ರಿಯಲ್ ಹೀರೋ KL RAHUL – ವಿದ್ಯಾರ್ಥಿ ಶಿಕ್ಷಣಕ್ಕೆ ಬೆಳಕಾದ ಕನ್ನಡಿಗ
RCB ಫ್ಯಾನ್ಸ್ ಕನಸು ನನಸಾಗುತ್ತಾ?
ಕೆ.ಎಲ್.ರಾಹುಲ್.. ಒಬ್ಬ ಅದ್ಭುತ ಹಾಗೇ ಪ್ರತಿಭಾವಂತ ಆಟಗಾರ. ಒಬ್ಬ ನಾಯಕನಾಗಿ, ಓಪನರ್ ಆಗಿ ತಂಡಕ್ಕೆ ಸದಾ ಬೆನ್ನೆಲುಬಾಗುವ ಪ್ಲೇಯರ್. ಕೂಲ್ ಌಂಡ್ ಕಾಮ್ ಆಗಿ ಎಂಥಾ ಸಿಚುಯೇಶನ್ನೂ ಹ್ಯಾಂಡಲ್ ಮಾಡುವ ಕೆಎಲ್ ರಾಹುಲ್ಗೆ ಯಾವುದೇ ಸ್ಲಾಟ್ನಲ್ಲೂ ಕೂಡ ಬ್ಯಾಟ್ ಬೀಸಬಲ್ಲ ಕಲೆಗಾರಿಕೆ ಗೊತ್ತಿದೆ. ಕನ್ನಡಿಗನಾಗಿ ಟೀಂ ಇಂಡಿಯಾದಲ್ಲಿ ಸದ್ದು ಮಾಡ್ತಿರೋ ರಾಹುಲ್ ನಿಜಜೀವನದಲ್ಲೂ ಮಾದರಿಯಾಗುವಂಥ ವ್ಯಕ್ತಿ. ಇದೀಗ ಕೆಎಲ್ ರಾಹುಲ್ ಹೆಸರು ಮತ್ತೊಮ್ಮೆ ಸದ್ದು ಮಾಡ್ತಿದೆ. ಆದ್ರೆ ಅದು ಕ್ರಿಕೆಟ್ನಿಂದ ಅಲ್ಲ. ಮನುಷ್ಯತ್ವದಿಂದ. ಹೆಸರು, ಹಣ ಬರೀ ತೋರಿಕೆಗಷ್ಟೇ ಅಲ್ಲ ಅಸಹಾಯಕರಿಗೆ ಬೆನ್ನೆಲುಬಾಗಲು ಎಂದು ರಾಹುಲ್ ತೋರಿಸಿಕೊಟ್ಟಿದ್ದಾರೆ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಾಲದ ಶೂಲದಲ್ಲಿ ಪಾಕ್ ಸರ್ಕಾರ – ಐಎಂಎಫ್ ಹಾಕಿದ ಷರತ್ತುಗಳೇನು?
ಬ್ಯಾಟ್ ಹಿಡಿದು ವಿಕೆಟ್ ಮುಂದೆ ನಿಂತ್ರೆ ಕ್ಲಾಸಿಕ್ ಆಗಿ ಬ್ಯಾಟ್ ಬೀಸೋ ಕೆಎಲ್ ರಾಹುಲ್ ಕೈಗಳಿಗೆ ಗ್ಲೌಸ್ ಹಾಕಿ ವಿಕೆಟ್ ಹಿಂದೆ ನಿಂತ್ರೆ ಅಷ್ಟೇ ಚಾಣಾಕ್ಷತನದಿಂದ ವಿಕೆಟ್ ಉರುಳಿಸೋ ಸಾಮರ್ಥ್ಯ ಹೊಂದಿದ್ದಾರೆ. ಅದ್ರಲ್ಲೂ ಕೋ ಪ್ಲೇಯರ್ಸ್ ಜೊತೆಯೂ ಉತ್ತಮ ಬಾಂಧವ್ಯ ಹೊಂದಿರುವ ರಾಹುಲ್ ಒಂಥರಾ ಅಜಾತ ಶತ್ರು ಅಂತಾನೇ ಹೇಳ್ಬೋದು. ಹೀಗೆ ತನ್ನ ಬ್ಯಾಟಿಂಗ್ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಕೆ.ಎಲ್ ರಾಹುಲ್ ಮೈದಾನದ ಹೊರಗೂ ಹೀರೋ. ಹೃದಯವಂತಿಕೆಯ ಸರದಾರ.
