ, ಮತದಾರರ ಪಟ್ಟಿಯಿಂದ 3.66 ಲಕ್ಷ ಮತದಾರರನ್ನು ಡಿಲಿಟ್ ಮಾಡಿತ್ತು. ಈ ಸಂಬಂಧ, ಏನಾದರೂ ತಕರಾರು ಇದ್ದರೆ, ದೂರನ್ನು ಸಲ್ಲಿಸಬಹುದು ಎಂದು ಜನರಲ್ಲಿ ಮತ್ತು ವಿವಿಧ ಪಾರ್ಟಿಗಳಲ್ಲೂ ಕೇಳಿಕೊಂಡಿತ್ತು.
ಈಗ, ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿದೆ. SIR ಸಂಬಂಧಿಸಿದಂತೆ, ಕಳೆದ ಕೆಲವು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು (ಅ. 7), ಮತ್ತೆ ವಿಚಾರಣೆ ನಡೆದಿದೆ. ಆ ವೇಳೆ, ಡಿಲಿಟ್ ಮಾಡಲಾಗಿರುವ ಮತದಾರರ ಮಾಹಿತಿಯನ್ನು ಹಂಚಿಕೊಳ್ಳುವಂತೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ನ್ಯಾಯಾಲಯದ ಸೂಚನೆಗೆ ಚುನಾವಣಾ ಆಯೋಗ ಆಕ್ಷೇಪ ಎತ್ತಿದೆ. ಪರಿಷ್ಕರಣೆಯಲ್ಲಿ, ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾದ ಹೆಚ್ಚಿನ ಹೆಸರುಗಳು ಹೊಸದಾಗಿ ಸೇರ್ಪಡೆಗೊಂಡಿದ್ದು ಮತ್ತು ಕೆಲವು ಹಳೆಯ ಮತದಾರರ ಹೆಸರು ರದ್ದಾಗಿವೆ ಎಂದು ನ್ಯಾಯಾಲಯಕ್ಕೆ, ಆಯೋಗ ತಿಳಿಸಿತು.
ನ್ಯಾಯಾಲಯದ ಸೂಚನೆಗೆ ವಾದಿಸಿದ ಆಯೋಗದ ಪರ ವಕೀಲರು, ಡಿಲಿಟ್ ಮಾಡಲಾಗಿರುವ ಪಟ್ಟಿಗೆ ಸಂಬಂಧಿಸಿದಂತೆ ಒಂದೇ ಒಂದು ದೂರು ಹೊರಗಿಡಲಾದ ಮತದಾರರಾಗಲಿ ಅಥವಾ ಯಾವುದೇ ಪಾರ್ಟಿಯಿಂದ ಬಂದಿಲ್ಲ. ಅಥವಾ, ಮೇಲ್ಮನವಿಯೂ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಆಯೋಗ ಸ್ಪಷ್ಟನೆಯನ್ನು ನೀಡಿದೆ.

ನೋಡಿರಿ

