ಹೊಸ ವರ್ಷಕ್ಕೆ ವಾಹನ ಚಾಲಕರಿಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!

ಹೊಸ ವರ್ಷಕ್ಕೆ ವಾಹನ ಚಾಲಕರಿಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!

ಹೊಸ ವರ್ಷ ಬರುತ್ತಿದ್ದಂತೆ ಅನೇಕರು ಒಂದೊಂದು ನಿರ್ಧಾರಗಳನ್ನು ಮಾಡುತ್ತಾರೆ. ತಾನು ಈ ವರ್ಷ ಚೆನ್ನಾಗಿ ಓದಬೇಕು. ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಡ್ರೈವಿಂಗ್‌ ಕಲಿಬೇಕು, ಹೊಸ ವಾಹನ ಖರೀದಿಸುವುದು ಮುಂತಾದ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಈ ಯೋಜನೆಗಳ ಪೈಕಿ ಹೊಸ ವರ್ಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂತಾ ಅಂದುಕೊಳ್ಳುತ್ತಾರೆ. ಈ ವರ್ಷ ಡ್ರೈವಿಂಗ್‌ ಲೈಸನ್ಸ್‌ ಮಾಡಿಸಲು ನೀವು ನಿರ್ಧಾರ ಮಾಡಿದ್ರೆ ನಿಮ್ಮ ಜೇಬಿಗೆ ಹೊರೆಯಾಗುವುದು ಖಚಿತ. 2024ರ ಹೊಸ ವರ್ಷದಿಂದ ಡ್ರೈವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ  ರಾಜ್ಯ ಸಾರಿಗೆ ಇಲಾಖೆಯು ಸಾರ್ವಜನಿಕರಿಗೆ ಶಾಕ್ ನೀಡಿದೆ.

ಹೌದು, ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಬೃಹತ್ ಸಾರಿಗೆ ವಾಹನಗಳೆಂದು 4 ವರ್ಗಗಳಾಗಿ  ಮಾಡಲಾಗಿದ್ದು, ಅವುಗಳಿಗೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. ಹೊಸ ವರ್ಷದಿಂದಲೇ ವಾಹನ ಚಾಲನಾ ತರಬೇತಿ ದರ ಪರಿಷ್ಕರಣೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ವಿವಾದ – ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

10 ವರ್ಷಗಳ ನಂತರ ಬೆಲೆ ಪರಿಷ್ಕರಣೆ

ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಹೋರಾಟದ ಫಲವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.10 ವರ್ಷಗಳ ನಂತರ ದರ ಹೆಚ್ಚಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿಂದೆ 2002 ಮತ್ತು 2013 ರಲ್ಲಿ  ಎರಡು ಬಾರಿ ವಾಹನ ಚಾಲನಾ ತರಬೇತಿ ದರ ಪರಿಷ್ಕರಿಸಲಾಗಿತ್ತು. ಇದೀಗ 2024 ರಿಂದ ವಾಹನ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಹಿಂದೆ 4 ಸಾವಿರ ಇದ್ದ  ಲಘು ಮೋಟಾರು ವಾಹನಗಳ ಚಾಲನಾ ತರಬೇತಿ ದರವು ಈಗ 7 ಸಾವಿರ ರೂ.  ಹೆಚ್ಚಿಸಲಾಗಿದೆ. ಮೂರು ಸಾವಿರ ಇದ್ದ ಆಟೋ ರಿಕ್ಷಾ ತರಬೇತಿ ಈಗ ನಾಲ್ಕು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೋಟಾರು ಸೈಕಲ್ ತರಬೇತಿ ಬೆಲೆ 2,200 ರಿಂದ 3000. ಆರು ಸಾವಿರವಿದ್ದ ಬೃಹತ್ ಸಾರಿಗೆ ವಾಹನಗಳ ಬೆಲೆ 9000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಶುಲ್ಕ ಪರಿಷ್ಕರಣೆಗೆ ಕಾರಣ ಏನು?

ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆ , ಡ್ರೈವಿಂಗ್ ಸ್ಕೂಲ್ ಗಳ ನಿರ್ವಹಣೆ, ತರಬೇತಿ ಸಮಯದಲ್ಲಿ ವಾಹನಗಳ ಡ್ಯಾಮೇಜ್, ವಾಹನಗಳ ಇನ್ಶುರೆನ್ಸ್, ಚಾಲಕರ ದಿನಗೂಲಿ ಇನ್ನಿತರ ಸಮಸ್ಯೆಗಳಿದ್ದು, ಕಳೆದ ಒಂದು ದಶಕದಿಂದ ಒಂದೇ ರೀತಿಯ ದರವನ್ನು ನಿಗದಿ ಮಾಡಿರುವುದರ ವಿರುದ್ಧ ಡ್ರೈವಿಂಗ್‌ಸ್ಕೂಲ್‌ಗಳ ಮಾಲೀಕರು ಸಾರಿಗೆ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಇದನ್ನು ಪರಿಹರಿಸಲು ಸಾರಿಗೆ ಇಲಾಖೆಯು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿಯೊಂದನ್ನು  ರಚನೆ ಮಾಡಿತ್ತು. ಆ ಸಮಿತಿ  ಅಧ್ಯಯನ ಮಾಡಿ 2 ವರ್ಷಗಳ ಹಿಂದೆಯೇ ವರದಿಯನ್ನು ಸಾರಿಗೆ ಇಲಾಖೆಗೆ  ನೀಡಿತ್ತು. ಸಾರಿಗೆ ಇಲಾಖೆಗೆ  ಪ್ರಸ್ತುತ ವರದಿಯನ್ನು ಅಂಗೀಕಾರ ಮಾಡಿದೆ.

Shwetha M