ಬಿಗ್‌ಬಾಸ್ ಸೀಸನ್ 11 ಶುರು? – ರೀಲ್ಸ್ ರಾಣಿ ರೇಷ್ಮಾ, ಮಾನಸಾ, ರಾಘು
ದೊಡ್ಮನೆಗೆ ಎಂಟ್ರಿ ಕೊಡೋರು ಇವರೇನಾ?

ಬಿಗ್‌ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಮುಗಿದಿದೆ. ಶೋ ಮುಗಿದು ಇಷ್ಟು ಟೈಮ್ ಆದ್ರೂ ಕೂಡ ಬಿಗ್‌ಬಾಸ್ ಸ್ಪರ್ಧಿಗಳು ಇನ್ನೂ ಶೈನ್ ಆಗ್ತಿದ್ದಾರೆ.. ಅಷ್ಟರ ಮಟ್ಟಿಗೆ ಬಿಗ್‌ಬಾಸ್ ಕನ್ನಡ ಸೀಸನ್ 10 ಸೌಂಡ್ ಮಾಡಿತ್ತು. ಇದೀಗ ಬಿಗ್‌ಬಾಸ್ ಸೀಸನ್ 11 ಶುರುವಾಗುವ ಟೈಮ್ ಬಂದಿದೆ. ಶ್ರೀಘ್ರದಲ್ಲೇ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಸೀಸನ್ 11 ನಲ್ಲಿ ಯಾರೆಲ್ಲಾ ಸ್ಪರ್ಧೆ ಮಾಡಬಹುದು ಎಂಬ ಚರ್ಚೆ ಜೋರಾಗೆ ನಡೆಯುತ್ತಿದೆ. ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಸಬಹುದು? ಯಾರ ಹೆಸರು ಮುನ್ನಲೆಗೆ ಬಂದಿದೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶುಕ್ರವಾರ IND Vs PAK ಯುದ್ಧ – 8 ತಂಡ.. ಏಷ್ಯಾಕಪ್ ಗೆಲ್ಲುತ್ತಾ ಭಾರತ?
ಬಿಗ್‌ಬಾಸ್ ಕನ್ನಡ ಸೀಸನ್ 10 ಹಲವು ವಿಚಾರಗಳಿಂದ ಭಾರಿ ಸುದ್ದಿಯಾಗಿತ್ತು.. ಶೋ ಆರಂಭದಿಂದಲೂ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಕಳೆದ ಸೀಸನ್‌ನಲ್ಲಿ ವಿವಾದ ಮಾಡಿಕೊಂಡವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಅದ್ರಲ್ಲಿ ಡ್ರೋನ್ ಪ್ರತಾಪ್ ಗೆ ಅವಕಾಶ ಕೊಟ್ಟಿದ್ದು ಭಾರಿ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಹುಲಿ ಉಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರು ಸಂತೋಷ್ ಅವರು ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ತನಿಷಾ ಕುಪ್ಪಂಡ ಅವರು ಒಂದು ಸಮುದಾಯಕ್ಕೆ ಬೇಸರ ತರಿಸುವ ಹಾಗೆ ಮಾತಾಡಿದರು ಎಂಬ ದೂರು ಕೇಳಿ ಬಂತು. ಇನ್ನು ಸಂಗೀತಾ, ಡ್ರೋನ್ ಪ್ರತಾಪ್ ಅವರ ಕಣ್ಣಿಗೆ ಸೋಪಿನ ನೀರು ತಾಕಿ ಅವರು ಆಸ್ಪತ್ರೆ ಸೇರಿದರು. ಹೀಗೆ ಸಾಕಷ್ಟು ವಿವಾದಗಳಾಗಿತ್ತು. ಇಷ್ಟೆಲ್ಲಾ ವಿವಾದಗಳಿಂದ ಸುದ್ದಿಯಾದ್ರೂ ಕೂಡ ಸೀಸನ್ 10 ಯಶಸ್ವಿಯಾಗಿತ್ತು. ಕಿಚ್ಚ ಸುದೀಪ್ ಹೇಳಿದಂತೆ ಸೀಸನ್ 10 ಈವರೆಗಿನ ಬಿಗ್‌ಬಾಸ್ ಕನ್ನಡ ಸೀಸನ್ಗಳಲ್ಲಿಯೇ ಅತ್ಯಂತ ಜನಪ್ರಿಯ ಸೀಸನ್. ಫಿನಾಲೆ ವೇಳೆಗಾಗಲೇ ಕೆಲ ಸ್ಪರ್ಧಿಗಳಿಗೆ ಎರಡು ಕೋಟಿ, ಮೂರು ಕೋಟಿ ಮತಗಳು ಬಂದಿದ್ದವು. ಬಿಗ್ಬಾಸ್ನಿಂದ ಹೊರಬಂದ ಮೇಲಂತೂ ಸ್ಪರ್ಧಿಗಳು ಸೆಲೆಬ್ರಿಟಿಗಳೇ ಆಗಿಬಿಟ್ಟಿದ್ದಾರೆ. ಬಿಗ್‌ಬಾಸ್ ಸೀಸನ್ 10ರ ಯಶಸ್ಸು ಕಂಡ ಬಳಿಕ ಈಗ ಬಿಗ್‌ಬಾಸ್ ಸೀಸನ್ 11 ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಹೌದು, ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಅಂದ್ರೆ ಸೀಸನ್ 11 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.
ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ. ಈ ಮನೆಗೋಸ್ಕರ 300 ಜನರು ಕೆಲಸ ಮಾಡುತ್ತಿರುತ್ತಾರೆ. ದೊಡ್ಡ ಮನೆ, ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇನ್ನು ಈ ಮನೆಗೆ ಸ್ಪರ್ಧಿಗಳನ್ನ ಆಯ್ಕೆ ಮಾಡೋದು ಕೂಡ ದೊಡ್ಡ ಟಾಸ್ಕ್. ಇಲ್ಲಿ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಅಂತ ಹೇಳಬಹುದು.
ಇದೀಗ ಬಿಗ್ ಬಾಸ್ ಸೀಸನ್ 11 ನಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಬಗ್ಗೆಯೂ ಜೋರಾಗಿ ಚರ್ಚೆ ಶುರುವಾಗಿದೆ. ದೊಡ್ಮನೆಗೆ ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ತುಕಾಲಿ ಸಂತು ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಎಕ್ಸ್‌ಕ್ಯೂಸ್ ಮಿ ಚಿತ್ರದ ನಟ ಸುನೀಲ್ ರಾವ್, ಗೀತಾ ಸೀರಿಯಲ್ ನಟಿ ಭವ್ಯಾ ಗೌಡ, ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ, ರೀಲ್ಸ್ ರಾಣಿ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ಆದ್ರೆ ಬಿಗ್ ಬಾಸ್ ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಎಲ್ಲೂ ಹೇಳೋದಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾದ ಮೇಲೆಯೇ ಯಾರು ಸ್ಪರ್ಧಿಗಳು ಅನ್ನೋದು ಗೊತ್ತಾಗೋದು.