ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ಗೆ ಸಿಕ್ತು ಬಿಗ್ ರಿಲೀಫ್ – ಹುಲಿ ಉಗುರು ಕೇಸ್‌ನಲ್ಲಿ ಸಿಕ್ತು ಜಾಮೀನು
ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಈಗ ಜಾಮೀನು ಸಿಕ್ಕಿದೆ. ಇಷ್ಟು ದಿನಗಳ ಕಾಲ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದರು. ಸದ್ಯಕ್ಕೆ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯದಿಂದ ವರ್ತೂರು ಸಂತೋಷ್ ಅವರಿಗೆ ಜಾಮೀನು ನೀಡಲಾಗಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ. ಅಕ್ಟೋಬರ್ 27ರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ವರ್ತೂರು ಸಂತೋಷ್ ಬಿಡುಗಡೆ ಆಗಲಿದ್ದಾರೆ.
ಹಳ್ಳಿಕಾರ್ ರಾಸುಗಳ ರಕ್ಷಣೆಯ ಮೂಲಕ ಗುರುತಿಸಿಕೊಂಡಿದ್ದ ಸಂತೋಷ್ ಅವರು 10ನೇ ಅವೃತ್ತಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಮತ್ತೆ ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಾರಾ ಎಂಬ ಕೌತುಕ ಮೂಡಿದೆ. ಕುತ್ತಿಗೆಯಲ್ಲಿ ಸಂತೋಷ್ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದರು. ವರ್ತೂರು ಸಂತೋಷ್ ಅವರು ಹಲವು ಪ್ರಾಣಿಗಳನ್ನು ಸಾಕಿದ್ದು, ಹಳ್ಳಿಕಾರ್ ರಾಸು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.