ಸೋನು ಶ್ರೀನಿವಾಸ್ ಗೌಡ ಅರೆಸ್ಟ್ – ಎಫ್ಐಆರ್ನಲ್ಲಿ ಉಲ್ಲೇಖವಾದ ವಿಚಾರಗಳೇನು?
ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಗೌಡರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅರೆಸ್ಟ್ – ಜೈಲಿನಿಂದಲೇ ಅಧಿಕಾರ ನಡೆಸಲು ನಿರ್ಧಾರ!
ಕಳೆದ ಕೆಲವು ದಿನಗಳ ಹಿಂದೆ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮಗು ದತ್ತು ಪಡೆದಿರುವ ಹೇಳಿಕೊಂಡಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಟ್ರೋಲ್ ಕೂಡ ಆಗಿದ್ದರು. ಇದೀಗ ಆಕೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಇದೀಗ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಬಂಧನ ಮಾಡಿದ್ದಾರೆ.
‘ಮೂರು ತಿಂಗಳಿಂದ ಪಾಸಿಟಿವ್ ಆಗಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುಶಃ ಇವಳನ್ನು ದತ್ತು ತೆಗೆದುಕೊಂಡಿದ್ದಕ್ಕೋ ಏನೋ’ ಎಂದು ಸೋನು ಶ್ರೀನಿವಾಸ್ ಗೌಡ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದರು. ‘ನಾನು ಅಪಾರ್ಟ್ಮೆಂಟ್ ಕೆಳಗೆ ನಾಯಿಗೆ ಬಿಸ್ಕಿಟ್ ಹಾಕುವಾಗ ಇವಳು ಸಿಕ್ಕಿದ್ದಳು. ಅವಳಿಗೆ ಚಾಕೋಲೇಟ್ ಕೊಡಿಸಿದೆ. ನಂತರ ಶಾಪಿಂಗ್ ಹೋದೆವು. ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿದಳು. ನಾನು ದತ್ತು ತೆಗೆದುಕೊಳ್ಳುವುದಕ್ಕೂ ಮೊದಲೇ ಅವಳಿಗೆ ಚೈನ್ ಕೊಡಿಸಿದ್ದೆ’ ಎಂದು ಹೇಳಿಕೊಂಡಿದ್ದರು ಸೋನು ಶ್ರೀನಿವಾಸ್ ಗೌಡ.
‘ನಾನು ಅವಳ ಅಮ್ಮನ ಬಳಿ ದತ್ತು ಕೊಡುವಂತೆ ಕೇಳಿದೆ. ಇದನ್ನು ಕೇಳಿ ಅವಳ ತಾಯಿ ರಾಯಚೂರಿಗೆ ಹೋದರು. ಮಗುವಿಗೆ ನಾನಿಲ್ಲದೆ ಜ್ವರ ಬಂದಿತ್ತು. ಫೋನ್ ಮೂಲಕ ಸೇವಂತಿ ಬಳಿ ಮಾತನಾಡಿದೆ. ನಂತರ ಅವಳನ್ನು ಕರೆದುಕೊಂಡು ಬಂದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು 3 ತಿಂಗಳು ಬೇಕು. ಅವಳ ಅಪ್ಪ ಅಮ್ಮನಿಗೆ ಒಪ್ಪಿಗೆ ಇದೆ. ನನಗೂ ಒಪ್ಪಿಗೆ ಇದೆ. ಕಾನೂನು ಕ್ರಮ ನಡೆಯುತ್ತಿದೆ’ ಎಂದು ಸೋನು ಹೇಳಿದ್ದರು.