ನಮ್ಮ ಮೆಟ್ರೋ ಪಿಂಕ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್‌! – ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ!

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್‌! – ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ!

ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋ ಬೆಂಗಳೂರಿನ ಜನರಿಗೆ ದೈನಂದಿನ ಒಡನಾಡಿಯಾಗಿದೆ. ಸಾವಿರಾರು ಜನರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಮೆಟ್ರೊದಲ್ಲಿ ಪ್ರಯಾಣವೂ ಸುಲಭ, ಸಮಯವೂ ಕಡಿಮೆ. ಇದೇ ಕಾರಣಕ್ಕೆ ಹೆಚ್ಚಿನವರು ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗೇ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಿಸುತ್ತಿದೆ. ಇದೀಗ ಪಿಂಕ್‌ ಲೈನ್‌ ಮಾರ್ಗದ ಬಗ್ಗೆ ಬಿಗ್‌ಅಪ್‌ಡೇಟ್‌ ಸಿಕ್ಕಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್​​ ಮಾರ್ಗ ಮೇ ತಿಂಗಳಲ್ಲಿ ಸಂಚಾರಕ್ಕೆ  ಮುಕ್ತವಾಗಲಿದೆ.

ಇದನ್ನೂ ಓದಿ: ಮುಂಬೈ ನಾಯಕ ಸೂರ್ಯ ಅರ್ಧಶತಕ , ಆರೆಂಜ್ ಕ್ಯಾಪ್ ಧರಿಸಿದ ರೋಹಿತ್ ಶರ್ಮಾ – ಡೆಲ್ಲಿಗೆ 163 ರನ್ ಟಾರ್ಗೆಟ್

ಬಹುನಿರೀಕ್ಷಿತ ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಎತ್ತರಿಸಿದ ಮೆಟ್ರೋ ಮಾರ್ಗ ಯಾವಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕಾಯುತ್ತಿದ್ದ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಈ ವರ್ಷ ಮೇ ತಿಂಗಳಿನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗ ಓಪನ್ ಮಾಡಲು ಬಿಎಂಆರ್‌ಸಿಎಲ್‌‌ ಸಿದ್ಧತೆ ನಡೆಸಿದೆ. ಈಗಾಗಲೇ RDSO ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ್ಯಾಕ್ ಟೆಸ್ಟ್, ಸ್ಟೇಷನ್​​ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನು ಈ ಪಿಂಕ್​​ ಲೈನ್​​ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ‌ಮೊದಲ ಹಂತದಲ್ಲಿ ಪಿಂಕ್ ಲೈನ್​​ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿದ್ದು, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್​​ಗಳಾಗಿವೆ. ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​​ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಪಿಂಕ್​​ ಲೈನ್​​ಗಾಗಿ ಬಿಇಎಂಎಲ್​​ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್​​ ಆಫ್​​ ಮೆಟ್ರೋ ರೈಲ್ವೇ ಸೇಫ್ಟಿಯಿಂದಲೂ ಅನುಮತಿ ಸಿಗುತ್ತಿದ್ದಂತೆ ಪಿಂಕ್​​ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಶುರುವಾಗಲಿದೆ.

Shwetha M