ಚುನಾವಣೆಯಲ್ಲೂ ಪಾಕಿಸ್ತಾನದಲ್ಲಿ ಮಹಾ ಮೋಸದಾಟ – ಪ್ರಾಮಾಣಿಕತೆಗೆ ಇನ್ನೊಂದು ವಿರೋಧಾರ್ಥಕ ಪದವೇ ಪಾಕಿಸ್ತಾನ..!

ಚುನಾವಣೆಯಲ್ಲೂ ಪಾಕಿಸ್ತಾನದಲ್ಲಿ ಮಹಾ ಮೋಸದಾಟ – ಪ್ರಾಮಾಣಿಕತೆಗೆ ಇನ್ನೊಂದು ವಿರೋಧಾರ್ಥಕ ಪದವೇ ಪಾಕಿಸ್ತಾನ..!

ಪಾಕಿಸ್ತಾನ.. ಈ ದೇಶದ ಹೆಸರು ಕೇಳಿದ್ರೆ ಎಲ್ಲರ ತಲೆಗೆ ಬರೋದು ಒಂದೇ. ಭಯೋತ್ಪಾದನೆ, ಅರಾಜಕತೆ, ಕುತಂತ್ರಿ ಸೇನೆ, ಐಎಸ್​​ಐ ಇನ್ನೊಂದಷ್ಟು ಭ್ರಷ್ಟ ರಾಜಕಾರಣಿಗಳು. ಪಾಕಿಸ್ತಾನದ ಪರಿಸ್ಥಿತಿ ಈಗ ಹೇಗಾಗಿದೆ ಅಂದ್ರೆ ಆ ದೇಶವನ್ನ ಭಾರತೀಯರಿಗಿಂತ ಹೆಚ್ಚು ಅಲ್ಲಿನ ಜನರೇ ದ್ವೇಷಿಸೋಕೆ ಶುರು ಮಾಡಿದ್ದಾರೆ. ಪಾಕ್ ಸರ್ಕಾರ, ರಾಜಕಾರಣಿಗಳು, ಅಲ್ಲಿನ ಅವ್ಯವಸ್ಥೆ ವಿರುದ್ಧ ಪಾಕ್​ ಜನರೇ ರೊಚ್ಚಿಗೇಳುತ್ತಿದ್ದಾರೆ. ಅದೆಷ್ಟೋ ಮಂದಿ ಭಾರತದಿಂದ ವಿಭಜನೆಯಾಗಿದ್ದೇ ತಪ್ಪಾಯ್ತು. ಈ ನರಕ ಅನುಭವಿಸೋಕೆ ಪ್ರತ್ಯೇಕ ದೇಶವಾಗಬೇಕಿತ್ತಾ ಅಂತಾ ಪಾಕಿಸ್ತಾನದ ಸಾಮಾನ್ಯ ಜನರೇ ಹಿಡಿಶಾಪ ಹಾಕ್ತಾ ಇದ್ದಾರೆ. ದಿನಕಳೆದಂತೆ ಪಾಕಿಸ್ತಾನದಲ್ಲಿ ನಾಗರೀಕ ದಂಗೆ ಹೆಚ್ಚಾಗ್ತಾ ಇದೆ. ಇತ್ತೀಚೆಗಷ್ಟೇ ನಡೆದ ಸಾರ್ವತ್ರಿಕ ಚುನಾವಣೆ ಬಳಿಕ ಪಾಕ್​ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಚುನಾಚಣೆಯಲ್ಲೇ ಮಹಾ ಮೋಸದಾಟವಾಗಿರೋದು ಬಯಲಾಗಿದೆ.

