ಸಮುದ್ರದೊಳಗೆ ಸೀಕ್ರೆಟ್ ಕೇಬಲ್ ಕಟ್ ಮಾಡಿದ್ಯಾರು? – ಶುರುವಾಯ್ತಾ ಹೊಸ ಯುದ್ಧ?

ಸಮುದ್ರದೊಳಗೆ ಸೀಕ್ರೆಟ್ ಕೇಬಲ್ ಕಟ್ ಮಾಡಿದ್ಯಾರು? – ಶುರುವಾಯ್ತಾ ಹೊಸ ಯುದ್ಧ?

ಇಂಟರ್​ನೆಟ್​ ಅನ್ನೋದು ಜಗತ್ತಿನಲ್ಲಿ ಯಾವ ರೀತಿ ಕ್ರಾಂತಿ ಮಾಡಿದೆ ಅನ್ನೋದು ನಿಮಗೆ ಗೊತ್ತೇ ಇದೆ. ಇದು ಇಂಟರ್​ನೆಟ್​ ಯುಗ..ಇಂಟರ್​​ನೆಟ್ ಇಲ್ಲದೆ ಏನೂ ನಡೆಯೋದೆ ಇಲ್ಲ. ಇಡೀ ಅರ್ಥವ್ಯವಸ್ಥೆಯೇ ಇಂಟರ್​​ನೆಟ್ ಮೇಲೆ ನಿಂತಿದೆ ಅಂದ್ರೂ ತಪ್ಪಾಗೋದಿಲ್ಲ. ಯಾಕಂದ್ರೆ ಇಂಟರ್​ನೆಟ್ ಇಲ್ಲಾದ್ರೆ ಅದೆಷ್ಟೋ ಮಂದಿ ಕೆಲಸವೇ ಕಳೆದುಕೊಳ್ತಾರೆ. ಇಂಟರ್​​ನೆಟ್ ಕನೆಕ್ಷನ್ ಕಟ್ ಆದ್ರೆ ಎಲ್ಲವೂ ಬುಡಮೇಲಾಗಿಬಿಡುತ್ತೆ. ಇದೇ ಕಾರಣಕ್ಕೆ ಇಂಟರ್​​ನೆಟ್​ ಕೇಬಲ್​​ಗಳನ್ನೇ ಕಟ್ ಮಾಡುವಂಥಾ ಬೆಳವಣಿಗೆಗಳು ಕೂಡ ನಡೀತಾ ಇದೆ.

ಇಸ್ರೇಲ್ ಮತ್ತು ಗಾಜಾ ಯುದ್ಧ ಶುರುವಾದ ಬಳಿಕ ಕೆಂಪು ಸಮುದ್ರ ವಲಯದಲ್ಲಿ ಹೌತಿ ಬಂಡುಕೋರರು ಬಾಲ ಬಿಚ್ಚಿದ್ದಾರೆ. ಭಾರತ ಸೇರಿದಂತೆ ಕೆಂಪು ಸಮುದ್ರದ ಮೂಲಕ ಹಾದು ಹೋಗುವ ವಿದೇಶಿ ಶಿಪ್​​ಗಳನ್ನ ಹೈಜಾಕ್ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಶಿಪ್​ಗಳ ಮೇಲೆ ದಾಳಿ ಮಾಡ್ತಾನೆ ಇದ್ದಾರೆ. ಹೀಗಾಗಿ ಯುರೋಪ್​​ ರಾಷ್ಟ್ರಗಳಿಗೆ ತೆರಳೋ ಹಡಗುಗಳು ಆಫ್ರಿಕಾದ ಮೂಲಕ ಹಾದು ಹೋಗ್ತಿವೆ. ಇಷ್ಟು ದಿನ ಶಿಪ್​​ಗಳ ಮೇಲೆ ಅಟ್ಯಾಕ್ ಮಾಡ್ತಿದ್ದ ಹೌತಿ ಬಂಡುಕೋರರು ಈಗ ಸಮುದ್ರದಾಳದಲ್ಲಿರೋ ಇಂಟರ್​ನೆಟ್ ಕೇಬಲ್​​ಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಕೆಂಪು ಸಮುದ್ರದೊಳಗಿರುವ ಇಂಟರ್​​ನೆಟ್ ಕೇಬಲ್​ಗಳ ಪೈಕಿ ಮೂರು ಕೇಬಲ್​​ಗಳನ್ನ ಹೌತಿಗಳು ಕಟ್ ಮಾಡಿದ್ದು, ಜಾಗತಿಕ ಇಂಟರ್​ನೆಟ್ ವ್ಯವಸ್ಥೆಯೇ ಬುಡಮೇಲಾಗಿತ್ತು. ಇದೇ ಕಾರಣಕ್ಕೆ ನೋಡಿ ಕೆಲ ದಿನಗಳ ಹಿಂದೆ ಇನ್​ಸ್ಟ್ರಾಗ್ರಾಂ ಸೇರಿದಂತೆ ಕೆಲ ಆ್ಯಪ್​ಗಳು ಬಂದ್ ಆಗಿರೋದು.

ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರ ಬೀಳಿಸೋಕೆ ಶಾಸಕರಿಗೆ ತಲಾ 50 ಕೋಟಿ ಆಮಿಷ – ಬಿಜೆಪಿ ವಿರುದ್ಧ ಡಿಕೆಶಿ ಗಂಭೀರ ಆರೋಪ

ಇಡೀ ಜಗತ್ತಿಗೆ ಇಂಟರ್​ನೆಟ್ ಸಂಪರ್ಕವಾಗಿರೋದು ಸಮುದ್ರದಾಳದಲ್ಲಿರೋ ಕೇಬಲ್​ಗಳ ಮೂಲಕ. ಜಗತ್ತಿನ ವಿವಿಧೆಡೆ ಸಮುದ್ರ ಭಾಗದಲ್ಲಿ ಇಂಟರ್​ನೆಟ್ ಕೇಬಲ್​ಗಳು ಹರಡಿಕೊಂಡಿವೆ. ಭಾರತವನ್ನ ಕೂಡ ಈ ಇದೇ ಇಂಟರ್​​ನೆಟ್ ಕೇಬಲ್​ಗಳು ಸಂಪರ್ಕಿಸುತ್ತವೆ. ಇಡೀ ಇಂಟರ್​ನೆಟ್ ವ್ಯವಸ್ಥೆಯ ಲೈಫ್​ಲೈನ್ ಆಗಿರೋದೆ ಈ ಕೇಬಲ್​ಗಳು. ಈ ಕೇಬಲ್​ಗಳ ಮೂಲಕವೇ ಇಂಟರ್​​ನೆಟ್ ಡೇಟಾಗಳನ್ನ ಟ್ರಾನ್ಸ್​​ಮಿಟ್ ಮಾಡಲಾಗುತ್ತೆ. ಆದ್ರೆ ಇದೇ ಕೇಬಲ್​​​ಗಳನ್ನ ಕಟ್ ಮಾಡಿದ್ರೆ ಅಥವಾ ಈ ಕೇಬಲ್​​ಗಳಿಗೆ ಹಾನಿಯಾಯ್ತು ಅಂದ್ರೆ ಜಾಗತಿಕ ಇಂಟರ್​ನೆಟ್ ವ್ಯವಸ್ಥೆಯೇ ಡ್ಯಾಮೇಜ್ ಆಗಿಬಿಡುತ್ತೆ. ಈಗ ಹೌತಿಗಳು ಈ ಕೇಬಲ್​ಗಳನ್ನ ಟಾರ್ಗೆಟ್ ಮಾಡಿದಾಗಲೂ ಆಗಿರೋದು ಇದೇ. ಕೇವಲ ಮೂರೇ ಮೂರು ಕೇಬಲ್​ಗಳನ್ನ ಕಟ್ ಮಾಡಿದ್ದಕ್ಕೆ ಏಷ್ಯಾ ಮತ್ತು ಯುರೋಪ್​ಗೆ ಕನೆಕ್ಟ್​​ ಆಗ್ತಿದ್ದ 25 ಪರ್ಸೆಂಟ್​​ನಷ್ಟು ಇಂಟರ್​​ನೆಟ್​​ಗೆ ಎಫೆಕ್ಟ್ ಆಗಿದೆ. ಅಂದ್ರೆ 25 ಪರ್ಸೆಂಟ್‌ನಷ್ಟು ಇಂಟರ್​ನೆಟ್ ಸಪ್ಲೈ ಬಂದ್ ಆಗಿದೆ. ಹಲವು ಕಂಪನಿಗಳಿಗೆ ಇಂಟರ್​​ನೆಟ್ ಸಪ್ಲೈ ಆಗ್ತಾ ಇಲ್ಲ. ಆದ್ರೆ ಹೌತಿಗಳು ಮಾತ್ರ ನಾವು ಕಟ್ ಮಾಡಿಲ್ಲ, ನಾವು ಕಟ್ ಮಾಡಿಲ್ಲ ಅಂತಿದ್ದಾರೆ. ಬಟ್ ಇದು ಹೌತಿ ಬಂಡುಕೋರರದ್ದೇ ಕೈವಾಡ ಅನ್ನೋದು ಈಗಾಗ್ಲೇ ಖಚಿತವಾಗಿದೆ. ಹಾಗಂತಾ ಹೌತಿಗಳು ಸಮುದ್ರದಾಳಕ್ಕೆ ಇಳಿದು ಈ ಕೇಬಲ್​ನ್ನ ಕಟ್ ಮಾಡಿಲ್ಲ. ಕೆಂಪು ಸಮುದ್ರ ವಲಯದಲ್ಲಿ ಸಾಗೋ ಹಡಗುಗಳ ಮೇಲೆ ಹೌತಿ ಬಂಡುಕೋರರು ಮೇಲಿಂದ ಮೇಲೆ ಮಿಸೈಲ್ ಅಟ್ಯಾಕ್ ಮಾಡ್ತಾನೆ ಇದ್ದಾರೆ. ಅದೇ ರೀತಿ ಮಿಸೈಲ್​ ದಾಳಿಯಿಂದಲೇ ಇಂಟರ್​ನೆಟ್ ಕೇಬಲ್​​ಗೆ ಹಾನಿಯಾಗಿದೆ ಅಂತಾನೂ ಹೇಳಲಾಗ್ತಿದೆ.

ಜಗತ್ತಿನಾದ್ಯಂತ ಸಮುದ್ರದಾಳದಲ್ಲಿ 8 ಲಕ್ಷ 50,000 ಮೈಲಿಯಷ್ಟು ಕೇಬಲ್​ಗಳು ಸ್ಪ್ರೆಡ್​ ಆಗಿದೆ. ಇದ್ರಲ್ಲಿ ಪವರ್​ ಕೇಬಲ್​, ಕಮ್ಯುನಿಕೇಶನ್ ಕೇಬಲ್​ ಮತ್ತು ಇಂಟರ್​ನೆಟ್ ಕೇಬಲ್​​ಗಳು ಕೂಡ ಇದೆ. ಇವು ಹೈಲಿ ಅಡ್ವಾನ್ಸ್ಡ್ ಕೇಬಲ್​ಗಳಾಗಿದ್ರೂ ಅವುಗಳನ್ನ ಇನ್​ಸ್ಟಾಲ್ ಮಾಡೋದು, ಬಳಿಕ ಮೇಂಟೇನ್​​ ಮಾಡೋದೆ ಒಂದು ದೊಡ್ಡ ಟಾಸ್ಕ್. 1850ರಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಫೌಂಡ್​ಲ್ಯಾಂಡ್ ಮತ್ತು ಐರ್ಲೆಂಡ್ ಮಧ್ಯೆ ಸಮುದ್ರದ ಮೂಲಕ ಕೇಬಲ್​​ ಎಳೆಯಲಾಗುತ್ತೆ. 1858ರಲ್ಲಿ ಅಮೆರಿಕ ಮತ್ತು ಬ್ರಿಟನ್ ಮಧ್ಯೆ ಟೆಲಿಗ್ರಾಫ್​ ಕೇಬಲ್​​ನ್ನ ಕನೆಕ್ಟ್ ಮಾಡಲಾಗುತ್ತೆ. 