ಬಾಗಲಕೋಟೆ ಮೂಲದ ವಿದ್ಯಾರ್ಥಿಗೆ ಬೆಳಕಾದ ಕನ್ನಡಿಗ ರಾಹುಲ್!
ಬಾಂಗ್ಲಾ ವಿರುದ್ಧದ ಟೆಸ್ಟ್ ಮ್ಯಾಚ್ನಲ್ಲಿ ಮಿಂಚಿದ್ದ ಕೆಎಲ್ ರಾಹುಲ್ ಇದೀಗ ಸಾಮಾಜಿಕ ಜವಾಬ್ದಾರಿಯ ಕಾರಣದಿಂದಲೂ ಸುದ್ದಿಯಾಗಿದ್ದಾರೆ. ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯಲ್ಲಿ ಡಿಗ್ರಿ ಕಂಟಿನ್ಯೂ ಮಾಡಲು ಫೈನಾನ್ಶಿಯಲ್ ಸಪೋರ್ಟ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿಯಾಗಿರುವ 20 ವರ್ಷ ಅಮೃತ್ ಮಾವಿನಕಟ್ಟಿಯವರ ವಿದ್ಯಾಭ್ಯಾಸವನ್ನು ಮುಂದುವರಿಸುವ ನಿಟ್ಟಿನಲ್ಲಿ ಕೆಎಲ್ ರಾಹುಲ್ ಹಣಕಾಸು ವೆಚ್ಚವನ್ನು ಭರಿಸಿದ್ದಾರೆ. ಅಮೃತ್ ಮಾವಿನಕಟ್ಟಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಟೆಕ್ನಾಲಜಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಬಿಕಾಂ ಪೂರೈಸಲು ಕೆಎಲ್ ರಾಹುಲ್ ಹಣಕಾಸಿ ನೆರವು ನೀಡಿದ್ದರು. ಹುಬ್ಬಳ್ಳಿಯ ಸಮಾಜ ಸೇವಕ ಮಂಜುನಾಥ ಹೆಬಸೂರ್ ಮೂಲಕ ರಾಹುಲ್ ಅಮೃತ್ ಗೆ ಸಹಾಯ ಮಾಡಿದ್ರು. ಅಮೃತ್ ಮಾವಿನಕಟ್ಟಿ ಅವರ ಮೊದಲ ವರ್ಷದ ಸಂಪೂರ್ಣ ಕಾಲೇಜು ಶುಲ್ಕವನ್ನು ರಾಹುಲ್ ಭರಿಸಿದ್ದರು. ಇದೀಗ ಮತ್ತೆ ಅಮೃತ್ಗೆ ಎರಡನೇ ವರ್ಷದ ಕಾಲೇಜು ಶುಲ್ಕವನ್ನೂ ಕೂಡ ಕೆಎಲ್ ರಾಹುಲ್ ತುಂಬಿದ್ದಾರೆ.
ಪಿಯುಸಿಯಲ್ಲಿ 600ಕ್ಕೆ 571 ಮಾರ್ಕ್ಸ್ ಪಡೆದಿದ್ದ ಅಮೃತ್!
ಅಮೃತ್ ಮಾವಿನಕಟ್ಟಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ. PUC ಯಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದರು. ಆದರೆ ಮುಂದಿನ ಎಜುಕೇಶನ್ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವಿಷಯ ಸಮಾಜ ಸೇವಕ ಮಂಜುನಾಥ್ ಹೆಬಸೂರು ಅವರಿಗೆ ತಿಳಿದು, ನಿತಿನ್ ಎನ್ನುವವರ ನೆರವಿನಿಂದ ಕೆಎಲ್ ರಾಹುಲ್ ಅವರಿಂದ ಸಹಾಯ ಕೇಳಿದ್ದರು. ಕೂಡಲೇ ರಾಹುಲ್ ಸಂಪೂರ್ಣ ವೆಚ್ಚದ ಹೊಣೆಯನ್ನು ಹೊತ್ತುಕೊಂಡಿದ್ದರು. ಅಲ್ಲದೆ ಅಮೃತ್ಗೆ ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಸೀಟು ಸಿಗುವಂತೆಯೂ ನೋಡಿಕೊಂಡಿದ್ದರು. ಇದೀಗ ಅವರ ಎರಡನೇ ವರ್ಷದ ಶೈಕ್ಷಣಿಕ ಶುಲ್ಕವನ್ನು ಕೆಎಲ್ ರಾಹುಲ್ ಭರಿಸಿ ಹೃದಯವಂತಿಕೆ ಮೆರೆದಿದ್ದಾರೆ. ಹಾಗಂತ ಕೆಎಲ್ ಇಂಥಾ ಮಾನವೀಯ ಕೆಲಸಗಳನ್ನ ಮಾಡ್ತಿರೋದು ಇದೇ ಮೊದಲೇನೂ ಅಲ್ಲ.
