ಬಿಬಿಎಂಪಿ ಬಸ್‌ ಶೆಲ್ಟರ್‌ ಕಳ್ಳತನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! – ಪೊಲೀಸ್‌ ತನಿಖೆಯಲ್ಲಿ ಬಯಲಾಗಿದ್ದೇನು?

ಬಿಬಿಎಂಪಿ ಬಸ್‌ ಶೆಲ್ಟರ್‌ ಕಳ್ಳತನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! – ಪೊಲೀಸ್‌ ತನಿಖೆಯಲ್ಲಿ ಬಯಲಾಗಿದ್ದೇನು?

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸ್‌ ಶೆಲ್ಟರ್‌ ದಿಢೀರ್‌ ಆಗಿ ನಾಪತ್ತೆಯಾಗಿತ್ತು. ಇದನ್ನು ರಾತ್ರೋ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ ಎಂದು ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಸೈನ್ ಪೋಸ್ಟ್ ಕಂಪನಿಯವರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪ್ರಯಾಣಿಕರಿಗಾಗಿ ಬಸ್​ ತಂಗುದಾಣವನ್ನು ನಿರ್ಮಿಸಿತ್ತು. ಆದ್ರೆ, ಅದು ಕೆಲ ದಿನಗಳ ಬಳಿಕ ಸ್ಥಳದಿಂದ ನಾಪತ್ತೆಯಾಗಿತ್ತು.ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಸ್ಥಳಕ್ಕೆ ಬಂದು ನೋಡಿದಾಗ ನಿರ್ಮಿಸಲಾಗಿದ್ದ ಬಸ್​ ಶೆಲ್ಟರ್‌ ಇರಲಿಲ್ಲ. ನಿರ್ಮಿಸಿದ್ದ ಒಂದು ವಾರದೊಳಗೆ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿತ್ತು.

ಇದನ್ನೂ ಓದಿ: ಬಿಎಂಟಿಸಿ ಬಸ್‌ ಶೆಲ್ಟರ್‌ನೇ ಕದ್ದೊಯ್ದ ಖತರ್ನಾಕ್‌ ಕಳ್ಳರು! – ಖದೀಮರ ಕೈಚಳಕಕ್ಕೆ ಅಧಿಕಾರಿಗಳೇ ಶಾಕ್!

ಬಳಿಕ ಎನ್ ರವಿ ರೆಡ್ಡಿ ಅವರು ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲಿಸರು, ಬಸ್​ ನಿಲ್ದಾಣದ ಅಕ್ಕ-ಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದರು. ಇದೀಗ ಸ್ವಲ್ಪ ದಿನಗಳ ಬಳಿಕ ಬಸ್​ ನಿಲ್ದಾಣ ನಾಪತ್ತೆ ರಹಸ್ಯ ಬಯಲಾಗಿದೆ.

ಪೊಲೀಸರು ಈ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಬಸ್‌ ಶೆಲ್ಟರ್ ಕಳ್ಳತನವಾಗಿಲ್ಲ. ಮಿಸ್ ಆಗಿಲ್ಲ, ಏನು ಆಗಿಲ್ಲ. ಇದನ್ನು ಬಿಬಿಎಂ ಅಧಿಕಾರಿಗಳೇ ತೆರವು ಮಾಡಿಸಿದ್ದಾರೆ ಅಂತಾ ತನಿಖೆ ವೇಳೆ ಗೊತ್ತಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ ಎಂದು ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಸ್ ನಿಲ್ದಾಣ ನಾಪತ್ತೆ ರಹಸ್ಯ ಈಗ ಬೆಳಕಿಗೆ ಬಂದಿದೆ.

Shwetha M