20ನೇ ಶತಮಾನದ ಆರಂಭದಲ್ಲಿ ಟೆಲಿಫೋನ್ ಕ್ರಾಂತಿಯಾಗುತ್ತಲೇ ಫೋನ್​ ಕಾಲ್​ಗಳಲ್ಲಿ ಧ್ವನಿ ಕೇಬಲ್​ಗಳ ಮೂಲಕವೇ ಪಾಸ್ ಆಗುವಂತೆ ವ್ಯವಸ್ಥೆ ಮಾಡಲಾಗುತ್ತೆ. ನಂತರ ಇಂಟರ್​​ನೆಟ್ ಕನೆಕ್ಷನ್ ಶುರುವಾಗುತ್ತಲೇ ಈ ಕೇಬಲ್​ ನೆಟ್​​ವರ್ಕ್​​ನ ವ್ಯಾಪ್ತಿ ಇನ್ನಷ್ಟಿ ವಿಸ್ತಾರಗೊಳ್ಳುತ್ತೆ. ಈಗ ಇಡೀ ಜಗತ್ತನ್ನೇ ಕೇಬಲ್​ಗಳು ಕನೆಕ್ಟ್ ಮಾಡ್ತಾ ಇವೆ. ಅದ್ರಲ್ಲೂ ಕಳೆದ 10 ವರ್ಷಗಳಲ್ಲಂತೂ ಇಂಟರ್​ನೆಟ್ ಕೇಬಲ್​​ ವ್ಯಾಪಕ ಮಟ್ಟದಲ್ಲಿ ಎಕ್ಸಾಂನ್ಷನ್ ಆಗಿದೆ. ನೀವು ಮೊಬೈಲ್​ನಲ್ಲಿ ಯಾವುದೇ ಈ-ಮೇಲ್, ಫೋಟೋ, ಟ್ವೀಟ್ ಹೀಗೆ ಇಂಟರ್​ನೆಟ್ ಮೂಲಕ ಏನೇ ಮಾಡಿದ್ರೂ ಆ ಡೇಟಾ ರೇಡಿಯೋ ವೇವ್ ಮೂಲಕ ನಿಮ್ಮ ಹತ್ತಿರದ ಸೆಲ್​ಫೋನ್ ಟವರ್​ಗೆ ಪಾಸ್ ಆಗುತ್ತೆ. ಟವರ್​ನಿಂದ ಆ ಸಿಗ್ನಲ್​ಗಳು ಫೈಬರ್​ ಆಪ್ಟಿಕ್ ಕೇಬಲ್​ಗಳ ಮೂಲಕ ಸಂಚರಿಸಿ ಸಮುದ್ರದಾಳದಲ್ಲಿರೋ ಕೇಬಲ್​ಗಳಿಗೂ ಕನೆಕ್ಟ್ ಆಗಿ ವಿದೇಶಗಳಲ್ಲಿರೋ ಡೇಟಾ ಸೆಂಟರ್​ಗಳನ್ನ ಸಂಪರ್ಕಿಸುತ್ತೆ. ಆದ್ರೆ ಈ ಡೇಟಾ ಸೆಂಟರ್​ನ್ನ ಕನೆಕ್ಟ್ ಆಗೋ ಮುನ್ನ ಸಮುದ್ರದಿಂದ ಕೇಬಲ್​​ ಹೊರ ಬರುತ್ತಲೇ ಲ್ಯಾಂಡಿಂಗ್​ ಸ್ಟೇಷನ್​​ನನ್ನ ಡೇಟಾಗಳು ರೀಚ್ ಆಗುತ್ತೆ. ಅಲ್ಲಿಂದ ನೆಲದಡಿಯಲ್ಲಿ ಸಾಗೋ ಕೇಬಲ್​ಗಳ ಮೂಲಕ ಡೇಟಾ ಸೆಂಟರ್​ನ್ನ ತಲುಪುತ್ತೆ. ಈ ಕೇಬಲ್​​ನೊಳಗಿರೋ ಫೈಬರ್ ಆಪ್ಟಿಕ್​ ಮೂಲಕ ಇಂಟರ್​ನೆಟ್ ಡೇಟಾ ರವಾನೆಯಾಗುತ್ತೆ. ಒಂದು ಸೆಕುಂಡಿಗೆ ಒಂದು ಲಕ್ಷ ಮೈಲಿ ವೇಗದಲ್ಲಿ ಡೇಟಾ ಸಂಚರಿಸುತ್ತೆ.

