ಧೋನಿ ಇಲ್ಲದೆ ತಂಡಕ್ಕೆ ದೊಡ್ಡ ನಷ್ಟ – ಎಡವಿದ್ದೆಲ್ಲಿ ಎಂದು ವಿವರಿಸಿದ CSK ನಾಯಕ ರುತುರಾಜ್ ಗಾಯಕ್ವಾಡ್

ಧೋನಿ ಇಲ್ಲದೆ ತಂಡಕ್ಕೆ ದೊಡ್ಡ ನಷ್ಟ –  ಎಡವಿದ್ದೆಲ್ಲಿ ಎಂದು ವಿವರಿಸಿದ CSK ನಾಯಕ ರುತುರಾಜ್ ಗಾಯಕ್ವಾಡ್

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಇಂಜುರಿ ಸಮಸ್ಯೆ ಟೂರ್ನಿಯುದ್ದಕ್ಕೂ ಕಾಡಿದೆ. ತಲಾ ಎಂ.ಎಸ್ ಧೋನಿ ತಂಡದ ಪರ ಒಂದೇ ಒಂದು ಪಂದ್ಯವನ್ನಾಡಿಲ್ಲ. ಜೊತೆಗೆ ತಂಡದ ಕಳಪೆ ಪ್ರದರ್ಶನದ ಜೊತೆ ಗುಜರಾತ್ ಟೈಟಾನ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಇದೀಗ ತಂಡದ ಸೋಲಿಗೆ ಕಾರಣ ವಿವರಿಸಿದ್ದಾರೆ ನಾಯಕ ರುತುರಾಜ್ ಗಾಯಕ್ವಾಡ್.

ಇದನ್ನೂ ಓದಿ:ಗುಜರಾತ್ ವಿರುದ್ಧ ಸೋತು ಪ್ಲೇ ಆಫ್‌ ರೇಸ್‌ನಿಂದ ಹೊರ ಬಿದ್ದ CSK

ಪ್ಲೇಆಫ್‌ ರೇಸ್‌ಗೆ ಎಂಟ್ರಿ ಕೊಡುವ ಅವಕಾಶ ಮಿಸ್ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಗಂಟು ಮೂಟೆ ಕಟ್ಟಿದೆ. ಎಂ.ಎಸ್. ಧೋನಿ ಅವರ ಅನುಪಸ್ಥಿತಿ ಕೂಡಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ ಇತಿಹಾಸದ 19 ಸೀಸನ್‌ಗಳಲ್ಲಿ ಇದೇ ಮೊದಲ ಬಾರಿಗೆ ಎಂ.ಎಸ್. ಧೋನಿ ಒಂದೇ ಒಂದು ಪಂದ್ಯವನ್ನೂ ಆಡದೆ ಇಡೀ ಸೀಸನ್‌ನಿಂದ ಹೊರಗುಳಿದಿದ್ದಾರೆ. ಧೋನಿ ಅನುಪಸ್ಥಿತಿ ತಂಡದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ರುತುರಾಜ್ ಗಾಯಕ್ವಾಡ್ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಂದಿನ ಸೀಸನ್‌ನಲ್ಲಿ ಧೋನಿ ವಾಪಸ್ ಬರುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ಮುಂದಿನ ಸೀಸನ್‌ನಲ್ಲಿ ಧೋನಿ ಆಡುತ್ತಾರಾ ಅನ್ನೋದು ಮುಂದಿನ ವರ್ಷವೇ ಗೊತ್ತಾಗುತ್ತೆ. ನನಗೂ ಕೂಡ ಆಗಲೇ ತಿಳಿಯೋದು. ಸದ್ಯಕ್ಕೆ ಈ ಬಗ್ಗೆ ಏನೂ ಹೇಳೋಕೆ ಆಗಲ್ಲ ಎಂದು ರುತುರಾಜ್ ಉತ್ತರಿಸಿದರು.

