ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ – ಪ್ರಾಣಿ, ಪಕ್ಷಿಗಳ ವಿಚಾರದಲ್ಲಿ ನಾವು ಪಾಲಿಸಬೇಕಾಗಿರುವಂಥಾ ನಿಯಮಗಳೇನು?

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ –  ಪ್ರಾಣಿ, ಪಕ್ಷಿಗಳ ವಿಚಾರದಲ್ಲಿ ನಾವು ಪಾಲಿಸಬೇಕಾಗಿರುವಂಥಾ ನಿಯಮಗಳೇನು?

ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ಬಿಗ್​​ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನವಾಗಿದೆ. ಹುಲಿ ಉಗುರು ಧರಿಸಬಾರದು ಅನ್ನೋ ವಿಚಾರ ಸಂತೋಷ್​ಗೆ ಗೊತ್ತಿರಲಿಲ್ಲ. ಅವರನ್ನ ಬಂಧಿಸಿದ್ದು ಸರಿಯಲ್ಲ ಅಂತಾನೂ ಒಂದಷ್ಟು ಮಂದಿ ವಾದ ಮಾಡುತ್ತಿದ್ದಾರೆ. ಆದರೆ, ನಿಯಮದ ಪ್ರಕಾರ ವರ್ತೂರ್ ಸಂತೋಷ್​ರನ್ನ ಬಂಧಿಸಿರೋದು ಸರಿಯಾಗಿಯೇ ಇದೆ. ಕಾನೂನು ಅಂದ್ಮೇಲೆ ಅದು ಎಲ್ಲರಿಗೂ ಒಂದೇ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂತೋಷ್​ರನ್ನ ಬಂಧಿಸಲಾಗಿದೆ. ವನ್ಯಜೀವ ಸಂರಕ್ಷಣಾ ಕಾಯ್ದೆಯಲ್ಲಿ ಉಲ್ಲೇಖವಾಗಿರುವಂತಾ ಅಂಶಗಳೇನು. ಪ್ರಾಣಿ, ಪಕ್ಷಿಗಳ ವಿಚಾರದಲ್ಲಿ ನಾವು ಪಾಲಿಸಬೇಕಾಗಿರುವಂಥಾ ನಿಯಮಗಳೇನು? ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ಬಿಗ್‌ಬಾಸ್‌ನಿಂದ ವರ್ತೂರು ಸಂತೋಷ್ ಎಲಿಮಿನೇಟ್? – ಹಳ್ಳಿಕಾರ್ ಒಡೆಯ ಎಡವಿದ್ದು ಹೇಗೆ?

ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣ.. ಅಷ್ಟೇ ಅಲ್ಲ, ಅಳಿವಿನಂಚಿನಲ್ಲಿರುವ ಜೀವಿಗಳಲ್ಲಿ ಹುಲಿ ಕೂಡ ಒಂದು. ಈ ಹುಲಿಗೆ ಜಗತ್ತಿನಲ್ಲಿ ಸುರಕ್ಷಿತ ದೇಶ ಅಂತಾ ಯಾವುದಾದ್ರು ಇದ್ರೆ ಅದು ಭಾರತ ಮಾತ್ರ. ಇಡೀ ಪ್ರಪಂಚದ ಶೇಕಡಾ 70ರಷ್ಟು ಹುಲಿಗಳು ನಮ್ಮ ದೇಶದಲ್ಲಿ ಮಾತ್ರ ಜೀವಿಸುತ್ತಿವೆ. ಹುಲಿಗಳ ಸಂರಕ್ಷಣೆಗೆ ಅಂತಾ ನಮ್ಮಲ್ಲಿ ಪ್ರತ್ಯೇಕ ಕಾನೂನನ್ನ ಕೂಡ ರಚಿಸಲಾಗಿದೆ. ಸದ್ಯ ನಿಧಾನಕ್ಕೆ ಹುಲಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಹುಲಿಗಳು ಇಲ್ಲಾ ಅಂದ್ರೆ ಇಡೀ ಪ್ರಕೃತಿಯೇ ಅಸಮತೋಲನವಾಗಿ ಬಿಡುತ್ತೆ. ಹುಲಿಗಳು ನಾಶವಾದ್ರೆ ನಮ್ಮ ಬದುಕು ನಾಶವಾದಂತೆ ಅನ್ನೋದನ್ನ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲಾ ಕಾರಣಕ್ಕಾಗಿ ಹುಲಿಗಳ ವಿಚಾರದಲ್ಲಿ ವನ್ಯ ಜೀವಿಗಳ ಸಂರಕ್ಷಣೆಗೆ ಅಂತಾ ದೇಶದಲ್ಲಿ ಅತ್ಯಂತ ಕಠಿಣ ಕಾನೂನನ್ನ ಜಾರಿಗೊಳಿಸಲಾಗಿದೆ. ಅದರಲ್ಲೂ ಹುಲಿಗಳ ವಿಚಾರದಲ್ಲಂತೂ ನಿಯಮಗಳನ್ನ ಇನ್ನಷ್ಟು ಬಿಗಿಗೊಳಿಸಲಾಗಿದೆ. ಯಾಕಂದ್ರೆ ಅವನತಿಯ ಅಂಚಿನಲ್ಲಿರುವ ಜೀವಿಯನ್ನ ಉಳಿಸಬೇಕು ಅನ್ನೋದಾದ್ರೆ ಇಂಥಾ ಕಠಿಣ ರೂಲ್ಸ್​ಗಳು ಅನಿವಾರ್ಯ. ಇಲ್ಲಿ ವರ್ತೂರ್​ ಸಂತೋಷ್​ಗೆ ಹುಲಿಯುಗುರು ಬಳಕೆ ಮಾಡಬಾರದು ಅನ್ನೋದು ಗೊತ್ತಿರಲಿಲ್ಲ. ನಿಯಮದ ಬಗ್ಗೆ ಜ್ಞಾನ ಇರಲಿಲ್ಲ ಅನ್ನೋದೇನೊ ನಿಜವಾಗಿರಬಹುದು. ಆದ್ರೆ ಹುಲಿ ಉಗುರನ್ನಾಗಲಿ.. ಚರ್ಮವನ್ನಾಗಲಿ ಬಳಸಬಾರದು ಅನ್ನೋದು ಕಾಮನ್​ಸೆನ್ಸ್..

ಹುಲಿಯುಗರನ್ನ ಧರಿಸಿಕೊಂಡ ಮಾತ್ರಕ್ಕೆ ಯಾರೂ ದೊಡ್ಡವರಾಗಲ್ಲ. ಈ ಹಿಂದೆ ಬ್ರಿಟೀಷರು, ರಾಜರ ಕಾಲದಲ್ಲಿ ನಮ್ಮ ದೇಶದಲ್ಲಿ ಒಂದು ಕಲ್ಪನೆಯಿತ್ತು. ಹುಲಿಯನ್ನ ಬೇಟೆಯಾಡಿದವನು ವೀರ ಅಂತಾ. ಈ ಭಾವನೆಯಿಂದಾಗಿಯೇ ಬ್ರಿಟೀಷರು, ರಾಜರ ಕಾಲದಲ್ಲಿ ಸಾವಿರಾರು ಹುಲಿಗಳನ್ನ ಬೇಟೆಯಾಡಿ ಕೊಲ್ಲಲಾಗಿತ್ತು. ಇವೆಲ್ಲದಕ್ಕೂ ಕಡಿವಾಣ ಹಾಕಬೇಕು ಅಂತಾ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಗಿದೆ.

