ಪಾಂಡ್ಯಗೆ ಶಾಕ್ ಕೊಟ್ಟ ಸೂರ್ಯ – ಲಂಕಾ ಸರಣಿಗೆ SKY ಕ್ಯಾಪ್ಟನ್?
KL ರಾಹುಲ್ ನಾಯಕತ್ವಕ್ಕೂ ಅಡ್ಡಿನಾ?

ಪಾಂಡ್ಯಗೆ ಶಾಕ್ ಕೊಟ್ಟ ಸೂರ್ಯ – ಲಂಕಾ ಸರಣಿಗೆ SKY ಕ್ಯಾಪ್ಟನ್?KL ರಾಹುಲ್ ನಾಯಕತ್ವಕ್ಕೂ ಅಡ್ಡಿನಾ?

ಟೀಂ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಸಜ್ಜಾಗ್ತಿದೆ. ಇದೇ ತಿಂಗಳ ಅಂತ್ಯದಲ್ಲಿ ಟೂರ್ನಿ ಶುರುವಾಗಲಿದೆ. ಮೂರು ದಿನಗಳ ಟಿ-20 ಸರಣಿ ಹಾಗೇ 3 ದಿನಗಳ ಏಕದಿನ ಸರಣಿಗೆ ಟೀಂ ಸೆಲೆಕ್ಷನ್ ಕೂಡ ನಡೀತಿದೆ. ಇಷ್ಟು ದಿನ ಟಿ-20ಐಗೆ ಹಾರ್ದಿಕ್ ಪಾಂಡ್ಯ ಹಾಗೇ ಏಕದಿನ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್ ಎನ್ನಲಾಗಿತ್ತು. ಆದ್ರೀಗ ಹಾರ್ದಿಕ್ ಪಾಂಡ್ಯರನ್ನ ಸೂರ್ಯಕುಮಾರ್ ಯಾದವ್ ಬೀಟ್ ಮಾಡಿದ್ರಾ ಎಂಬ ಚರ್ಚೆಯಾಗ್ತಿದೆ. ಅಂದ್ರೆ ಪಾಂಡ್ಯ ಬದಲಿಗೆ ಸೂರ್ಯನಿಗೆ ಕ್ಯಾಪ್ಟನ್ ಪಟ್ಟ ಕಟ್ಟೋಕೆ ಸಿದ್ಧತೆ ನಡೀತಿದೆ. ಹಾಗಾದ್ರೆ ಪಾಂಡ್ಯ ಹೆಸರನ್ನ ಕೈ ಬಿಟ್ಟಿದ್ದೇಕೆ? ಸೂರ್ಯ ಹೆಸರು ಮುಂಚೂಣಿಗೆ ಬಂದಿದ್ದೇಕೆ? ಏಕದಿನ ಸರಣಿಗೆ ಕೆ.ಎಲ್ ರಾಹುಲ್ರೇ ನಾಯಕನಾ? ಲಂಕಾ ಸರಣಿಗೆ ಯಾರೆಲ್ಲಾ ಸೆಲೆಕ್ಟ್ ಆಗ್ತಾರೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ವಿಂಬಲ್ಡನ್ ರಾಜ ಜೋಕೊ ಗರ್ವಭಂಗ – ಟೆನಿಸ್ ಹೊಸ ದೊರೆ ಅಲ್ಕರಾಜ್
ಟಿ-20 ವಿಶ್ವಕಪ್ ಟೂರ್ನಿ ಬಳಿಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಟಿ-20ಐ ಫಾರ್ಮೇಟ್ಗೆ ಗುಡ್ ಬೈ ಹೇಳಿದ್ರು. ಸೋ ಭಾರತ ಟಿ20 ತಂಡದ ಮುಂದಿನ ನಾಯಕ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಅದ್ರಲ್ಲೂ ಹಾರ್ದಿಕ್ ಪಾಂಡ್ಯರೇ ಫುಲ್ ಟೈಂ ಕ್ಯಾಪ್ಟನ್ ಅನ್ನೋದು ಬಹುತೇಕ ಕನ್ಫರ್ಮ್ ಆಗಿತ್ತು. ಬಟ್ ಈಗ ಕೇಳಿ ಬರ್ತಿರೋ ಹೆಸ್ರು ಸೂರ್ಯಕುಮಾರ್ ಯಾದವ್. ಜುಲೈ 16ರ ತನಕ ಹಾರ್ದಿಕ್ ಪಾಂಡ್ಯ ಹೆಸರು ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿತ್ತು. ಆದರೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ. ಅವರನ್ನೇ ಟಿ20 ತಂಡದ ಕ್ಯಾಪ್ಟನ್ ಆಯ್ಕೆ ಮಾಡುವಂತೆ ಗಂಭೀರ್ ಆಯ್ಕೆ ಸಮಿತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇಂಥಾದ್ದೊಂದು ನಿರ್ಧಾರಕ್ಕೆ ಮೇನ್ ರೀಸನ್ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆ.
ಹಾರ್ದಿಕ್ ಪಾಂಡ್ಯ ಪದೇಪದೇ ಫಿಟ್ನೆಸ್ ಸಮಸ್ಯೆಗೆ ಒಳಗಾಗ್ತಿರೋದು ಹೊಸದೇನೂ ಅಲ್ಲ. ಇದಕ್ಕೆ ಸಾಕ್ಷಿ 2023ರ ಏಕದಿನ ವಿಶ್ವಕಪ್. ಕಳೆದ ಏಕದಿನ ವಿಶ್ವಕಪ್ ವೇಳೆ ಫಿಟ್ನೆಸ್ ಸಮಸ್ಯೆಯ ಕಾರಣ ಪಾಂಡ್ಯ ಅರ್ಧದಲ್ಲೇ ತೊರೆದಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿದದ್ದು, ಈ ಬಾರಿಯ ಟಿ20 ವಿಶ್ವಕಪ್ನಲ್ಲಿ. ಹೀಗಾಗಿಯೇ ಸಂಪೂರ್ಣ ಫಿಟ್ನೆಸ್ನೊಂದಿಗೆ ತಂಡದ ಖಾಯಂ ಸದಸ್ಯರಾಗಿರುವ ಆಟಗಾರನಿಗೆ ನಾಯಕತ್ವ ನೀಡುವಂತೆ ಗೌತಮ್ ಗಂಭೀರ್ ಆಯ್ಕೆ ಸಮಿತಿಗೆ ಮನವಿ ಮಾಡಿದ್ದಾರೆ. ಈ ಮನವಿಯಂತೆ ಇದೀಗ ಸೂರ್ಯಕುಮಾರ್ ಯಾದವ್ ಹೆಸರು ಮುಂಚೂಣಿಗೆ ಬಂದಿದ್ದು, ಹೀಗಾಗಿ ಅವರಿಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಈಗಾಗಲೇ ಭಾರತ ಟಿ20 ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಸೂರ್ಯ 7 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ಸಿ ಪಟ್ಟ ಸೂರ್ಯಕುಮಾರ್ ಯಾದವ್ಗೆ ಒಲಿದರೂ ಅಚ್ಚರಿಪಡಬೇಕಿಲ್ಲ.
ಅಸಲಿಗೆ ಬಿಸಿಸಿಐನ ಫಸ್ಟ್ ಆಪ್ಶನ್ ಆಗಿದ್ದು ಹಾರ್ದಿಕ್ ಪಾಂಡ್ಯರೇ. ಬಿಸಿಸಿಐ ಆಯ್ಕೆ ಸಮಿತಿ ಕೂಡ ಪಾಂಡ್ಯಗೇ ಪ್ರಿಫರೆನ್ಸ್ ಕೊಟ್ಟಿತ್ತಯ. ಆದರೆ ಫಿಟ್ನೆಸ್ ಸಮಸ್ಯೆಯ ಕಾರಣ ಪ್ರತಿಯೊಂದು ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗೋ ಗ್ಯಾರಂಟಿ ಇಲ್ಲ. ಹೀಗಾಗಿ ಖಾಯಂ ಸದಸ್ಯರೊಬ್ಬರಿಗೆ ನಾಯಕತ್ವ ನೀಡುವಂತೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದರು. ಅದರಂತೆ ಇದೀಗ ಸೂರ್ಯಕುಮಾರ್ ಯಾದವ್ಗೆ ನಾಯಕನ ಪಟ್ಟ ಒಲಿದಿದೆ ಎನ್ನಲಾಗಿದೆ. ಇಲ್ಲಿ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಬಿಸಿಸಿಐ ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ನಂತರ ಏಕದಿನ ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಬಿಸಿಸಿಐ ಮುಂದೆ ಮನವಿ ಇಟ್ಟಿದ್ದರು. ಆದರೆ, ಇದು ಹೆಡ್ ಕೋಚ್ ಗೌತಮ್ ಗಂಭೀರ್ಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ಒಡಿಐ ಮತ್ತು ಟಿ20 ಎರಡೂ ಸರಣಿಗಳಲ್ಲಿ ಪಾಲ್ಗೊಳ್ಳುವಂತೆ ತಾಕೀತು ಮಾಡಿದ್ದಾರೆ. ಇದೇ ಕಾರಣಕ್ಕೆ ಟಿ20 ತಂಡದ ಕ್ಯಾಪ್ಟನ್ಸಿಯಿಂದಲೂ ಹಾರ್ದಿಕ್ ಅವರನ್ನು ಕೆಳಗಿಳಿಸಿ ಸೂರ್ಯಕುಮಾರ್ ಯಾದವ್ ಅವರನ್ನು 2026 ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿವರೆಗೆ ಕ್ಯಾಪ್ಟನ್ ಮಾಡುವ ದಿಟ್ಟ ನಿರ್ಧಾರಕ್ಕೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಂದಿದೆ ಎನ್ನಲಾಗಿದೆ.
ಟಿ20 ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳೋ ಸೂರ್ಯಕುಮಾರ್ ಯಾದವ್ಗೆ ನಾಯಕನ ಪಟ್ಟ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಸೂರ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇನ್ನು ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಹೀಗಾಗಿ ಟಿ20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿತ್ತು. ಆದರಂತೆ ನಾಯಕರುಗಳ ರೇಸ್ನಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿದ್ದವು. ಇದೀಗ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ ಭಾರತ ತಂಡದ ನಾಯಕತ್ವ ಪಡೆಯುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಸ್ಟೈಲಿಷ್ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದರಲ್ಲೂ ಟಿ20-ಐನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಭಾರತ ತಂಡವನ್ನು ಈವರೆಗೆ ಎರಡು ಸರಣಿಗಳಲ್ಲಿ ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಸೌತ್ ಆಫ್ರಿಕಾ ಎದುರಿಸಿನ ಸರಣಿಗಳಲ್ಲಿ 7 ಪಂದ್ಯಗಳನ್ನು ಗೆದ್ದುಕೊಟ್ಟು, 2ರಲ್ಲಿ ನಿರಾಶೆ ಅನುಭವಿಸಿದ್ದಾರೆ. ಈ ಎರಡೂ ಸರಣಿಗಲ್ಲಿ ಬ್ಯಾಟ್ ಮೂಲಕವೂ ಅಬ್ಬರಿಸಿ ಎರಡು ಅರ್ಧಶತಕ ಮತ್ತೊಂದು ಶತಕದ ಮೂಲಕ 300ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಸದ್ಯ ಟಿ20-ಐ ಕ್ರಿಕೆಟ್ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಪಾಂಡ್ಯಗಿಂತ ಸೂರ್ಯ ಬೆಸ್ಟ್ ಅಂತಾ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ತಂಡ ಅಂಕಪಟ್ಟಿಯ ಕೊನೇ ಸ್ಥಾನ ಪಡೆದಿತ್ತು. ಇದೇ ತಂಡದಲ್ಲಿ ಹಾರ್ದಿಕ್ ನಾಯಕತ್ವದ ಅಡಿಯಲ್ಲಿ ಸೂರ್ಯಕುಮಾರ್ ಯಾದವ್ ಆಡಿದ್ದರು. ಐಪಿಎಲ್ 2024 ಟೂರ್ನಿಯಲ್ಲಿ ಫ್ಲಾಪ್ ಆಗಿದ್ದ ಹಾರ್ದಿಕ್, ಬಳಿಕ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡ್ ಆಟದ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿ ಭಾರತ ತಂಡದ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದೇ ಕಾರಣಕ್ಕೆ ಹಾರ್ದಿಕ್ಗೆ ಕ್ಯಾಪ್ಟನ್ಸಿ ಸಿಗಬೇಕೆಂಬುದು ಕೆಲವರ ವಾದವಾಗಿದೆ. ಅಲ್ದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ವೈಸ್ ಕ್ಯಾಪ್ಟನ್ ಆಗಿಯೂ ಆಡಿದ್ದರು. ಹೀಗಾಗಿ ರೋಹಿತ್ ಬಳಿಕ ಹಾರ್ದಿಕ್ ಕ್ಯಾಪ್ಟನ್ ಆಗಬೇಕೆಂಬುದು ಕೆಲ ಸೆಲೆಕ್ಟರ್ಸ್ ನಿಲುವಾಗಿದೆ. ಆದರೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಕೆಲ ಸೆಲೆಕ್ಟರ್ಸ್ಗೆ ಈ ಬಗ್ಗೆ ಒಪ್ಪಿಗೆ ಇಲ್ಲ. ಎಲ್ಲಾ ಮಾದರಿಯ ಕ್ರಿಕೆಟ್ಗೆ ದೀರ್ಘ ಕಾಲ ಲಭ್ಯವಾಗುವ ಆಟಗಾರನಿಗೆ ಕ್ಯಾಪ್ಟನ್ಸಿ ಸಿಗಬೇಕು ಎಂಬ ವಾದ ಮುಂದಿಟ್ಟಿದ್ದಾರೆ ಎನ್ನಲ್ಲಾಗಿದೆ.
ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್ ಗೌತಮ್ ಗಂಭೀರ್ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್ಗೂ ಮನಸಿಲ್ಲ. ಇನ್ನು ಸೂರ್ಯಕುಮಾರ್ ಯಾದವ್ 2014 ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಅಲ್ಲದೆ ಗಂಭೀರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ವಹಿಸಲು ಟೀಮ್ ಇಂಡಿಯಾದ ನೂತನ ಕೋಚ್ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕಾರಣ ಭಾರತ ಟಿ20 ತಂಡಕ್ಕೆ ನೂತನ ನಾಯಕ ಆಯ್ಕೆಯಾಗಬೇಕಿದೆ. ಕಳೆದ ಒಂದು ವರ್ಷಗಳಿಂದ ರೋಹಿತ್ ಬಳಿಕ ಹಾರ್ದಿಕ್ ಪಾಂಡ್ಯರನ್ನೇ ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಬಿಸಿಸಿಐ ಪಾಂಡ್ಯಗೆ ನಾಯಕತ್ವ ನೀಡಲು ಹಿಂದೇಟು ಹಾಕಿದ್ದು, ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಲು ಮುಂದಾಗಿದೆ ಎನ್ನಲಾಗಿದೆ. ಇಲ್ಲಿ ಆಟಗಾರರು ಮತ್ತು ನಾಯಕನ ಆಯ್ಕೆ ವಿಚಾರದಲ್ಲಿ ಹೆಡ್ಕೋಚ್ ಗೌತಮ್ ಗಂಭೀರ್ ಭವಿಷ್ಯವೂ ಅಡಗಿದೆ. ಯಾಕಂದ್ರೆ ಟಿ-20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರಿಂದ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ಕೋಚ್ ಅಡಿಯಲ್ಲಿ ಶ್ರೀಲಂಕಾದಲ್ಲಿ ಟಿ 20 ಪಂದ್ಯಗಳಲ್ಲಿ ಭಾರತ ಪಾಲ್ಗೊಳ್ಳಬೇಕಾಗಿದೆ. ಹಾಗೇ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್ಗೆ ತಂಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಮೊದಲ ಆಯ್ಕೆಯ ಆಟಗಾರರೊಂದಿಗೆ ತಂಡ ಸಿದ್ಧಗೊಳ್ಳಬೇಕಿದೆ. ಟಿ 20 ವಿಶ್ವಕಪ್ ನಂತರ ಭಾರತವು ಜಿಂಬಾಬ್ವೆಯಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಿತು. ಆದರೆ ಆ ತಂಡದಲ್ಲಿ ವಿಶ್ವಕಪ್ ಗೆದ್ದ ತಂಡದಿಂದ ಕೇವಲ ಮೂವರು ಆಟಗಾರರು ಇದ್ದರು. ಅವರು ಕೊನೆಯ ಮೂರು ಪಂದ್ಯಗಳಿಗೆ ಮಾತ್ರ ಲಭ್ಯವಿದ್ದರು. ಹೀಗಾಗಿ ಸೀನಿಯರ್ಸ್ ಮತ್ತು ಜೂನಿಯರ್ಸ್ ಎಲ್ಲರಿಗೂ ಅವಕಾಶ ಕೊಟ್ಟು ಬಲಿಷ್ಠ ಆಟಗಾರರನ್ನ ಉಳಿಸಿಕೊಳ್ಳೋ ಪ್ಲ್ಯಾನ್ ಗಂಭೀರ್ರದ್ದು. ಹೀಗಾಗಿ ಲಂಕಾ ಸರಣಿಗೆ ಇನ್ನು ಕೇವಲ 10 ದಿನಗಳಷ್ಟೇ ಉಳಿದಿದ್ದು, ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳ ಜೊತೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಪ್ರವಾಸಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐನಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಿದೆ. ಪ್ರವಾಸ ತಂಡವನ್ನು ಅಂತಿಮಗೊಳಿಸಲು ಆಯ್ಕೆದಾರರು ಬುಧವಾರ ಸಭೆ ಸೇರಲಿದ್ದಾರೆ. ಅಂತಿಮವಾಗಿ ಟಿ-20ಐಗೆ ಯಾರನ್ನ ನಾಯಕನನ್ನಾಗಿ ಅನೌನ್ಸ್ ಮಾಡ್ತಾರೆ ಅನ್ನೋದು ಗೊತ್ತಾಗಲಿದೆ. ಇನ್ನು ಏಕದಿನ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್ ಆಗೋದು ಬಹುತೇಕ ಪಕ್ಕಾ ಆಗಿದೆ. ಇನ್ನೇನು ಲಂಕಾ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಘೋಷಣೆಗೆ ಕೌಂಟ್ಡೌನ್ ಶುರುವಾಗಲಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ.

Shwetha M

Leave a Reply

Your email address will not be published. Required fields are marked *