ಮಗುವಿನ ಜೀವ ಉಳಿಸಲು 31 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಕೆಎಲ್!
2 ವರ್ಷಗಳ ಹಿಂದೆ ಕೆಎಲ್ ರಾಹುಲ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 11 ವರ್ಷದ ಮಗುವಿಗೆ ಸಹಾಯ ಮಾಡಿದ್ರು. ಮಗುವಿನ ಜೀವ ಉಳಿಸಲು ಕೆಎಲ್ ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. 11 ವರ್ಷದ ವರದ್ ನಲ್ವಾಡೆ ಎಂಬ ಬಾಲಕನಿಗೆ ತುರ್ತಾಗಿ ಮೂಳೆ ಮಜ್ಜೆಯ ಕಸಿ ಮಾಡಬೇಕಾಗಿತ್ತು. ಮಗುವಿನ ಪೋಷಕರು ಎನ್‌ಜಿಒ ಮೂಲಕ ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ವಿಷಯ ತಿಳಿದ ಕೆಎಲ್ ರಾಹುಲ್ ಆ ಮಗುವಿಗೆ ಸಹಾಯ ಮಾಡಿದ್ದರು. ಮಗುವಿನ ಜೀವ ಉಳಿಸಲು 31 ಲಕ್ಷ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದರು.
ಕೆಎಲ್ ರಾಹುಲ್ ಅವರ ಈ ಸಾಮಾಜಿಕ ಕಳಕಳಿಯನ್ನ ಕಂಡು ಅಭಿಮಾನಿಗಳು ಸಹ ಮನಸಾರೆ ಮೆಚ್ಚಿಕೊಂಡಿದ್ದಾರೆ. ಕೆಎಲ್ ರಾಹುಲ್ ಬರೀ ಕ್ರಿಕೆಟರ್ ಅಷ್ಟೇ ಅಲ್ಲ. ಜೆಂಟಲ್‌ಮ್ಯಾನ್ ಅಂದಿದ್ದಾರೆ. ಸದ್ಯ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ. ಇದೆಲ್ಲದ್ರ ನಡುವೆ ಕೆ.ಎಲ್.ರಾಹುಲ್ ಆರ್ಸಿಬಿಗೆ ಬರ್ತಾರೆ ಅನ್ನೋ ಸುದ್ದಿ ಇದೆ. ಹಾಗೇನಾದ್ರೂ ರೆಡ್ ಆರ್ಮಿಗೆ ಬಂದ್ರೆ ಬಿಗ್ ಅಡ್ವಾಂಟೇಜ್ ಆಗುತ್ತೆ. ಚಿನ್ನಸ್ವಾಮಿಯಲ್ಲಿ ಆಡಿ, ಬೆಳೆದ ರಾಹುಲ್ ಆರ್ಸಿಬಿ ಕ್ಯಾಪ್ಟನ್ ಆದ್ರೆ, ಫ್ಯಾನ್ಸ್ ಕೂಡ ಫುಲ್ ಖುಷ್ ಆಗ್ತಾರೆ. ತಂಡದ ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ಹೋಗುತ್ತೆ. ಹಾಗಾಗಿ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರಲಿ ಎಂದು ಫ್ಯಾನ್ಸ್ ಕಾಯ್ತಾ ಇದಾರೆ. ಈ ಬಾರಿ ಮೆಗಾ ಹರಾಜು ಇರೋದ್ರಿಂದ ಬೆಂಗಳೂರು ಫ್ರಾಂಚೈಸಿ ಯಾರನ್ನ ತಂಡಕ್ಕೆ ಕರೆದುಕೊಳ್ಳುತ್ತೆ ಅನ್ನೋ ಕುತೂಹಲವೂ ಮೂಡಿದೆ.