ಇದನ್ನೂ ಓದಿ:ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ – ಲಾಹೋರ್‌ನಲ್ಲಿ 55 ಸಾವಿರ ಮತಗಳಿಂದ ನವಾಜ್ ಷರೀಫ್‌ ಭರ್ಜರಿ ಗೆಲುವು 

ಪ್ರಾಮಾಣಿಕತೆಗೆ ಇನ್ನೊಂದು ವಿರೋಧಾರ್ಥಕ ಪದ ಪಾಕಿಸ್ತಾನ ಅಂದ್ರೆ ತಪ್ಪಾಗಲಿಕ್ಕಿಲ್ವೋ ಏನೋ. ಪಾಕಿಸ್ತಾನದಲ್ಲಿ ನೆಟ್ಟಗೆ ಅಂತಾ ಯಾವುದೂ ನಡೆಯೋದಿಲ್ಲ. ಮೋಸವಿಲ್ಲದೆ ಅಲ್ಲಿ ಏನೂ ಆಗೋದಿಲ್ಲ. ಒಂದು ದೇಶ ಅಥವಾ ರಾಜ್ಯ ಅಭಿವೃದ್ಧಿಯಾಗಬೇಕು ಅಂದ್ರೆ ಸುಭದ್ರ ಸರ್ಕಾರ ಇರ್ಲೇಬೇಕು. ಅದಕ್ಕಾಗಿ ಪಾರದರ್ಶಕ ಚುನಾವಣೆ ನಡೀಲೇಬೇಕು. ಆದ್ರೆ ಚುನಾವಣೆಯಲ್ಲೇ ಮೋಸದಾಟ ನಡೆದ್ರೆ ಆಡಳಿತ ವ್ಯವಸ್ಥೆಯ ಪರಿಸ್ಥಿತಿ ಏನಾಗಬಹುದು ಅನ್ನೋದನ್ನ ನೀವೇ ಊಹಿಸ್ಕೊಳ್ಳಿ. ಈಗಾಗ್ಲೇ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ್ರೂ, ರಿಸಲ್ಟ್ ಬಂದ್ರೂ ಸರ್ಕಾರ ಇನ್ನೂ ಸ್ಥಾಪನೆಯಾಗಿಲ್ಲ. ಇದ್ರ ಬೆನ್ನಲ್ಲೇ ಈ ಬಾರಿಯ ಪಾಕ್​ ಚುನಾವಣೆಯಲ್ಲಿ ಮಹಾ ಮೋಸವಾಗಿರೋದು ಕನ್ಫರ್ಮ್ ಆಗಿದೆ. ಪಾಕ್ ಚುನಾವಣಾ ಫಲಿತಾಂಶವನ್ನ ತಿರುಚಲಾಗಿದೆ. ಕೌಂಟಿಂಗ್​ನಲ್ಲಿ ಭಾರಿ ಕಳ್ಳಾಟವೇ ನಡೆದಿದೆ. ಈಗ ಜನರು ಕೂಡ ರೊಚ್ಚಿಗೆದ್ದಿದ್ದಾರೆ.

ಯಾವಾಗಲೂ ಪಾಕಿಸ್ತಾನದಲ್ಲಿ ಯಾವ ಪಕ್ಷ ಗೆಲ್ಲಬೇಕು, ಯಾರು ಅಧಿಕಾರಕ್ಕೇರಬೇಕು, ಪ್ರಧಾನಿ ಯಾರಾಗಬೇಕು ಅನ್ನೋದನ್ನ ಡಿಸೈಡ್ ಮಾಡೋದು ಪಾಕ್ ಸೇನೆಯೇ. ಈ ಹಿಂದೆ ಇಮ್ರಾನ್ ಖಾನ್ ಪ್ರಧಾನಿಯಾಗೋಕೂ ಸೇನೆಯೇ ಕಾರಣ. ಆದ್ರೆ ಈ ಬಾರಿಯ ಚುನಾವಣೆ ವೇಳೆಗೆ ಪಾಕ್​ ಸೇನೆ ಇಮ್ರಾನ್​​ ವಿರುದ್ಧ ತಿರುಗಿ ಬಿದ್ದು ನವಾಜ್​ ಶರೀಫ್ ನೇತೃತ್ವದ ಪಿಎಂಎಲ್​​ ಪಾರ್ಟಿ ಗೆಲ್ಲಬೇಕು ಅಂತಾ ಸಂಚು ಮಾಡಿತ್ತು. ಇದಕ್ಕಾಗಿ ಟಾರ್ಗೆಟ್ ಮಾಡಿಯೇ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವನ್ನ ಬ್ಯಾನ್ ಮಾಡಲಾಗಿತ್ತು. ಅದ್ರೆ ಇಮ್ರಾನ್ ಪಕ್ಷದ ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ನಿಂತಿದ್ರು. ಹೀಗಾಗಿ ಪಿಟಿಐನ ಮಂದಿ ಸೋಲಬೇಕು ಅಂತಾ ಪಾಕ್ ಸೇನೆ ಪ್ಲ್ಯಾನ್ ಮಾಡಿತ್ತು. ಆದ್ರೇನು ಮಾಡೋದು ಇಮ್ರಾನ್ ಖಾನ್​​ಗೆ ಈಗಲೂ ಭಾರಿ ಜನಬೆಂಬಲ ಇದೆ. ಒಂದು ವೇಳೆ ಪಿಟಿಐ ಬ್ಯಾನ್ ಆಗದೆ ಇದ್ದಲ್ಲಿ ಇಮ್ರಾನ್ ಬಹುಮತದಿಂದ ಗೆಲ್ತಾ ಇದ್ರೋ ಏನೊ. ಸದ್ಯ ನವಾಜ್ ಶರೀಫ್ ನೇತೃತ್ವದ ಪಿಎಂಎಲ್-75 ಸ್ಥಾನ ಗೆದ್ದಿದ್ದು, ಇಮ್ರಾನ್​​ ಖಾನ್ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಗಳು 93 ಕ್ಷೇತ್ರಗಳನ್ನ ಗೆದ್ದಿದ್ದಾರೆ. ಇನ್ನು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 54 ಸ್ಥಾನ ಗಳಿಸಿದೆ. ಈಗಾಗಿ ಯಾರಿಗೂ ಬಹುಮತ ಸಿಕ್ಕಿಲ್ಲ. ನವಾಜ್ ಷರೀಫ್ ಈಗ ಪಾಕಿಸ್ತಾನ ಪೀಪಲ್ಸ್​ ಪಾರ್ಟಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸೋಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ. ಆದ್ರೆ ಇಮ್ರಾನ್ ಬೆಂಬಲಿಗರು ಮತ್ತು ಗೆದ್ದಿರೋ ಸ್ವತಂತ್ರ್ಯ ಅಭ್ಯರ್ಥಿಗಳು ನಾವು 93 ಅಲ್ಲ ಅದಕ್ಕಿಂತ ಹೆಚ್ಚು ಕ್ಷೇತ್ರಗಳನ್ನ ಗೆದ್ದಿದ್ದೇವೆ. ಮತ ಎಣಿಕೆ ವೇಳೆ ನಮ್ಮ ಸ್ವತಂತ್ರ್ಯ ಅಭ್ಯರ್ಥಿಗಳನ್ನ ಸೋಲಿಸಲಾಗಿದೆ ಅಂತಾ ಆರೋಪಿಸ್ತಾ ಇದ್ದಾರೆ. ಈ ಗಂಭೀರ ಆರೋಪಕ್ಕೆ ಇಲ್ಲೊಂದು ಪ್ರಮುಖ ಕಾರಣ ಕೂಡ ಇದೆ. ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಮತ ಎಣಿಕೆ ವೇಳೆ ಮೋಸವಾಗಿದೆ. ಚುನಾವಣಾ ಫಲಿತಾಂಶವನ್ನೇ ಟ್ವಿಸ್ಟ್ ಮಾಡಲಾಗಿದೆ ಅಂತಾ ಓಪನ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸ್ವತ: ತಾವೇ ಈ ಕೃತ್ಯದಲ್ಲಿ ಭಾಗಿಯಾಗಿರೋದಾಗಿಯೂ ಹೇಳಿದ್ದಾರೆ. ಎಲೆಕ್ಷನ್​​ನಲ್ಲಿ ಯಾರು ಗೆದ್ದಿದ್ರೋ ಅವರನ್ನ ಸೋಲಿಸಿದ್ದೇವೆ. ನಿಜವಾಗಿಯೂ ಸೋತವರನ್ನ ಸುಮಾರು 70,000 ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಮತ್ತು ಪಾಕ್ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು ಕೂಡ ಇದ್ರಲ್ಲಿ ಶಾಮೀಲಾಗಿದ್ದಾರೆ ಅಂತಾ ಬಟಾಬಯಲು ಮಾಡಿದ್ದಾರೆ. ಇನ್ನು ರಾವಲ್ಪಿಂಡಿಯಲ್ಲಿ ಮತ ಎಣಿಕೆ ಮೋಸದಾಟದಲ್ಲಿ ಭಾಗಿಯಾಗಿದ್ದ ಎಲೆಕ್ಷನ್ ಕಮಿಷನ್ ಆಫೀಸರ್ ಲಿಯಾಕತ್ ಅಲಿ ಚಟ್ಟಾ ಅನ್ನೋರು ತಪ್ಪೊಪ್ಪಿಕೊಂಡು ರಾಜೀನಾಮೆ ಕೂಡ ನೀಡಿದ್ದಾರೆ.

ಅದೆಂಥಾ ಅವಸ್ಥೆ ನೋಡಿ.. ನಿಜಕ್ಕೂ ಜನರು ವೋಟ್ ಮಾಡಿ ಗೆಲ್ಲಿಸಿದ ಅಭ್ಯರ್ಥಿಯನ್ನ ಚುನಾವಣಾಧಿಕಾರಿಗಳೇ ಸೋಲಿಸಿದ್ದಾರೆ. ಸೋತವರನ್ನ ಬರೋಬ್ಬರಿ 70,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಅಂದ್ರೆ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ, ಕಳ್ಳಾಟ ಅನ್ನೋದು ಯಾವ ರೇಂಜಿಗೆ ಇದೆ ಅನ್ನೋದನ್ನ ಇಲ್ಲೇ ಅರ್ಥ ಮಾಡಿಕೊಳ್ಳಬಹುದು.

ಈಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹೇಳ್ತಿರೋ ಪ್ರಕಾರ, 265 ಕ್ಷೇತ್ರಗಳ ಪೈಕು 170 ಸ್ಥಾನಗಳನ್ನ ಗೆದ್ದುಕೊಂಡಿದ್ದಾರಂತೆ. ಬಹುಮತಕ್ಕೆ ಬೇಕಾಗಿದ್ದಿದ್ದು 133 ಕ್ಷೇತ್ರಗಳು. ಆದ್ರೆ ಈಗ 93 ಮಂದಿ ಇಮ್ರಾನ್ ಬೆಂಬಲಿತ ಅಭ್ಯರ್ಥಿಗಳು ಮಾತ್ರ ಗೆದ್ದಿದ್ದಾರೆ. ಇಲ್ಲಿ ಒಂದು ವಿಚಾರ ಮಾತ್ರ ಸ್ಪಷ್ಟ. ಪಾಕಿಸ್ತಾನದಲ್ಲಿ ನಿಯತ್ತಾಗಿ ಚುನಾವಣೆ ನಡೀತಿದ್ರೆ ಈ ಬಾರಿ ಗ್ಯಾರಂಟಿ ಇಮ್ರಾನ್​​ ಖಾನ್ ಬೆಂಬಲಿತ ಅಭ್ಯರ್ಥಿಗಳೇ ಮೆಜಾರಿಟಿ ಸಂಖ್ಯೆಯಲ್ಲಿ ಗೆಲ್ತಾ ಇದ್ರು. ಪಿಟಿಐ ಬ್ಯಾನ್ ಆಗದೆ ಇರ್ತಿದ್ರೆ, ಇಮ್ರಾನ್ ಜೈಲುಪಾಲಾಗದೆ ಇರ್ತಿದೆ ಮತ್ತೊಮ್ಮೆ ಪ್ರಧಾನಿಯಾಗ್ತಾ ಇದ್ರು. ಆದ್ರೆ ಈ ಬಾರಿ ಪಾಕಿಸ್ತಾನ ಸೇನೆಗೆ ಇಮ್ರಾನ್ ಪ್ರಧಾನಿಯಾಗೋದು ಬೇಕಿಲ್ವಲ್ಲಾ. ಹೀಗಾಗಿ ಸುಪ್ರೀಂಕೋರ್ಟ್​ನಿಂದ ಹಿಡಿದು ಚುನಾವಣಾ ಆಯೋಗದವರೆಗೂ ಎಲ್ಲವೂ ಪಾಕ್​ ಸೇನೆಯ ಸೂಚನೆಯಂತೆಯೇ ಕೆಲಸ ಮಾಡಿತ್ತು. ಎಲೆಕ್ಷನ್​ಗೂ ಮುನ್ನ ಇಮ್ರಾನ್​​ ಖಾನ್​ರನ್ನ ಅರೆಸ್ಟ್ ಮಾಡಲಾಯ್ತು. ಕೋರ್ಟ್​ ಜೈಲುಶಿಕ್ಷೆ ನೀಡ್ತು. ಪಿಟಿಐ ಪಾರ್ಟಿಯನ್ನ ಬ್ಯಾನ್ ಮಾಡ್ತು. ನಂತರ ಚುನಾವಣಾ ಅಧಿಕಾರಿಗಳೇ ಕೌಂಟಿಂಗ್​​ ಪ್ರೊಸೀಜರ್​​ನ್ನೇ ಅಡಿಮೇಲು ಮಾಡಿ, ಇಮ್ರಾನ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆಯದಂತೆ ನೋಡಿಕೊಂಡ್ರು. ಅತಂತ್ರವಾದ್ಮೇಲೆ ಈಗ ಸಮ್ಮಿಶ್ರ ಸರ್ಕಾರ ಮಾಡೋಕೆ ಒಂದಷ್ಟು ಕುತಂತ್ರ ನಡೀತಾ ಇದೆ.

ಹಾಗೆಯೇ ಪಾಕಿಸ್ತಾನದ ಮುಂದಿನ ಪ್ರಧಾನಿ ವಿಚಾರವಾಗಿಯೂ ಸರ್ಕಸ್ ಶುರುವಾಗಿದೆ. ಚುನಾವಣೆ ವೇಳೆಗೆ ಲಂಡನ್​ನಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಪಾಕಿಸ್ತಾನಕ್ಕೆ ಬಂದಿದ್ರು. ಎಲೆಕ್ಷನ್ ಮೊದಲೇ ಫಿಕ್ಸ್ ಆಗಿದ್ರಿಂದ NEXT ಶರೀಫ್ ಮತ್ತೆ ಪಿಎಂ ಆಗ್ತಾರೆ ಅಂತಾನೆ ಅಂದುಕೊಳ್ಳಲಾಗಿದೆ. ಆದ್ರೀಗ ಶೆಹಬಾಜ್ ಷರೀಫ್ ಎರಡನೇ ಬಾರಿಗೆ ಪ್ರಧಾನಿಯಾಗೋ ಮಾತುಗಳು ಕೇಳಿ ಬರ್ತಾ ಇದೆ. ಅದಕ್ಕೆ ಕಾರಣ ಕೂಡ ಇದೆ. ಪಾಕಿಸ್ತಾನದ ಪಂಜಾಬ್​ ಅತ್ಯಂತ ಪವರ್​ಫುಲ್ ಪ್ರಾಂತ್ಯ. ಅತೀ ಹೆಚ್ಚು ಕ್ಷೇತ್ರಗಳಿರೋ ಪ್ರಾಂತ್ಯವೂ ಇದೇ. ಹೈಯೆಸ್ಟ್ ಜನಸಂಖ್ಯೆ ಇರೋದೂ ಅಲ್ಲೇ. ಹೀಗಾಗಿ ನವಾಜ್​ ಶರೀಫ್ ಲಂಡನ್​ನಿಂದ ಬರೋವಾಗಲೇ ಪಾಕ್ ಸೇನೆ ಒಂದು ಆಪ್ಷನ್ ಕೊಟ್ಟಿತ್ತು. ಒಂದೋ ನೀವು ಪಾಕಿಸ್ತಾನದ ಪ್ರಧಾನಿಯಾಗಬೇಕು. ಇಲ್ಲಾ ನಿಮ್ಮ ಪುತ್ರಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಬೇಕು ಅನ್ನೋದಾದ್ರೆ ಪ್ರಧಾನಿ ಪಟ್ಟವನ್ನ ಬಿಟ್ಟುಕೊಡಬೇಕು ಅನ್ನೋದಾಗಿ ಸೇನೆ ಷರತ್ತು ವಿಧಿಸಿತ್ತು. ಹೀಗಾಗಿ ನವಾಜ್​ ಶರೀಫ್ ತಮ್ಮ ಪುತ್ರಿ ಮರಿಯಲ್ ಶರೀಫ್​ರನ್ನ ಪಂಜಾಬ್​ ಸಿಎಂ ಮಾಡೋಕೆ ನಿರ್ಧರಿಸಿದ್ದಾರೆ. ಹೀಗಾಗಿ ನವಾಜ್ ಸಹೋದರ ಶೆಹಬಾಜ್ ಶರೀಫ್ ಮತ್ತೆ ಪ್ರಧಾನಿಯಾಗೋ ಸಾಧ್ಯತೆ ಇದೆ.

ಅಂತೂ ಇಮ್ರಾನ್ ಖಾನ್ ಹೊರತಾಗಿ ಪಾಕಿಸ್ತಾನದಲ್ಲಿ ಯಾರೇ ಪ್ರಧಾನಿಯಾಗೋದ್ರೂ ಅರಾಜಕತೆ ಮುಂದುವರಿಯೋದು ಮಾತ್ರ 200% ಗ್ಯಾರಂಟಿ. ಹಾಗಂತಾ ಇಮ್ರಾನ್ ಪ್ರಧಾನಿಯಾದ್ರೆ ಎಲ್ಲವೂ ಸರಿ ಹೋಗುತ್ತೆ ಅಂತೇನಲ್ಲ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಜನರ ಒಲವು ಇಮ್ರಾನ್ ಖಾನ್ ಕಡೆಗೇ ಹೆಚ್ಚಾಗಿತ್ತು. ಹೀಗಾಗಿ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾದ್ರೂ ಅದನ್ನ ಒಪ್ಪಿಕೊಳ್ಳೋಕೆ ಪಾಕ್​ ಜನರು ತಯಾರಿಲ್ಲ. ಈಗಾಗ್ಲೇ ಇಮ್ರಾನ್ ಖಾನ್ ಬೆಂಬಲಿಗರು ಬೀದಿಗಿಳಿದಾಗಿದೆ. ಒಂದೇ ಪಕ್ಷ ಅಧಿಕಾರದಲ್ಲಿದ್ದಾಗಲೇ ಪಾಕ್ ಸರ್ಕಾರ ನೆಟ್ಟಗೆ ನಡೆಯೋದಿಲ್ಲ. ಹೀಗಿರೋವಾಗ ಸಮ್ಮಿಶ್ರ ಸರ್ಕಾರವಾದ್ರೆ ಕಥೆಯೇನಾಗಬೇಹುದು ಅನ್ನೋದನ್ನ ಊಹೆ ಮಾಡಿಕೊಳ್ಳಬಹುದು.

Sulekha