ಆದ್ರೆ ಈ ಇಂಟರ್​ನೆಟ್ ಕೇಬಲ್​​ಗಳನ್ನ ಸಮುದ್ರದೊಳಗೆ ಮೇಂಟೇನ್​ ಮಾಡೋದು ಅಂದ್ರೆ ಸಣ್ಣ ಸಂಗತಿಯಲ್ಲ. ಕೆಲವೊಮ್ಮೆ ಶಾರ್ಕ್​ಗಳು ಈ ಕೇಬಲ್​ಗಳನ್ನ ಕಚ್ಚಿ ಡ್ಯಾಮೇಜ್ ಮಾಡ್ತಾವೆ. ಆದ್ರೆ ಶಾರ್ಕ್​​ಗಿಂತ ಡೇಂಜರ್​​ ಆಗಿರೋದು ಮನುಷ್ಯನೇ. 2011ರಲ್ಲಿ ಅರ್ಮೇನಿಯಾ ದೇಶಕ್ಕೆ ಇಂಟರ್​ನೆಟ್ ಸಪ್ಲೈ ಕಂಪ್ಲೀಟ್ ಆಗಿ ಬಂದ್ ಆಗಿತ್ತು. ಭೂಮಿಯನ್ನ ಅಗೆಯುವಾಗ ಅಂಡರ್​​ಗ್ರೌಂಡ್​​ನಲ್ಲಿದ್ದ ಕೇಬಲ್​ನ್ನ ಮಹಿಳೆಯೊಬ್ಬಳು ಕಟ್ ಮಾಡಿದ್ಲು. ಇಡೀ ದೇಶದ ಇಂಟರ್​ನೆಟ್ ಸಂಪರ್ಕ ಕಟ್ ಆಗಿತ್ತು. 2016ರಲ್ಲಿ ಅಟ್ಲಾಂಟಿಂಕ್ ಸಮುದ್ರ ಭಾಗದಲ್ಲಿ ಬರುವ ಇಂಗ್ಲಿಷ್ ಚಾನಲ್​​ನಲ್ಲಿ ಹಡಗನ್ನ ಸ್ಟೇಷನ್ ಮಾಡೋಕೆ ಆ್ಯಂಕರ್​ನ್ನ ನೀರಿಗೆ ಇಳಿಸ್ತಾನೆ ಸಮುದ್ರದೊಳಗಿದ್ದ ಮೂರು ಇಂಟರ್​ನೆಟ್ ಕೇಬಲ್​​ಗಳು ಕಟ್ ಆಗಿದ್ವು.

ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ರಕ್ಷಣಾ ಕ್ಷೇತ್ರದಲ್ಲೂ ಎಲ್ಲಾ ದೇಶಗಳ ಮಿಲಿಟರಿಯೂ ಇಂಟರ್​​ನೆಟ್ ಬಳಸ್ತಾ ಇವೆ. ಸರ್ಕಾರಿ ಕೆಲಸಗಳಿಗೂ ಇಂಟರ್​​ನೆಟ್ ಅನಿವಾರ್ಯ. ಒಂದು ವೇಳೆ ಮಿಲಿಟರಿ ಮತ್ತು ಸರ್ಕಾರದ ಕೆಲಸಕ್ಕೆ ಇಂಟರ್​ನೆಟ್ ಸ್ಥಗಿತವಾದ್ರೆ ಇಡೀ ದೇಶಕ್ಕೆ ಹೊಡೆತ ಬೀಳುತ್ತೆ. ಹೀಗಾಗಿ ಎರಡೂ ಕ್ಷೇತ್ರಗಳಿಗೆ ಸ್ಯಾಟ್​​ಲ್ಯಾಟ್ ಇಂಟರ್​ನೆಟ್ ವ್ಯವಸ್ಥೆಯನ್ನೇ ಹೆಚ್ಚು ಬಳಸಲಾಗುತ್ತೆ. ಒಂದು ವೇಳೆ ಸಮುದ್ರದಾಳದಲ್ಲಿ, ಅಂಡರ್​​​ಗ್ರೌಂಡ್​​ನಲ್ಲಿರೋ ಕೇಬಲ್​​ಗಳು ಕಟ್ ಆದ್ರೂ ಸಮಸ್ಯೆಯಾಗೋದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸ್ಯಾಟ್​​ಲೈಟ್ ಇಂಟರ್​ನೆಟ್ ವ್ಯವಸ್ಥೆಯನ್ನ ಮತ್ತಷ್ಟು ಅಭಿವೃದ್ಧಿಗೊಳಿಸಲಾಗ್ತಿದೆ. ಅದ್ರಲ್ಲೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಸ್ಟಾರ್​ ಲಿಂಕ್ ಹೆಸರಲ್ಲಿ ಸ್ಯಾಟ್​​ಲೈಟ್ ಇಂಟರ್​​​ನೆಟ್ ವ್ಯವಸ್ಥೆ ಮಾಡಿದ್ದು, ಇದ್ರಿಂದ ರಿಮೋಟ್ ಏರಿಯಾಗಳಲ್ಲೂ ಇಂಟರ್​​ನೆಟ್ ಕನೆಕ್ಷನ್ ಪಡೆಯಬಹುದು.