ಕ್ರೀಸ್‌ನಲ್ಲಿ ಧೋನಿ ಸೃಷ್ಟಿಸುತ್ತಿದ್ದ ಇಂಪ್ಯಾಕ್ಟ್ ಈ ಸೀಸನ್‌ನಲ್ಲಿ ತಂಡಕ್ಕೆ ದೊಡ್ಡ ನಷ್ಟವಾಗಿತ್ತು. ಅವರ ಅನುಪಸ್ಥಿತಿ ನಮಗೆ ದೊಡ್ಡ ಹಿನ್ನಡೆಯೇ ಸರಿ. ಕೊನೆಯ ಓವರ್‌ಗಳಲ್ಲಿ ಎದುರಾಳಿಗಳಲ್ಲಿ ಭಯ ಹುಟ್ಟಿಸಿ, ಒಬ್ಬರೇ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಈ ಸೀಸನ್‌ನಲ್ಲಿ ನಾವು ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದೇವೆ. ಮುಂದಿನ ಸೀಸನ್‌ನಲ್ಲಿ ಏನಾಗುತ್ತೆ ಅಂತ ಊಹಿಸಲು ಸಾಧ್ಯವಿಲ್ಲ ಎಂದು ರುತುರಾಜ್ ಹೇಳಿದರು. ತಂಡದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನೂ ಗಾಯಕ್ವಾಡ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೇಮಿ ಓವರ್‌ಟನ್ ಮತ್ತು ಆಲ್‌ರೌಂಡರ್ ರಾಮಕೃಷ್ಣ ಘೋಷ್ ಅವರ ಗಾಯದ ಸಮಸ್ಯೆಗಳು ತಂಡದ ಪ್ಲೇಯಿಂಗ್ XI ಸಂಯೋಜನೆಯನ್ನು ಹಾಳುಮಾಡಿದವು. ಕೊನೆಯ ಮೂರು ಪಂದ್ಯಗಳಲ್ಲಿ ಸರಿಯಾದ ಬ್ಯಾಟರ್ ಅಥವಾ ಬೌಲರ್ ಇಲ್ಲದೆ ತಂಡವು ಕಣಕ್ಕಿಳಿಯಬೇಕಾಯಿತು ಎಂದು ಅವರು ವಿವರಿಸಿದರು.

ಸಿಎಸ್‌ಕೆ ಸದ್ಯ ದೊಡ್ಡ ಬದಲಾವಣೆಯ ಹಂತದಲ್ಲಿದೆ. ತಂಡದ 8 ರಿಂದ 10 ಆಟಗಾರರು 20ಕ್ಕಿಂತ ಕಡಿಮೆ ಐಪಿಎಲ್ ಪಂದ್ಯಗಳ ಅನುಭವ ಹೊಂದಿದವರಾಗಿದ್ದಾರೆ. ನಾವು ಯುವ ತಂಡದೊಂದಿಗೆ ಆಡುತ್ತಿದ್ದೇವೆ ಎಂಬುದನ್ನು ಹೊರಗಿನವರು ಬೇಗ ಒಪ್ಪುವುದಿಲ್ಲ. ಆದರೂ, ಈ ಟೂರ್ನಮೆಂಟ್ ಯುವ ಆಟಗಾರರಿಗೆ ಉತ್ತಮ ಅನುಭವವನ್ನು ನೀಡಿದೆ. ನಮಗೆ ಎಲ್ಲಿ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಲು ಈ ಸೀಸನ್ ಸಹಾಯ ಮಾಡಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಆರು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾದ ಬಗ್ಗೆ ಈ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರುತುರಾಜ್ ಗಾಯಕ್ವಾಡ್ ಸ್ಪಷ್ಟಪಡಿಸಿದರು. 7ನೇ ಸ್ಥಾನದೊಂದಿಗೆ ಸಿಎಸ್‌ಕೆ  ಈ ಬಾರಿಯ ಐಪಿಎಲ್ ಟೂರ್ನಿಯ ಅಭಿಯಾನ ಮುಗಿಸಿದೆ.

Sulekha

Leave a Reply

Your email address will not be published. Required fields are marked *