ಬೆಂಗಳೂರು ಕಂಬಳ ಆಯೋಜಕರಿಗೆ ಬಿಗ್ ಶಾಕ್ – ಭಾರಿ ದಂಡ ವಿಧಿಸಿದ ಬಿಬಿಎಂಪಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಂಬಳ ಕರೆ ಉದ್ಘಾಟನೆ ಮಾಡಿದ್ದಾರೆ. ಸಾವಿರಾರು ಜನರು ಕಂಬಳ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಈ ಬೆನ್ನಲ್ಲೇ ಕಂಬಳ ಆಯೋಜಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಗ್ ಶಾಕ್ ನೀಡಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಲರವ – ಕಂಬಳ ಕರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಹೌದು, ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕರಾವಳಿ ಜಿಲ್ಲೆಯ ಜನಪದ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಆದರೆ, ಈ ವೇಳೆ ಕಂಬಳ ಆಯೋಜನೆ ಮಾಡುವ ಆಯೋಜಕರಿಗೆ ಬಿಬಿಎಂಪಿ ದಂಡ ವಿಧಿಸಿದೆ.
ಕಂಬಳ ಆಯೋಜಕರು ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅರಮನೆ ಮೈದಾನ ಹಾಗೂ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರದರ್ಶನಾ ಫಲಕಗಳನ್ನು ಅಳವಡಿಕೆ ಮಾಡಿ ಜಾಹೀರಾತು ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಕಂಬಳ ನಡೆಯುತ್ತಿದೆ. ಸಿಲಿಕಾನ್ ಸಿಟಿ ಜನರಿಗೆ ಕಂಬಳದ ಜೊತೆಗೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದ್ದು, ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ, ಜನಪದ ಕುಣಿತ ಕಂಗೀಲು, ಕಂರ್ಗೋಲು, ಮಾಂಕಾಳಿ ಕುಣಿತ ಸೇರಿದಂತೆ ಅಪರೂಪದ ಕುಣಿತಗಳಿಗೂ ಇರಲಿವೆ. ಕಂಬಳದಲ್ಲಿ ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, 2ನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, 3ನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.