ಡಾಕ್ಟರ್ ಗೆ ಬೆದರಿದ್ರಾ ಡಿಕೆ ಬ್ರದರ್ಸ್? – ಜನಮನ ಗೆಲ್ಲಲು ಸೀರೆ, ಕುಕ್ಕರ್ ಹಂಚಿದ್ರಾ?

ಡಾಕ್ಟರ್ ಗೆ ಬೆದರಿದ್ರಾ ಡಿಕೆ ಬ್ರದರ್ಸ್? – ಜನಮನ ಗೆಲ್ಲಲು ಸೀರೆ, ಕುಕ್ಕರ್ ಹಂಚಿದ್ರಾ?

ಲೋಕಭಸಾ ಚುನಾವಣೆಗೆ ಕರ್ನಾಟಕದ ಕೆಲ ಕ್ಷೇತ್ರಗಳು ಹೈವೋಲ್ಟೇಜ್ ಅಖಾಡಗಳಾಗಿ ಮಾರ್ಪಟ್ಟಿವೆ. ಈ ಪೈಕಿ ಬೆಂಗಳೂರು ಗ್ರಾಮಾಂತರವೂ ಕೂಡ ಒಂದು. ಇಷ್ಟು ದಿನ ಡಿಕೆ ಬ್ರದರ್ಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರಕ್ಕೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅಚ್ಚರಿಯ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದಾರೆ.  ದೊಡ್ಡಗೌಡರ ಅಳಿಯ ಡಾಕ್ಟರ್ ಸಿ.ಎನ್ ಮಂಜುನಾಥ್ ಅವ್ರು ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ಸ್ಪರ್ಧಿಯಾಗಿದ್ದಾರೆ. ಆದ್ರೆ ಈ ಚುನಾವಣೆ ಎರಡು ಅಭ್ಯರ್ಥಿಗಳ ನಡುವಿನ ಸೋಲು ಗೆಲುವಿನ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯ ಕಾಳಗವಾಗಿದೆ. ಅದುವೇ ಹೆಚ್​ಡಿ ದೇವೇಗೌಡ ಮತ್ತು ಡಿಕೆ ಬ್ರದರ್ಸ್ ಫ್ಯಾಮಿಲಿ ನಡುವಿನ ಜಿದ್ದಾಜಿದ್ದಿ. ಕ್ಷೇತ್ರದಲ್ಲಿ ವೈದ್ಯ ಮಂಜುನಾಥ್ ಪರ ಮೆಲ್ಲನೆ ಅಲೆ ಏಳುತ್ತಿದ್ದು ಇದು ಡಿಕೆ ಬ್ರದರ್ಸ್​​ಗೂ ಆತಂಕ ತಂದೊಡ್ಡಿದೆ. ಇದರ ನಡುವೆ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್  ಜೋರಾಗಿದೆ. ಅಷ್ಟಕ್ಕೂ ಡಿಕೆ ಬ್ರದರ್ಸ್​​ಗೆ ಭಯ ಕಾಡುತ್ತಿದ್ಯಾ..? ಮಂಜುನಾಥ್ ಕಮಾಲ್ ಮಾಡ್ತಾರಾ..? ಏನಿದು ಗಿಫ್ಟ್ ಪಾಲಿಟಿಕ್ಸ್..? ಈ ಕುರಿತ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್ ಆಫರ್ ಕೊಟ್ಟ ಬೆನ್ನಲ್ಲೇ ಮಧ್ಯಸ್ಥಿಕೆ ವಹಿಸಿದ RSS – ಡಿವಿಎಸ್ ಮುಂದಿನ ನಡೆ ಏನು?

ಕಾಂಗ್ರೆಸ್‌ನಿಂದ ಹಾಲಿ ಸಂಸದ ಡಿ.ಕೆ ಸುರೇಶ್, ಬಿಜೆಪಿ -ಜೆಡಿಎಸ್ ಮೈತ್ರಿ ಕೂಟದಿಂದ ಖ್ಯಾತ ಹೃದ್ರೋಗ ತಜ್ಞ, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. ಮಂಜುನಾಥ್ ಅವ್ರು ಸ್ವಂತ ಮಾವನ ಪಕ್ಷ ಬಿಟ್ಟು ಬಿಜೆಪಿಗೆ ಸೇರಿರುವುದರ ಹಿಂದೆ ಲೆಕ್ಕಾಚಾರ ಇಲ್ಲದೇನಿಲ್ಲ. ಮಂಜುನಾಥ್‌ ಅವರಿಗೆ ಇರುವ ಪ್ರಸಿದ್ಧಿಯನ್ನು ಬಳಸಿಕೊಂಡು ಪ್ರಬಲ ನಾಯಕ ಸುರೇಶ್‌ ಅವರನ್ನು ಕಟ್ಟಿ ಹಾಕುವ ಜೆಡಿಎಸ್‌ ಮತ್ತು ಬಿಜೆಪಿ ಮಾಸ್ಟರ್‌ ಪ್ಲಾನ್‌ ಇದಾಗಿದೆ. ಒಕ್ಕಲಿಗ ಮತದಾರರೇ ಹೆಚ್ಚಾಗಿದ್ದು, ಇಬ್ಬರು ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು. ಹಿಂದುಳಿದ, ದಲಿತ, ಮುಸ್ಲಿಂ ಮತಗಳೇ ನಿರ್ಣಾಯಕ. ಹೀಗಿದ್ರೂ ಸರಳ, ಸಜ್ಜನಿಕೆಯ ವೈದ್ಯರ ಕಡೆ ಮತದಾರರು ಒಲವು ತೋರುವ ಆತಂಕ ಡಿಕೆ ಬ್ರದರ್ಸ್​ಗೆ ಇದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಈಗಿಂದಲೇ ಫುಲ್ ಆಕ್ಟಿವ್ ಆಗಿದ್ದಾರೆ. ಗಿಫ್ಟ್ ಪಾಲಿಟಿಕ್ಸ್ ಕೂಡ ಶುರು ಮಾಡಿದ್ದಾರೆ.

