ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ಡಿ.ಕೆ ಶಿವಕುಮಾರ್ ಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್!

ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ಡಿ.ಕೆ ಶಿವಕುಮಾರ್ ಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್!

ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಾಗಿನಿಂದ ಕಾಂಗ್ರೆಸ್ ಪಾಳಯದಲ್ಲಿ ಯಾರಾಗ್ತಾರೆ ಸಿಎಂ ಅನ್ನೋ ಚರ್ಚೆಯೇ ಜೋರಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದು ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನ ಸಿಎಂ ಆಗಿ ಆಯ್ಕೆ ಮಾಡಿದೆ. ಸಿಎಂ ಗದ್ದುಗೆ ತಪ್ಪಿದ ನಿರಾಸೆಯಲ್ಲಿರೋ ಡಿಕೆಶಿಗೆ ಸುಪ್ರೀಂ ಕೋರ್ಟ್ ನಿಂದಲೂ ಬಿಗ್ ರಿಲೀಫ್ ಸಿಕ್ಕಿದೆ.

ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ತಡೆಯಾಜ್ಞೆ ತೆರವಿಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ತೆರವು ಕೋರಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿತು. ಆದರೆ ಇಂದು ಯಾವುದೇ ಮಧ್ಯಂತರ ಆದೇಶ ನೀಡಲು  ಸುಪ್ರೀಂಕೋರ್ಟ್ ನಿರಾಕರಿಸಿದ್ದು, ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಲ್ಲೇ ಅರ್ಜಿ ಸಲ್ಲಿಸಬಹುದು ಎಂದು ಸಿಬಿಐಗೆ ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ ತಿಂಗಳಿಗೆ ಮುಂದೂಡಿದೆ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ತಾತ್ಕಾಲಿಕವಾಗಿ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ : ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಹಕಾರ ನೀಡದಿದ್ದಕ್ಕೆ ಸೋಮಣ್ಣ ಸೋಲು – ಕೃತಜ್ಞತಾ ಸಭೆಯಲ್ಲಿ ಗಲಾಟೆ 

ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣದ ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಸಿಬಿಐ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಹೈಕೋರ್ಟ್ ರಜೆ ಅವಧಿ ಮುಗಿಯಲಿರುವುದರಿಂದ ಅಲ್ಲೇ ವಿಚಾರಣೆ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಇನ್ನು ಡಿಕೆಶಿ ಮತ್ತು ಅವರ ಕುಟುಂಬದ ಸದಸ್ಯರು 74.93 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬ ಆರೋಪ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಅದರಂತೆ 2020ರ ಅಕ್ಟೋಬರ್ 5ರಂದು ದೆಹಲಿ, ಮುಂಬೈ ಸೇರಿದಂತೆ ಡಿ.ಕೆ ಶಿವಕುಮಾರ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಸಿಬಿಐ ಏಕಕಾಲಕ್ಕೆ ದಾಳಿ ನಡೆಸಿತ್ತು. ಈ ವೇಳೆ ಕಂಪ್ಯೂಟರ್ ಹಾರ್ಡ್​ಡಿಸ್ಕ್​ ಹಾಗೂ 57 ಲಕ್ಷ ರೂ. ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

suddiyaana