ಈಗ ಬಿಗ್​​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಧರಿಸಿದ್ದ ಹುಲಿಯುಗುರಿನ ವಿಚಾರ. ಹುಲಿ ಉಗುರು, ಹಲ್ಲು ಮತ್ತು ಚರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ. ಅದ್ರಲ್ಲೂ ಚೀನಾಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಳ್ಳ ಸಾಗಾಣೆಯಾಗುತ್ತೆ. ಇದು ಜಾಗತಿಕ ಮಟ್ಟದ ದಂಧೆಯಾಗಿದ್ದು, ಹೀಗಾಗಿ ನಮ್ಮ ದೇಶದಲ್ಲಿ ಈಗಲೂ ಕೂಡ ಹುಲಿಗಳನ್ನ ಕೊಲ್ಲಲಾಗ್ತಿದೆ. ವಿಷವಿಟ್ಟು, ಉರುಳು ಹಾಕಿ ಹೀಗೆ ದುಷ್ಕರ್ಮಿಗಳು ವಿವಿಧ ರಾಜ್ಯಗಳಲ್ಲಿರುವ ಕಾಡುಗಳಲ್ಲಿ ದುಷ್ಕೃತ್ಯ ಎಸಗುತ್ತಲೇ ಇದ್ದಾರೆ. ಹುಲಿಯನ್ನ ಕೊಂದು ಅದ್ರ ಚರ್ಮ, ಹಲ್ಲು, ಉಗುರನ್ನ ಕಿತ್ತುಕೊಂಡು ಹೋಗ್ತಾರೆ. ಬಳಿಕ ಅದನ್ನ ಮಾರಾಟ ಮಾಡ್ತಾರೆ. ಇಲ್ಲಾ ವಿದೇಶಗಳಿಗೆ ಅಕ್ರಮವಾಗಿ ಸಾಗಿಸ್ತಾರೆ. ಈಗ ವರ್ತೂರ್​ ಸಂತೋಷ್​ಗೆ ಈ ಹುಲಿಯುಗುರು ಹೇಗೆ ಸಿಗ್ತು ಅನ್ನೋದು ಇಲ್ಲಿರುವ ಪ್ರಶ್ನೆ. ಇದು ಕೂಡ ಯಾರೋ ದುಷ್ಕರ್ಮಿಗಳು ಹುಲಿಯನ್ನ ಕೊಂದು ಉಗುರನ್ನ ಕಿತ್ತು, ಅಕ್ರಮವಾಗಿ ಮಾರಾಟ ಮಾಡಿದ ಉಗುರೇ ಆಗಿರುತ್ತೆ. ಯಾಕಂದ್ರೆ, ನಮ್ಮ ದೇಶದಲ್ಲಿ ಯಾವುದೇ ಹುಲಿ ಕಾಡಿನಲ್ಲಿ ಸಾವನ್ನಪ್ಪಿದಾಗ. ಅಂದ್ರೆ ವಯೋಸಹಜವಾಗಿಯಾಗಲಿ. ಇತರೆ ಹುಲಿ ಅಥವಾ ಪ್ರಾಣಿಗಳ ಜೊತೆಗೆ ಕಾದಾಟದ ವೇಳೆಯಾಗಲಿ ಹುಲಿ ಸಾವನ್ನಪ್ಪಿತು ಅಂದ್ರೆ ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆ ಹುಲಿಯನ್ನ ಸಂಪೂರ್ಣವಾಗಿ ಸುಟ್ಟು ಹಾಕಲಾಗುತ್ತೆ. ಹುಲಿಗಳನ್ನ ಸುಡೋ ಪ್ರಮುಖ ಉದ್ದೇಶ ಇಷ್ಟೇ.. ಅವುಗಳ ಉಗುರು, ಚರ್ಮ, ಹಲ್ಲು ಸೇರಿದಂತೆ ಅಂಗಾಂಗಳನ್ನ ಕಿತ್ತು ಮಾರಾಟ ಮಾಡಬಾರದು ಅನ್ನೋ ಕಾರಣಕ್ಕಾಗಿಯೇ ಸಂಪೂರ್ಣವಾಗಿ ಸುಡಲಾಗುತ್ತೆ. ಕೇವಲ ಹುಲಿ ಅಷ್ಟೇ ಅಲ್ಲ, ಚಿರತೆಯನ್ನ ಕೂಡ ಸುಟ್ಟು ಹಾಕಲಾಗುತ್ತೆ. ಮೃತಪಟ್ಟ ಬಳಿಕ ಆನೆಯ ದಂತವನ್ನ ಕೂಡ ಬೂದಿ ಮಾಡಲಾಗುತ್ತೆ. ಅಂಥದ್ರಲ್ಲಿ ವರ್ತೂರು ಸಂತೋಷ್​ಗೆ ಹುಲಿಯುಗುರು ಸಿಕ್ಕಿದ್ದು ಹೇಗೆ ಅನ್ನೋದೆ ಇಲ್ಲಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅದೇನೇ ಸಮರ್ಥನೆ ಕೊಟ್ರೂ ಇಲ್ಲಿ ಆಗಿರೋದು ಅಪರಾಧವೇ. ಗೊತ್ತಿದ್ದೋ.. ಗೊತ್ತಲ್ಲದೆಯೋ ಕಳ್ಳ ಸಾಗಾಣೆಯಿಂದಲೇ ಈ ಹುಲಿಯುಗುರು ವರ್ತೂರ್ ಸಂತೋಷ್​ರ ಕೈ ಸೇರಿರುತ್ತೆ. ನೇರವಾಗಿ ಅಲ್ಲದಿದ್ರೂ ಪರೋಕ್ಷವಾಗಿಯಾದ್ರೂ ಸಂತೋಷ್ ಅಕ್ರಮ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಇದೇ ಕಾರಣಕ್ಕೆ ಬಿಗ್​ಬಾಸ್ ಸ್ಪರ್ಧಿಗೆ ಈಗ ಸಂಕಷ್ಟ ಎದುರಾಗಿದೆ.

1972ರಲ್ಲಿ ನಮ್ಮ ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಗಿತ್ತು. ಪ್ರಾಣಿ, ಪಕ್ಷಿಗಳನ್ನ ಹಾಗೂ ಅರಣ್ಯ ಸಂಪತ್ತನ್ನ ರಕ್ಷಿಸುವ ಏಕೈಕ ಉದ್ದೇಶದಿಂದ ಈ ನಿಯಮ ಜಾರಿಗೆ ಬಂದಿದೆ.

ನಮ್ಮಲ್ಲಿ ಬಂಡೀಪುರ ಅರಣ್ಯ ಮಾರ್ಗದ ಮೂಲಕ ತಮಿಳುನಾಡಿಗೆ ನಿತ್ಯವೂ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ನಾಗರಹೊಳೆ ಮಧ್ಯೆ ಇರುವ ರಸ್ತೆ ಮೂಲಕವೂ ವಾಹನಗಳ ಸಂಚಾರವಾಗುತ್ತೆ. ಈ ವೇಳೆ ಅದೆಷ್ಟೋ ಮಂದಿ ವಾಹನವನ್ನ ನಿಲ್ಲಿಸಿ ಕಾಡು ಪ್ರಾಣಿಗಳಿಗೆ ಅಂದ್ರೆ, ಜಿಂಕೆ, ಮಂಗಗಳಿಗೆ ಬಿಸ್ಕೆಟ್, ಚಿಪ್ಸ್ ಸೇರಿದಂತೆ ಆಹಾರ ನೀಡ್ತಾರೆ. ನಿಮಗೆ ಗೊತ್ತಿರಲಿ.. ಇದು ಕೂಡ ಅಪರಾಧವೇ.. ಇಲ್ಲೂ ಸಿಕ್ಕಿಬಿದ್ದು ಅರೆಸ್ಟ್ ಆದರೆ, ಜಾಮೀನು ಸಿಗೋದಿಲ್ಲ.  ನಿಯಮದ ಪ್ರಕಾರ ಯಾವುದೇ ಕಾಡುಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನ ನೀಡುವಂತೆಯೇ ಇಲ್ಲ. ಯಾಕಂದ್ರೆ ನಾವು ನೀಡುವ ಆಹಾರದಿಂದ ಅವುಗಳ ಆರೋಗ್ಯದ ಮೇಲೆ ಎಫೆಕ್ಟ್ ಆಗುವ ಸಾಧ್ಯತೆ ಇರುತ್ತೆ. ಅನಾರೋಗ್ಯಕ್ಕೊಳಗಾಗಿ ಸತ್ತು ಹೋದರೆ, ಆ ವೈರಸ್​ ಕಾಡಿನಲ್ಲಿರುವ ಇತರೆ ಜೀವಿಗಳಿಗೂ ಹರಡಿದ್ರೆ ಕಾಡಿನಲ್ಲಿ ಪ್ರಾಣಿಗಳು ಸಾಮೂಹಿಕವಾಗಿ ಸಾವನ್ನಪ್ಪಬಹುದು. ಜೊತೆಗೆ ನಾವು ಕಾಡು ಪ್ರಾಣಿಗಳಿಗೆ ಆಹಾರ ನೀಡುತ್ತಾ ಹೋದರೆ ಅದೇ ಅವುಗಳಿಗೆ ಅಭ್ಯಾಸವಾಗಿ ಬಿಡುತ್ತದೆ. ನಾವು ನೀಡುವ ಆಹಾರಕ್ಕಾಗಿ ನಮ್ಮ ಬಳಿಗೆ ಬರೋದನ್ನ ಅಭ್ಯಾಸ ಮಾಡಿಕೊಂಡು ಬಿಡುತ್ತವೆ. ಇದ್ರಿಂದ ಅವುಗಳು ಆಹಾರ ಸರಪಳಿಯಲ್ಲೂ ವ್ಯತ್ಯಾಸವಾಗುತ್ತೆ. ಇವೆಲ್ಲವೂ ಅತ್ಯಂತ ಸೂಕ್ಷ್ಮವಾದ ವಿಚಾರಗಳು. ಇದನ್ನ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲೇಬೇಕು.

 

Sulekha