ಬಿಜೆಪಿ ಬಾಗಿಲಲ್ಲಿ ನಿಂತ ಪುತ್ತಿಲಗೆ ಬಿಗ್ ಶಾಕ್ – ಯಾವುದೇ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಬರುವಂತಿಲ್ಲ ಎಂದು ಷರತ್ತು

ಬಿಜೆಪಿ ಬಾಗಿಲಲ್ಲಿ ನಿಂತ ಪುತ್ತಿಲಗೆ ಬಿಗ್ ಶಾಕ್ – ಯಾವುದೇ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಬರುವಂತಿಲ್ಲ ಎಂದು ಷರತ್ತು

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಇದೀಗ ಮರಳಿ ಬಿಜೆಪಿ ಪಕ್ಷದ ಬಾಗಿಲಲ್ಲೇ ನಿಂತಿದ್ದಾರೆ. ಆದ್ರೆ ಪುತ್ತಿಲ ಬಿಜೆಪಿಗೆ ಮರಳುವುದಕ್ಕೆ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಪುತ್ತಿಲ ಘರ್ ವಾಪ್ಸಿ ಡಿಲೇ ಆಗ್ತಿದೆ. ಇದೀಗ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನ ಪುತ್ತಿಲ ಭೇಟಿಯಾಗಿದ್ದಾರೆ. ಉಭಯ ನಾಯಕರು ಮಾತುಕತೆ ಕೂಡ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಜಯೇಂದ್ರ, ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೆಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ. ಹಾಗಂತ ಪುತ್ತಿಲ ಸೇರ್ಪಡೆ ಚರ್ಚೆ ಇಂದು ನಿನ್ನೆಯದಲ್ಲ.

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬೇಡಿಕೆಗೆ ಬಿಜೆಪಿ ನಾಯಕರಿಂದ ಅಸ್ತು – ಪುತ್ತಿಲ ಬಿಜೆಪಿಗೆ ಬರೋದು ಫಿಕ್ಸ್

ಕಳೆದ ಕೆಲ ದಿನಗಳಿಂದ ಪುತ್ತಿಲ ಬಿಜೆಪಿ ಮರು ಸೇರ್ಪಡೆ ಬಗ್ಗೆ ಚರ್ಚೆಯಾಗುತ್ತಿದೆ. ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇದರ ಬೆನ್ನಲ್ಲೇ ಪುತ್ತೂರಿನಲ್ಲಿ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿದ್ದ ಪುತ್ತಿಲ, ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಈ ವಿಚಾರವಾಗಿ 3 ದಿನಗಳ ಒಳಗಾಗಿ ನಿರ್ಧಾರ ತಿಳಿಸಬೇಕು ಎಂದೂ ಬಿಜೆಪಿಗೆ ಗಡುವು ನೀಡಿದ್ದರು. ಇದಾಗಿ ಹಲವು ದಿನಗಳೂ ಕಳೆದೂ ಈ ವಿಚಾರವಾಗಿ ಯಾವುದೇ ಬೆಳವಣಿಗೆ ಆಗಿಲ್ಲ. ಇದೀಗ ಪುತ್ತಿಲ ಅವರೇ ವಿಜಯೇಂದ್ರರನ್ನ ಭೇಟಿಯಾಗಿ ಮಾತುಕತೆ ನಡೆಸಿರೋದು ಭಾರೀ ಕುತೂಹಲ ಮೂಡಿಸಿದೆ.

ಅರುಣ್ ಪುತ್ತಿಲ ಬಿಜೆಪಿಯಲ್ಲೇ ಇದ್ದವರು. ಪ್ರಮುಖ ಹಿಂದೂ ಮುಖಂಡನಾಗಿ ಗುರುತಿಸಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ನಾಯಕ. ಆದ್ರೂ ಬಿಜೆಪಿಯಲ್ಲಿ ಪುತ್ತಿಲರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳೋಕೆ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಕಾರಣವೂ ಇದೆ.

ಅರುಣ್ ಕುಮಾರ್ ಪುತ್ತಿಲ ಅವರನ್ನು ಮರಳಿ ಕರೆದುಕೊಂಡು ಬರಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರೇ ಮುಂದಾಳತ್ವ ವಹಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ದೆಹಲಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೊರೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುತ್ತಿಲ ದ್ರೋಹ ಬಗೆದಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ಸ್ಥಳೀಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿಗೆ ರಾಜಕೀಯ ವಿರೋಧಿಯಾಗಿರೋ ಪುತ್ತಿಲ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಒಂದು ವೇಳೆ ಪಕ್ಷಕ್ಕೆ ಸೇರ್ಪಡೆ ಆಗೋದಾದ್ರೆ ಬಿಜೆಪಿಯ ನಿಯಮಗಳನ್ನು ಒಪ್ಪಿಕೊಂಡು ಬರಬೇಕು ಎಂಬ ಕೂಗು ಕೇಳಿ ಬಂದಿದೆ. ಹಾಗೂ ಯಾವುದೇ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಬರುವಂತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಪಕ್ಷ ನೀಡಿದ ಜವಾಬ್ದಾರಿ ಒಪ್ಪಿಕೊಂಡು ಇರುವುದಾದರೆ ಪಕ್ಷಕ್ಕೆ ಸ್ವಾಗತ ಎಂಬುವುದು ಸ್ಥಳೀಯ ಮುಖಂಡರ ಮಾತಾಗಿದೆ.

ಅರುಣ್ ಪುತ್ತಿಲ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಪುತ್ತೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಟಿಕೆಟ್ ಸಿಗದೆ ಬಂಡಾಯವೆದ್ದು ಚುನಾವಣೆಗೆ ಸ್ಪರ್ಧಿಸಿದ್ದರು. ಕೊನೆಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಪುತ್ತಿಲ 2ನೇ ಸ್ಥಾನ ಪಡೆದಿದ್ದರು. ಈ ಮೂಲಕ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಬಿದ್ದಿದ್ದರು. ಹೀಗಾಗಿ ಪುತ್ತಿಲ ಬಿಜೆಪಿಗೂ ಅನಿವಾರ್ಯ ಆಗಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದರಾಗಿರೋ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪುತ್ತಿಲ ಕೂಡ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯೋ ಇಂಗಿತ ಹೊಂದಿದ್ದಾರೆ. ಸತ್ಯಜಿತ್ ಸುರತ್ಕಲ್ ಸೇರಿದಂತೆ ನಾಲ್ಕೈದು ಜನ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರೋ ಕಟೀಲ್​ಗೆ ಮತ್ತೆ ಟಿಕೆಟ್ ಕೊಡ್ಬೇಕಾ ಅಥವಾ ಹೊಸ ಅಭ್ಯರ್ಥಿಯನ್ನ ಕಣಕ್ಕೆ ಇಳಿಸೋದಾ ಎಂದು ಬಿಜೆಪಿ ನಾಯಕರು ತಲೆ ಬಿಸಿ ಮಾಡಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ಪುತ್ತಿಲ ಅನಿವಾರ್ಯ ಆಗಿದ್ದಾರೆ. ಆದ್ರೆ ಯಾವಾಗ ಅಧಿಕೃತವಾಗಿ ಬಿಜೆಪಿಗೆ ಮರಳುತ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Sulekha