ಗಿಫ್ಟ್ ಪಾಲಿಟಿಕ್ಸ್! 

ರಾಮನಗರದ ದ್ಯಾವರಸೇಗೌನದೊಡ್ಡಿ ಗ್ರಾಮದ ಬಳಿಯ ಗೋಡೌನ್ ವೊಂದರಲ್ಲಿ ಲಾರಿಗೆ ಸೀರೆ ತುಂಬುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ದಾಳಿ ಮಾಡಿ ಅಕ್ರಮ ಪತ್ತೆ ಮಾಡಿದ್ದಾರೆ.  ಜೆಡಿಎಸ್‌ ಕಾರ್ಯಕರ್ತರು ಪತ್ತೆ ಹಚ್ಚಿದ ದಾಸ್ತಾನಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀರೆಗಳ ಸಂಗ್ರಹ ಪತ್ತೆಯಾಗಿದ್ದು, ಕಾಂಗ್ರೆಸ್ ನಾಯಕರಿಂದ ಮತದಾರರಿಗೆ ಹಂಚಲು ಸೀರೆ ಸಂಗ್ರಹ ಮಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ದಾಳಿಗೂ ಮುನ್ನವೇ ನಾಲ್ಕು ಲಾರಿಗಳಷ್ಟು ಸೀರೆ ಇಲ್ಲಿಂದ ಹೊರಗೆ ಸಾಗಿಸಿದ್ದಾರೆ ಎಂದಿದ್ದಾರೆ.  ಅಕ್ರಮ ಸೀರೆ ದಾಸ್ತಾನು ಪತ್ತೆಯಾದ ಸ್ಥಳದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಸೀರೆ ಕವರ್ ಮೇಲೆ ಯಾವ ಸ್ಟಿಕ್ಕರ್ ಇಲ್ಲ, ಯಾರ ಹೆಸರೂ ಇಲ್ಲ. ಕೇವಲ ಗೋಡನ್‌ನಲ್ಲಿ ಇದ್ದ ಮಾತ್ರಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಕಿಡಿ ಕಾರಿದ್ದಾರೆ.  ಹೀಗೆ ಗಿಫ್ಟ್ ಪಾಲಿಟಿಕ್ಸ್ ನಡುವೆ ಕ್ಷೇತ್ರದಲ್ಲಿ ಅಲರ್ಟ್ ಆಗಿರುವ ಡಿ.ಕೆ. ಸಹೋದರರು ಕ್ಷೇತ್ರದ ಪ್ರಮುಖ ನಾಯಕರ ಜೊತೆ ಉಪಹಾರ ಕೂಟ ನಡೆಸಿದ್ದಾರೆ. ಕ್ಷೇತ್ರದ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯ ಸ್ರ್ಪಧಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಪ್ರಮುಖರೊಂದಿಗೆ ಉಪಹಾರ ಸೇವಿಸಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಕುಣಿಗಲ್, ಆನೇಕಲ್, ರಾಮನಗರ, ಕನಕಪುರ, ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅತಿ ದೊಡ್ಡ ಕ್ಷೇತ್ರವಾಗಿದ್ದು, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರಾಬಲ್ಯವಿದೆ. ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲವಾಗಿದ್ದ ಕ್ಷೇತ್ರಗಳ ಪೈಕಿ ಈ ಕ್ಷೇತ್ರ ಕೂಡ ಒಂದು. ಅಂತಹ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಯವರು, ಮೈತ್ರಿಯ ನೆಪದಲ್ಲಿ ಕುಟುಂಬದ ಮತ್ತೊಂದು ಕುಡಿಯನ್ನು ಕಣಕ್ಕಿಳಿಸಿದ್ದಾರೆ. ಗೆದ್ದರೆ ಬಿಜೆಪಿಗೆ ಒಂದು ಸ್ಥಾನ. ಆದರೆ ಗೌಡರ ಕುಟುಂಬಕ್ಕೆ ಅದು ಪ್ರತಿಷ್ಠೆಯ ಪ್ರಶ್ನೆ.

ಮೈತ್ರಿಗೆ ವೈದ್ಯರೇ ಸಂಜೀವಿನಿ! 

ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರಿಗೆ ಸೇಡು ಇದೆ. ಹೀಗಾಗಿ ಏನಾದ್ರೂ ಮಾಡಿ ಡಿ.ಕೆ ಸುರೇಶ್ ಅವ್ರನ್ನ ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅಲ್ಲದೇ ಡಾ.ಸಿ.ಎನ್ ಮಂಜುನಾಥ್ ಅವರೇ ಸಮರ್ಥ ಅಭ್ಯರ್ಥಿ ಎಂದು ನಿರ್ಧರಿಸಿದ್ದಾರೆ. ಯಾಕೆಂದರೆ ಮಂಜುನಾಥ್ ಅವರ ವಿರುದ್ಧ ಪ್ರಚಾರಕ್ಕೆ ಡಿಕೆ ಬ್ರದರ್ಸ್ ಬಳಿ ಯಾವುದೇ ಅಸ್ತ್ರ ಇಲ್ಲ. ಇದೇ ದೋಸ್ತಿ ಪಕ್ಷಗಳಿಗೆ ದೊಡ್ಡ ಅಡ್ವಾಂಟೇಜ್ ಕೂಡ ಆಗಿದೆ. ಸಜ್ಜನ ಡಾ. ಮಂಜುನಾಥ್ ಸ್ಪರ್ಧಿಸಿದರೆ ಡಿಕೆ ಸುರೇಶ್‍ಗೆ ಭಾರೀ ಹಿನ್ನಡೆ ಆಗುವ ನಿರೀಕ್ಷೆಯಲ್ಲಿ ದೋಸ್ತಿಗಳು ಇದ್ದಾರೆ. ಖುದ್ದು ದೇವೇಗೌಡರೂ ಸಹ ಡಿಕೆಸು ಸೋಲಿಸಲು ಕ್ಷೇತ್ರ ಪರ್ಯಟನೆಗೆ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೇ ಡಾ.ಮಂಜುನಾಥ್ ಪರ ಎಲ್ಲ ವರ್ಗದವರೂ ಮತ ಹಾಕುವ ವಿಶ್ವಾಸದಲ್ಲಿ ಮೈತ್ರಿ ಕೂಟ ಇದೆ. ಡಾ.ಮಂಜುನಾಥ್ ಇಮೇಜ್, ಮೋದಿ ಟ್ರೆಂಡ್, ರಾಮಮಂದಿರ ಅಲೆ ಹಾಗೂ ದೋಸ್ತಿ ಒಗ್ಗಟ್ಟು ಮೂಲಕ ಡಿಕೆಸು ಸೋಲಿಸಲು ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ.

ಕ್ಷೇತ್ರದಲ್ಲಿ ಡಿಕೆ ಸುರೇಶ್ ಪ್ರಬಲ ನಾಯಕ. ಕೆಲಸಗಾರ, ಹಾರ್ಡ್ ವರ್ಕರ್ ಎಂಬುದು ಪ್ಲಸ್ ಪಾಯಿಂಟ್‌. ಕೊರೋನ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಕುಟುಂಬವಿದ್ದೂ ಕೊರೋನ ಕಾರಣಕ್ಕೆ ಶವದ ಹತ್ತಿರ ಸುಳಿಯದಿರುವ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರವನ್ನು ಸುರೇಶ್‌ ಸ್ವತಃ ಮಾಡಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರದ ಜನರ, ಪಕ್ಷದ ಮುಖಂಡರ ಜತೆ ನಿರಂತರ ಸಂಪರ್ಕ ಸಾಧಿಸಿ ಹಿಡಿತ ಹೊಂದಿದ್ದಾರೆ. ಸಹೋದರ ಉಪಮುಖ್ಯಮಂತ್ರಿಯೂ ಆಗಿರುವ ಕಾರಣ ಕ್ಷೇತ್ರಕ್ಕೆ ಅನುದಾನ ತರುವುದು ಕಷ್ಟವೇನಲ್ಲ. ಆ ಮೂಲಕ ಕ್ಷೇತ್ರದ ಅಭಿವೃದ್ಧಿಯ ಹೆಸರು ಹೇಳಿ ಮತ ಕೇಳಬಹುದು. ಮತ್ತೊಂದೆಡೆ ಸರ್ಕಾರಿ ವೈದ್ಯರಾಗಿದ್ದ ಮಂಜುನಾಥ್‌ ಈಗ ನಿವೃತ್ತರಾದ ನಂತರ ರಾಜಕಾರಣಕ್ಕೆ ಬಂದಿದ್ದಾರೆ. ಸಜ್ಜನ, ಹೃದ್ರೋಗ ತಜ್ಞ ಎಂಬ ಕಾರಣಕ್ಕೆ ಬಿಜೆಪಿ- ಜೆಡಿಎಸ್‌ ಮತ ಕೇಳಿದರೆ ಅಷ್ಟಕ್ಕೇ ಮತ ನೀಡುವಷ್ಟು ಜನ ದಡ್ಡರೇನಲ್ಲ. ಹಾಗಂತ ಚುನಾವಣಾ ಕಣದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋದನ್ನ ತಳ್ಳಿ ಹಾಕುವಂತೆಯೂ ಇಲ್ಲ.

Shwetha M