ಪತ್ನಿಯರಿಗೆ ಬ್ರೇಕ್.. ಲಗೇಜ್ ಗೂ ಕತ್ತರಿ – ಚಾಂಪಿಯನ್ಸ್ ಟ್ರೋಫಿಗೆ ಟಫ್ ರೂಲ್ಸ್

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಹೀನಾಯವಾಗಿ ಸೋಲನ್ನ ಕಂಡಿತ್ತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಮುಗ್ಗರಿಸಿತ್ತು. ಇದ್ರ ಎಫೆಕ್ಟೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ನಿಂದ ಹೊರಬಿದ್ದಿದ್ದು. ಇದೀಗ ಐಸಿಸಿಯ ಮಹತ್ವದ ಟೂರ್ನಿಯಾಗಿರುವ ಚಾಂಪಿಯನ್ಸ್ ಟ್ರೋಫಿ ಮುಂದಿನ ತಿಂಗಳಲ್ಲಿ ಶುರುವಾಗಲಿದೆ. ಈ ಟೂರ್ನಿಗೂ ಮುನ್ನವೇ ಆಟಗಾರರ ಆಟಾಟೋಪಕ್ಕೆ ಕಡಿವಾಣ ಹಾಕಲು ಬಿಸಿಸಿಐ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಬೆನ್ನಲ್ಲೇ ಬಿಸಿಸಿಐ ಹೊಸ ನಿಯಮಗಳನ್ನ ಜಾರಿಗೆ ತರಲು ಮುಂದಾಗಿದೆ. ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಅದರಲ್ಲಿ ಕ್ರಿಕೆಟಿಗರ ಕುಟುಂಬಕ್ಕೆ ನೀಡಿರುವ ಸೌಲಭ್ಯಗಳನ್ನು ಕಡಿತಗೊಳಿಸುವ ಬಗ್ಗೆಯೂ ನಿರ್ಧರಿಸಲಾಗಿದೆ. ಜೊತೆಗೆ ಕೋಚ್ ಗೌತಮ್ ಗಂಭೀರ್ಗೆ ನೀಡಲಾಗಿದ್ದ ಕೆಲ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಈ ಹಿಂದೆ ಯಾರಿಗೂ ನೀಡದ ಅಧಿಕಾರ ಮತ್ತು ಸ್ವಾತಂತ್ರ್ಯಗಳನ್ನು ಬಿಸಿಸಿಐ ನೀಡಿತ್ತು. ತಂಡದ ಆಯ್ಕೆಯ ಜೊತೆಗೆ, ಸಹಾಯಕ ತರಬೇತುದಾರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇಷ್ಟೆಲ್ಲ ಮಾಡಿದರೂ ಟೀಂ ಇಂಡಿಯಾದಿಂದ ನಿರೀಕ್ಷಿಸಿದ ಫಲಿತಾಂಶ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಗಂಭೀರ್ಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : CT ಯಲ್ಲಿ ಭಾರತ ವೀಕ್ ಆಯ್ತಾ – IND Vs PAK.. ಯಾರು ಸ್ಟ್ರಾಂಗ್?
ಟೀಂ ಇಂಡಿಯಾ ಪಂದ್ಯಗಳು ನಡೆಯುವ ವೇಳೆ ಆಟಗಾರರ ಪತ್ನಿಯರು ಹಾಗೇ ಅವ್ರ ಫ್ಯಾಮಿಲಿ ಮೆಂಬರ್ಸ್ ಚಿಯರ್ ಮಾಡೋದನ್ನ ನಾವೆಲ್ಲಾ ನೋಡೇ ಇರ್ತೀವಿ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರ ಪತ್ನಿಯರು ಅತೀ ಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಳ್ತಾರೆ. ಬಟ್ ಇನ್ಮುಂದೆ ಪ್ರತೀ ಪಂದ್ಯದಲ್ಲೂ ಆಟಗಾರರ ಫ್ಯಾಮಿಲಿಯವ್ರಿಗೆ ಪ್ರವೇಶ ಇರೋದಿಲ್ಲ. 2019 ರಿಂದ, ಭಾರತದ ಹಿರಿಯ ಆಟಗಾರರು ಕ್ರಿಕೆಟ್ ಪಂದ್ಯಗಳಿಗಾಗಿ ವಿದೇಶಿ ಪ್ರವಾಸಕ್ಕೆ ತೆರಳಿದರೆ ಕುಟುಂಬ ಸದಸ್ಯರು ಅವರೊಂದಿಗೆ ಹೋಗಲು ಅನುಮತಿ ನೀಡಿತ್ತು. ಬಟ್ ಇದೇ ಈಗ ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪರಿಗಣಿಸಿರುವ ಬಿಸಿಸಿಐ ಇನ್ಮುಂದೆ ಪತ್ನಿ ಸೇರಿದಂತೆ ಕುಟುಂಬದ ಯಾವೊಬ್ಬ ಸದಸ್ಯರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದೆ. ಐದು ವರ್ಷಗಳ ಹಿಂದೆ ಜಾರಿಯಲ್ಲಿದ್ದ ನಿಯಮಗಳನ್ನು ಮರಳಿ ತರಲು ಬಿಸಿಸಿ ಯೋಚಿಸುತ್ತಿದೆ.
