ಚೈತ್ರಾ, ಜಗದೀಶ್ BBKಗೆ ಬೇಕಿತ್ತಾ? – ಕಾಂಟ್ರವರ್ಸಿ ಮಾಡಿದ್ರೆ ದೊಡ್ಮನೆಗೆ ಎಂಟ್ರಿ
ಬಿಗ್ ಬಾಸ್ ವಿರುದ್ದ ವೀಕ್ಷಕರ ಅಸಮಾಧಾನ

ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಗೂ ಗ್ರ್ಯಾಂಡ್ ಆಗಿ ಓಪನಿಂಗ್ ಕಂಡಿದೆ.. ಒಟ್ಟು 17 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.. ಕಳೆದ ಬಾರಿಯಂತೆ ಈ ಬಾರಿಯೂ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಚಾನ್ಸ್ ನೀಡಲಾಗಿದೆ. ಈದ್ರ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹೌದು.. ಸೀಸನ್ 11 ನಲ್ಲಿ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಹಾಗೂ ಲಾಯರ್ ಜಗದೀಶ್ ಗೆ ಚಾನ್ಸ್ ನೀಡಲಾಗಿದೆ.. ಇದೀಗ ವೀಕ್ಷಕರು ಶೋ ವಿರುದ್ಧ ಕಿಡಿಕಾರುತ್ತಿದ್ದಾರೆ.. ಟಿ ಆರ್‌ಪಿ ಗಾಗಿ ಕಾಂಟ್ರವರ್ಸಿ ಮಾಡಿಕೊಂಡವರು, ಜೈಲಿಗೆ ಹೋಗಿ ಬಂದವರೇ ಬೇಕಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ..
ಇದನ್ನೂ ಓದಿ: ಏಷ್ಯಾ ಪೆಸಿಫಿಕ್‌ನಲ್ಲಿಭಾರತ – ನಂ.3- ಏಷ್ಯಾಕ್ಕೆ ಭಾರತ ಅತಿದೊಡ್ಡ ಶಕ್ತಿ
ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿ ಭಾರಿ ಕುತೂಹಲ ಮೂಡಿಸಿದೆ.. ಈ ಬಾರಿ ದೊಡ್ಮನೆಗೆ ಕರಾವಳಿಯ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಹಾಗೂ ಲಾಯರ್ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ.. ಅಂದ್ಹಾಗೆ. ಲಾಯರ್ ಜಗದೀಶ್ ಕಾಂಟ್ರವರ್ಸಿ ಮೂಲಕವೇ ಸೋಷಿಯಲ್ ಮೀಡಿಯಾ ಫೇಮಸ್ ಆಗಿದ್ರು.. ಈ ಮೂಲಕವೇ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ್ರ ಯುವತಿ ಪರ ವಕಾಲತ್ತು ವಹಿಸಿದ್ದರು ಜಗದೀಶ್. ಹೀಗಿರುವಾಗಲೇ ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿದ್ದರು ಜಗದೀಶ್. ಈಗ ಅದೇ ಫೇಮ್‌ನೊಂದಿಗೆ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ. ದೊಡ್ಮನೆಗೆ ಬಂದ್ಮೇಲೂ ಸುದೀಪ್ ಮುಂದೆ ರಾಜಕಾರಣಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ..
