ಪರಪ್ಪನ ಅಗ್ರಹಾರದಲ್ಲಿ ವರ್ತೂರು ಸಂತೋಷ್ – ಹಳ್ಳಿಕಾರ್ ಒಡೆಯನಿಗೆ ಕೈದಿ ನಂಬರ್ ನೀಡಿದ ಅಧಿಕಾರಿಗಳು!

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಜೈಲು ಸೇರಿದ್ದಾರೆ. ವರ್ತೂರು ಸಂತೋಷ್‌ಗೆ ತನ್ನ ಕೊರಳಲ್ಲಿ ಧರಿಸಿದ್ದ ಹುಲಿ ಉಗುರೇ ಈಗ ಜೈಲು ಸೇರುವಂತೆ ಮಾಡಿದೆ. ಬಂಧನದ ಬಳಿಕ ಸಂತೋಷ್ ಅವರನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಕಳುಹಿಸಲಾಗಿದೆ. ಇದೀಗ ಸಂತೋಷ್ ಅವರಿಗೆ ಕೈದಿ ನಂಬರ್ ಕೂಡ ನೀಡಲಾಗಿದೆ.
ಹೌದು, ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪದ ಹಿನ್ನೆಲೆ ವರ್ತೂರು ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯಲ್ಲಿ ಬಂಧಿಸಲಾಗಿತ್ತು. ಇದೀಗ ಕಾರಾಗೃಹ ಅಧಿಕಾರಿಗಳು ಸಂತೋಷ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 10935 ಎಂಬ ನಂಬರ್ ನೀಡಿದ್ದಾರೆ.
ಕೋರ್ಟಿಗೆ ರಜೆ ಇದ್ದ ಕಾರಣ ವರ್ತೂರು ಸಂತೋಷ್ ಅವರನ್ನು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಸಂತೋಷ್ ನ್ಯಾಯಾಧೀಶರ ಮುಂದೆ ತಾನು ಹುಲಿ ಉಗುರು ಹೊಂದಿರುವುದು ನಿಜ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಉಗುರು ಎಲ್ಲಿ ಖರೀದಿಸಿರುವುದಾಗಿ ಕೂಡ ಹೇಳಿದ್ದಾರೆ. ಇದೀಗ ಚಿನ್ನದ ಚೈನು ಮಾಡಿರುವ ಚಿನ್ನದಂಗಡಿ ಮಾಲೀಕನಿಗೂ ಅರಣ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿಯಾಗಿ ವರ್ತೂರು ಸಂತೋಷ್ ದೊಡ್ಮನೆಗೆ ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಎರಡು ವಾರಗಳ ಕಾಲ ವರ್ತೂರು ಸಂತೋಷ್ ಇದ್ದರು. ಮೂರನೇ ವಾರ ಆರಂಭಕ್ಕೂ ಮೊದಲೇ ಅವರು ಬಿಗ್ ಬಾಸ್ನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಸಂದರ್ಭದಲ್ಲಿ ಅವರು ಕತ್ತಿಗೆ ಲಾಕೆಟ್ ಒಂದನ್ನು ಹಾಕಿದ್ದರು. ಇದು ಹುಲಿಯ ಉಗುರಿನಿಂದ ಮಾಡಲ್ಪಟ್ಟಿತ್ತು. ಈ ಸಂಬಂಧ ಕೇಸ್ ದಾಖಲಿಸಲಾಯಿತು. ಕನ್ಫೆಷನ್ ರೂಂಗೆ ಬರುವಂತೆ ಸಂತೋಷ್‌ಗೆ ಸೂಚಿಸಲಾಯಿತು. ಅವರನ್ನು ಬಿಗ್ ಬಾಸ್ ಮನೆ ಹೊರಗೆ ಕರೆತಂದ ಬಳಿಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ್ದಾರೆ.
ಅರಣ್ಯಾಧಿಕಾರಿಗಳು ಸಂತೋಷ್ ಹೊಂದಿದ್ದ ಉಗುರನ್ನು ಪರಿಶೀಲನೆ ನಡೆಸಿದ್ದು, ಅದು ಹುಲಿಯದ್ದೇ ಎನ್ನುವುದು ಖಚಿತವಾಗಿದೆ. ಆ ಬಳಿಕ ಅವರನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಹುಲಿ ಉಗುರು ಹೊಂದಿದ್ದ ಪ್ರಕರಣದಲ್ಲಿ ಸದ್ಯ ಸಂತೋಷ್ ಜೈಲಿನಲ್ಲಿದ್ದಾರೆ. ಹೀಗಾಗಿ, ಅವರಿಗೆ ಕೈದಿ ಸಂಖ್ಯೆ ನೀಡಲಾಗಿದೆ. ಹಳ್ಳಿಕಾರ್ ದನದ ತಳಿಯನ್ನು ರಕ್ಷಿಸಲು ಸಂತೋಷ್ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅವರು ಬಿಗ್ ಬಾಸ್ಗೆ ಬಂದಾಗ ಮೈಮೇಲೆ 400 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.