ಫ್ಯಾಮಿಲಿ ಪ್ರಯಾಣಕ್ಕೆ ಕತ್ತರಿ ಹಾಕಲಿರುವ ಬಿಸಿಸಿಐ ಕೆಲ ಕಂಡೀಷನ್ಸ್ ಹಾಕಲು ಮುಂದಾಗಿದೆ. ಅಂದ್ರೆ ಒಂದು ವೇಳೆ ವಿದೇಶಿ ಪ್ರವಾಸ 45 ದಿನಕ್ಕೂ ಮೇಲಿದ್ದರೆ ಕುಟುಂಬ ಸದಸ್ಯರಿಗೆ 14 ದಿನಗಳು ಮಾತ್ರ ಇರಲು ಅವಕಾಶವಿರುತ್ತದೆ. ಒಂದು ವೇಳೆ ಒಂದು ತಿಂಗಳಿಗೂ ಕಡಿಮೆ ಪ್ರವಾಸ ಇದ್ದರೇ ಕುಟುಂಬ ಸದಸ್ಯರಿಗೆ 7 ದಿನದ ಅವಕಾಶ ನೀಡಲಾಗುತ್ತದೆ. ಇದಲ್ಲದೇ ತಂಡದ ಎಲ್ಲ ಸದಸ್ಯರು ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು. ಜೊತೆಗೆ ಗೌತಮ್ ಗಂಭೀರ್ ಅವರ ಪರ್ಸನಲ್ ಮ್ಯಾನೇಜರ್ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿದ್ದು ಇನ್ಮುಂದೆ ಅವರು ವಿಐಪಿ ಬಾಕ್ಸ್ನಲ್ಲಿ ಕುಳಿತುಕೊಳ್ಳುವಂತಿಲ್ಲ ಮತ್ತು ತಂಡದ ಬಸ್‌ನಲ್ಲಿ ಸವಾರಿ ಮಾಡುವಂತಿಲ್ಲ. ತಂಡವೂ ತಂಗಿರುವ ಹೋಟೆಲ್‌ನಲ್ಲೂ ಇರುವಂತಿಲ್ಲ.
ಇನ್ನು ಆಟಗಾರರು ಕೊಂಡೊಯ್ಯುವ ಲಗೇಜ್ ಮೇಲೆಗೂ ರಿಸ್ಟ್ರಿಕ್ಷನ್ಸ್ ಇರಲಿದೆ. ಆಟಗಾರರ ಲಗೇಜ್ 150 ಕೆಜಿಗಿಂತ ಹೆಚ್ಚು ತೂಕವಿದ್ದರೆ, ಬಿಸಿಸಿಐ ಹೆಚ್ಚುವರಿ ಶುಲ್ಕವನ್ನು ಪಾವತಿಸುವುದಿಲ್ಲ. ಅದಕ್ಕೆ ಆಟಗಾರರೆ ಹಣ ಪಾವತಿಸಬೇಕಾಗುತ್ತದೆ. ಹಾಗೇ ಟೀಮ್ ಇಂಡಿಯಾ ಆಟಗಾರರು ಒಂದೇ ಬಸ್‌ನಲ್ಲಿ ಪ್ರಯಾಣಿಸಬೇಕೆಂಬ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲ ಸ್ಟಾರ್ ಆಟಗಾರರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿತ್ತು. ಪ್ರತಿಯೊಬ್ಬ ಆಟಗಾರನು ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕೆಂದು, ಪ್ರತ್ಯೇಕ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ. ಈ ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ಹದ್ದುಬಸ್ತಿನಲ್ಲಿಡಲು ಬಿಸಿಸಿಐ ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.