ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಶೋ ಶುರು – ಪ್ರತ್ಯೇಕ ರೂಮ್‌ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್

ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಶೋ ಶುರು – ಪ್ರತ್ಯೇಕ ರೂಮ್‌ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಟ್ವಿಸ್ಟ್ ಸಿಕ್ಕಿದೆ. ಎಲ್ಲಾ ಸ್ಪರ್ಧಿಗಳು ಒಂದೇ ದಿನ ಔಟ್ ಆಗಿದ್ದಾರೆ. ಅಂದರೆ, ಬಿಗ್​​ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಸ್ಥಗಿತಗೊಂಡಿದೆ.

ಇದನ್ನೂ ಓದಿ:ಬಿಗ್‌ ಬಾಸ್‌ ಮನೆಗೆ ಬೀಗ – 2 ವಾರಕ್ಕೆ ಶೋ ಬಂದ್

ಬಿಗ್​​ಬಾಸ್ ಸ್ಪರ್ಧಿಗಳು ತಮ್ಮ ಪಾಡಿಗೆ ಟಾಸ್ಕ್, ಫೈಟಿಂಗ್ ಮಾಡುತ್ತಾ ಇರುವಾಗಲೇ ಬಿಗ್‌ಬಾಸ್ ಮೇಲಿನ ಬಾಸ್ ಶಾಕ್ ಕೊಟ್ಟಿದ್ದಾರೆ. ಸ್ಪರ್ಧಿಗಳಿಗೆ ಯಾವಾಗಲೂ ಟಾಸ್ಕ್ ನೀಡುತ್ತಿದ್ದರೆ, ಈಗ ಬಿಗ್‌ಬಾಸ್‌ಗೆ ಶಾಕ್ ಸಿಕ್ಕಿದೆ. ಕನ್ನಡ ಬಿಗ್​​ಬಾಸ್ ಸೀಸನ್ 12 ಬಂದ್ ಮಾಡಲಾಗಿದೆ. ಮಾಲಿನ್ಯ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬಿಗ್​​ಬಾಸ್ ಮನೆ ಇರುವ ಜಾಲಿವುಡ್ ಸ್ಟುಡಿಯೋ ಅನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿದ್ದ ಎಲ್ಲ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿದೆ. ಆದರೆ ರೆಸಾರ್ಟ್​​​ನಲ್ಲಿಯೂ ಸಹ ಬಿಗ್​​ಬಾಸ್ ಸ್ಪರ್ಧಿಗಳಿಗೆ ಕೆಲವು ಕಠಿಣ ನಿಯಮಗಳನ್ನು ಹೇರಲಾಗಿದ್ದು, ಅಲ್ಲಿಯೂ ಬಿಗ್​​ಬಾಸ್ ಶೋ ನಡೆಸಲಾಗುತ್ತಿದೆ.

ಈಗಲ್ ಟನ್ ರೆಸಾರ್ಟ್​​​ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸುಮಾರು 12 ಕೋಣೆಗಳನ್ನು ಸ್ಪರ್ಧಿಗಳಿಗಾಗಿ ಬುಕ್ ಮಾಡಲಾಗಿದೆ. 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿ ಇರಿಸಲಾಗಿದೆ. ಲಭ್ಯವಿರುವ ಮಾಹಿತಿಯಂತೆ, ಬಿಗ್​​ಬಾಸ್ ಸ್ಪರ್ಧಿಗಳ ಕೋಣೆಯಲ್ಲಿರುವ ಟಿವಿಗಳನ್ನು ತೆಗೆದು ಹಾಕಲಾಗಿದೆ. ಹೊರಗಿನ ಪ್ರಪಂಚದೊಂದಿಗೆ ಸಂಪರ್ಕವಿಲ್ಲದೆ ಬಿಗ್​​ಬಾಸ್ ಸ್ಪರ್ಧಿಗಳು ರೆಸಾರ್ಟ್​​ನಲ್ಲಿ ಇರಬೇಕಿದೆ. ರೆಸಾರ್ಟ್​​ಗೆ ಕರೆದುಕೊಂಡು ಬಂದ ಬಳಿಕ ಸ್ಪರ್ಧಿಗಳೊಟ್ಟಿಗೆ ಬಿಗ್​​ಬಾಸ್ ಆಯೋಜಕರು ಸಭೆ ನಡೆಸಿದ್ದು, ಪರಿಸ್ಥಿತಿ ವಿವರಿಸಿದ್ದಾರೆ. ಎಲ್ಲ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಹಾಗೂ ರೆಸಾರ್ಟ್​​ನಲ್ಲಿ ಇದ್ದಾಗಲೂ ಸಹ ಕೆಲವು ನಿಯಮಗಳ ಪಾಲನೆ ಮಾಡಬೇಕೆಂದು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಟಿವಿ ವೀಕ್ಷಿಸುವಂತಿಲ್ಲ. ಮೊಬೈಲ್ ಬಳಕೆ ಇಲ್ಲ, ಬಿಗ್​​ಬಾಸ್ ಸ್ಪರ್ಧಿಗಳು ಮತ್ತು ಆಯೋಜಕರ ಹೊರತಾಗಿ ಇನ್ಯಾರೊಂದಿಗೂ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ರೆಸಾರ್ಟ್​​ನ ಸಿಬ್ಬಂದಿಯ ಜೊತೆಗೂ ಮಾತುಕತೆ ಆಡುವಂತಿಲ್ಲ.

ಆಯೋಜಕರು ಮತ್ತು ಜಾಲಿವುಡ್ ಸ್ಟುಡಿಯೋನವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಒಂದೊಮ್ಮೆ ನ್ಯಾಯಾಲಯದಲ್ಲಿ ಹಿನ್ನಡೆ ಆದಲ್ಲಿ, ಹೊರ ರಾಜ್ಯದಲ್ಲಿ ರೆಡಿ ಇರುವ ಸೆಟ್​​ಗೆ ಬಿಗ್​​ಬಾಸ್ ಕನ್ನಡ ಕಾರ್ಯಕ್ರಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಸಲಿಗೆ ಆರಂಭದ ಮೂರು ಶೋಗಳು ಹೊರ ರಾಜ್ಯಗಳಲ್ಲಿಯೇ ನಡೆಸಲಾಗಿತ್ತು. ಆ ನಂತರ ಸುದೀಪ್ ಒತ್ತಾಸೆಯ ಕಾರಣಕ್ಕೆ ಕರ್ನಾಟಕದಲ್ಲಿಯೇ ಬಿಗ್​​ಬಾಸ್ ಮನೆ ನಿರ್ಮಾಣ ಆರಂಭಿಸಲಾಯ್ತು. ಈಗ ಇಲ್ಲಿ ಸಮಸ್ಯೆ ಆಗಿರುವ ಕಾರಣ ಮತ್ತೆ ಹೊರರಾಜ್ಯಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ.

Sulekha