ಇನ್ನು ಚೈತ್ರಾ ಕುಂದಾಪುರ.. ಈ ಹೆಸರು ಕರಾವಳಿ ಭಾಗದವರಿಗೆ ಚೆನ್ನಾಗಿಯೇ ಗೊತ್ತು. ತಮ್ಮ ಖಡಕ್ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿರುವವರು. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ಕೆಲವರ್ಷ ಪತ್ರಕರ್ತೆಯಾಗಿ ಕೂಡ ಕೆಲಸ ಮಾಡಿದ್ರು.. ಕಳೆದ ಕೆಲ ತಿಂಗಳ ಹಿಂದೆ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು ಚೈತ್ರಾ ಕುಂದಾಪುರ ನಂಬಿಸಿದ್ದರು. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅರೆಸ್ಟ್ ಕೂಡ ಮಾಡಿದ್ದರು. ಚೈತ್ರಾ ಮತ್ತವರ ಗ್ಯಾಂಗ್ ಕೇಂದ್ರದ ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ ನಾಯಕರ ಹೆಸರಲ್ಲಿ ಮೋಸ ಮಾಡಿದ್ದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೆಸರಲ್ಲಿ ನಕಲಿ ನಾಯಕರನ್ನ ಸೃಷ್ಟಿ ಮಾಡಿ ಇವರು ವಂಚನೆ ಮಾಡಿದ್ದರು ಎಂದು ವರದಿಯಾಗಿತ್ತು. ಸದ್ಯ 2 ಲಕ್ಷದ 80 ಸಾವಿರ ವೋಟ್ಗಳನ್ನು ಪಡೆದುಕೊಳ್ಳುವ ಮೂಲಕ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸತ್ಯ ಹೇಳೋದು ವಿವಾದ ಆಗುತ್ತದೆ ಎನ್ನುವುದಾದರೆ ನನಗೆ ಆ ಕಾಂಟ್ರವರ್ಸಿ ಮೇಲೆ ಪ್ರೀತಿ ಇದೆ ಅಂತಾ ಹೇಳೋ ಮೂಲಕ ಚೈತ್ರಾ ಕುಂದಾಪುರ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಬಿಗ್ ಬಾಸ್ ಮೊದಲ ದಿನದ ಪ್ರೋಮೋ ರಿಲೀಸ್ ಮಾಡಿದೆ. ಚೈತ್ರಾ ಕುಂದಾಪುರ್ಗೆ ‘ಲೇಡಿ ಡಾನ್’ ಎಂಬ ಬಿರುದನ್ನು ಜಗದೀಶ್ ಅವರು ಕೊಟ್ಟಿದ್ದಾರೆ. ಇದೀಗ ಚೈತ್ರ ಕುಂದಾಪುರ ಹಾಗೂ ಲಾಯರ್ ಜಗದೀಶ್ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಪರ ವಿರೋಧ ಚರ್ಚೆ ಶುರುವಾಗಿದೆ.. ಚೈತ್ರಾ ಅವರನ್ನ ಕೆಲವರು ಚೈನ್ ಕಳ್ಳಿ ಅಂತಾ ಕೂಡ ಕರೆದಿದ್ದಾರೆ.. ಅಷ್ಟೇ ಅಲ್ಲ ಲಾಯರ್ ಜಗದೀಶ್ ವಿರುದ್ದ ಕೂಡ ಅಸಮಧಾನ ಹೊರ ಹಾಕಿದ್ದಾರೆ. ನ್ಯಾಯದ ಪರ ಹೋರಾಟ ಮಾಡುವವರು ದೊಡ್ಮನೆಗೆ ಯಾಕೆ ಬಂದ್ರಿ.. ಹೊರಗೆ ಇದ್ರು ಹೋರಾಟ ಮಾಡಬಹುದಲ್ವಾ ಅಂತಾ ಕೆಲವರು ಕಮೆಂಟ್ ಮಾಡ್ತಿದ್ದಾರೆ.. ಇನ್ನೂ ಕೆಲವರು ಹೈಟೆಕ್ ಕಿಡಿಗೇಡಿಗಳು, ದರೋಡೆಕೋರರು, ಮುಖವಾಡದಾರಿಗಳು ಇರೋ ಜಾಗ ವಿಧಾನಸೌಧ ಆದ್ರೆ, ಅಂತಹವರನ್ನು ಪ್ರಾರಂಭದಲ್ಲಿಯೇ ಬೆಳೆಸುವ ಜಾಗ ಬಿಗ್ ಬಾಸ್ ಆಗಿಬಿಟ್ಟಿದೆ ಎಂದು ಅಸಮಧಾನ ಹೊರ ಹಾಕಿದ್ದಾರೆ. ಇನ್ನು ಕೆಲವರು ಚೈತ್ರಾ ಕುಂದಾಪುರ, ಲಾಯರ್ ಜಗದೀಶ್ ಏನು ಮಾಡಿದ್ದಾರೆ ಎಂದು ಶೋಗೆ ಕರೆಸಿಕೊಂಡಿದ್ದೀರಿ? ಬಡವರಿಗೆ, ರೈತರಿಗೆ ಅವಕಾಶ ಕೊಡಬಹುದಿತ್ತಲ್ವಾ? ಸಮಾಜಕ್ಕೆ ಏನು ಸಂದೇಶ ನೀಡುತ್ತಿದೆ ಈ ಶೋ ಅಂತಾ ಕಮೆಂಟ್ ಮಾಡ್ತಿದ್ದಾರೆ.. ಒಟ್ಟಾರೆ ಈ ಶೋ ಈಗ ಭಾರಿ ಕ್ಯೂರಿಯಾಸಿಟಿ ಮೂಡಿಸಿದೆ.. ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ.