ಮಾಂಸ ಕೊಳ್ಳಲು ಆಗ್ತಿಲ್ಲ.. ಗಗನಕ್ಕೇರಿತು ಚಿಕನ್, ಮೊಟ್ಟೆ ದರ – ನಾನ್ ವೆಜ್ ಪ್ರಿಯರಿಗೆ ಬಿಗ್ ಶಾಕ್
ಬೀನ್ಸ್ 100 ರೂಪಾಯಿ ಕೆಜಿ. ಕ್ಯಾರೆಟ್ ಸೆಂಚುರಿ ಗೆರೆ ದಾಟಿ ಆಗಿದೆ. ಸೊಪ್ಪು ಕೂಡ 30 ರೂಪಾಯಿ ಬಾರ್ಡರ್ ಕ್ರಾಸ್ ಮಾಡಿ ಆಯ್ತು. ಯಾವ ತರಕಾರಿ ಕೊಳ್ಳೋಕೆ ಹೋದ್ರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂಥ ಬೆಲೆ ಇದೆ. ಹೋಗ್ಲಿ ಅತ್ಲಾಗೆ ಚಿಕನ್, ಮಟನ್ನಾದ್ರೂ ತಿನ್ನೋಣ ಅಂತಾ ಅದರ ಬೆಲೆ ಕೇಳಿದ್ರೆ ತಲೆಯೇ ಗಿರ್ಽ ಅನ್ನುವಂತಿದೆ. ಯಾಕಂದ್ರೆ ನಾನ್ ವೆಜ್ ಪ್ರಿಯರ ಜೇಬು ಸುಡುವಂತೆ ಬೆಲೆ ಏರಿಕೆ ಆಗಿದೆ.
ಇದನ್ನೂ ಓದಿ : ʼ40% ಕಮಿಷನ್ ಹಗರಣದ ತನಿಖೆ ಉಚಿತ, ನಿಮಗೆ ಶಿಕ್ಷೆ ಖಚಿತʼ! – ಬಿಜೆಪಿಗೆ ಕಾಂಗ್ರೆಸ್ ಎಚ್ಚರಿಕೆ
ಮೊದಲೇ ತರಕಾರಿ ಬೆಲೆ ಏರಿಕೆಯಾಗಿ ಕಂಗೆಟ್ಟಿದ್ದ ಗ್ರಾಹಕರಿಗೆ ಈಗ ಚಿಕನ್ ಹಾಗೂ ಮೊಟ್ಟೆ ದರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗರಿಷ್ಠ ತಾಪಮಾನ ಮತ್ತು ಹಿಟ್ ವೆವ್ಸ್ ಪರಿಣಾಮದಿಂದಾಗಿ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ. ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಿಕನ್ ( ಬಾಯ್ಲರ್ ) ದರ ಕೆ.ಜಿ 200 ರಿಂದ 210 ರೂ.ಗೆ ಏರಿಕೆಯಾಗಿದೆ. ಸಾಮಾನ್ಯವಾಗಿ 110ರೂ.ರಿಂದ 120 ರೂ.ವರಗೆ ಇರುತ್ತಿತ್ತು. ಇನ್ನು ಫಾರಂ ಕೋಳಿ ಉತ್ಪಾದನೆಯ ದರವೇ 140 ರೂ. ಇದ್ದು ಗ್ರಾಹಕರಿಗೆ 180 ರೂ.ರಿಂದ 190 ರೂ.ಗೆ ಸಿಗುತ್ತಿದೆ. ಚಿಕನ್ ಮಾತ್ರವಲ್ಲದೇ ಮೊಟ್ಟೆ ಬೆಲೆ ಸಹ ಹೆಚ್ಚಳವಾಗಿದೆ.
ತಾಪಮಾನದಿಂದ ಮೊಟ್ಟೆ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಜೊತೆ ಹೀಟ್ ವೇವ್ಸ್ ಹಾಗೂ ತಾಪಮಾನದಿಂದ ಮೊಟ್ಟೆ ದರ ಕೂಡ ಏರಿಕೆಯಾಗಿದೆ. ಸಾಮಾನ್ಯವಾಗಿ 5 ರೂಪಾಯಿ ಇದ್ದ ಒಂದು ಮೊಟ್ಟೆ ಬೆಲೆ ಈಗ 7 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿಯವರೆಗೆ ಮೊಟ್ಟೆ ದರಲ್ಲಿ 2 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಮೊಟ್ಟೆ ಬೆಲೆ ಹೆಚ್ಚಳ ಮಾತ್ರವಲ್ಲದೇ ಉತ್ಪಾದನೆಯಲ್ಲೂ ಸಹ ಕಡಿಮೆಯಾಗಿದೆ. ಮೊಟ್ಟೆ ರಾಜ್ಯದಲ್ಲಿ ನಿತ್ಯ 2.5 ಕೋಟಿ ಬೇಡಿಕೆ ಇದೆ. ಆದ್ರೆ, ಇದೀಗ 2 ಕೋಟಿಯಷ್ಟು ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಬೇಸಿಗೆ ಹೋಗಿ ಮಳೆಗಾಲ ಆರಂಭವಾಗಿದ್ದು, ಮಾಂಸಾಹಾರದ ಬೆಲೆ ಹೆಚ್ಚಳವಾಗಿದೆ. ಕುರಿ, ಕೋಳಿ ಸಾಕಣೆದಾರರಿಗೆ ವರವಾದರೆ, ಸೇವಿಸುವ ಬಾಯಿಗಳಿಗೆ ಖಾರ ಸವಿದಂತಾಗಿದೆ. ಚಿಕನ್, ಮಟನ್ ಮತ್ತು ಮೊಟ್ಟೆ ಸೇವಿಸುವವರಿಗೆ ಈಗ ಬೆಲೆ ಏರಿಕೆ ಬಿಸಿ ತಾಗಿದೆ. ಬಾಡೂಟ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಕೈಸುಡುವಂತಾಗಿದೆ. ಬೆಲೆ ಏರಿಕೆಯಿಂದಾಗಿ ಸಾಕಾಣೆದಾರರಿಗೆ ಒಳ್ಳೆ ಲಾಭವಾಗುತ್ತಿದೆ.