ಇನ್ನು ಸಮುದ್ರದಾಳದ ಇಂಟರ್​ನೆಟ್ ಕೇಬಲ್ ವಿಚಾರಕ್ಕೆ ಬರೋದಾದ್ರೆ, ಸಮುದ್ರದ ಕೆಳ ಭಾಗದಲ್ಲಿರೋ ಇಂಟರ್​ನೆಟ್ ಕೇಬಲ್​ ಪೈಕಿ ಶೇಕಡಾ 50ರಷ್ಟು ಅಮೆರಿಕದ ಕಂಪನಿಗಳಾದ ಗೂಗುಲ್, ಫೇಸ್​ಬುಕ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್​ಗೆ ಸೇರಿದೆ. ನೀವು ಬಳಸೋ ಕಂಪ್ಯೂಟರ್​​ಗಳು, ಸ್ಟ್ರೀಮಿಂಗ್ ಇವೆಲ್ಲವೂ ನಡೆಯೋದೆ ಈ 50 ಪರ್ಸೆಂಟ್​ನಷ್ಟು ಕೇಬಲ್​ಗಳ ಮೂಲಕ. ಈ ಕೇಬಲ್​​ಗಳಿಗೆ ಡ್ಯಾಮೇಜ್ ಆದ್ರೆ, ಏನಾದ್ರು ಟೆಕ್ನಿಕಲ್ ಪ್ರಾಬ್ಲಂಗಳಾದ್ರೆ ನಿಮ್ಮ ಇಂಟರ್​​ನೆಟ್ ಕನೆಕ್ಷನ್​​ನಲ್ಲೂ ಹೆಚ್ಚು ಕಮ್ಮಿಯಾಗುತ್ತೆ. ಬಹುತೇಕ ಇಂಟರ್​ನೆಟ್ ಕೇಬಲ್​​ಗಳು ಖಾಸಗಿ ಕಂಪನಿಗಳಿಗೆ ಸೇರಿದ್ರೂ ಅದ್ರ ಒಡೆತನ ಸರ್ಕಾರಗಳ ಕೈಯಲ್ಲೇ ಇದೆ. ಭದ್ರತೆಯ ಕಾರಣಕ್ಕಾಗಿ ಕೇಬಲ್​ಗಳನ್ನ ಸರ್ಕಾರಗಳೇ ಕಂಟ್ರೋಲ್ ಮಾಡ್ತಾ ಇವೆ. ಹೀಗಾಗಿಯೇ ಈಗ ಇಂಟರ್​ನೆಟ್ ಕೇಬಲ್ ವಾರ್ ಕೂಡ ಶುರುವಾಗಿದೆ. ಅಮೆರಿಕ ಮತ್ತು ಚೀನಾ ನಡುವೆ ಇಂಟರ್​​ನೆಟ್ ಕೇಬಲ್​​​ನ್ನ ಕಂಟ್ರೋಲ್ ಮಾಡೋ ವಿಚಾರದಲ್ಲಿ ಜಿದ್ದಾಜಿದ್ದಿ ನಡೀತಾ ಇದೆ. ಇಲ್ಲೂ ಅಮೆರಿಕ ಮತ್ತು ಚೀನಾ ಬೆಂಬಲಿತ ರಾಷ್ಟ್ರಗಳು ಅನ್ನೋ ಎರಡು ಬಣಗಳಿವೆ. ಪರಿಣಾಮ 2018ರಲ್ಲಿ ಅಮೆರಿಕದ ದೋಸ್ತ್ ಆಸ್ಟ್ರೇಲಿಯಾ ಚೀನಾದ ಟೆಕ್​ ಕಂಪನಿ ಹುವಾಯೆ ಆಸ್ಟ್ರೇಲಿಯಾ ಸಮುದ್ರ ಭಾಗದಲ್ಲಿ ಕೇಬಲ್ ರವಾನಿಸೋದನ್ನ ತಡೆದಿತ್ತು. ಇದ್ರಿಂದ ತನ್ನ ಆಂತರಿಕ ಭದ್ರತೆಗೆ ಸಮಸ್ಯೆಯಾಗಬಹುದು. ತನ್ನ ನೆಟ್​​​ವರ್ಕ್​​ಗಳ ಆಕ್ಸೆಸ್ ಚೀನಾಗೆ ಸಿಗಬಹುದು ಅನ್ನೋ ಕಾರಣಕ್ಕೆ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿತ್ತು. ಹಾಗೆಯೇ ಗೂಗುಲ್​ ಮತ್ತು ಫೇಸ್​ಬುಕ್​ 8800 ಮೈಲಿ ಇಂಟರ್​ನೆಟ್ ಕೇಬಲ್​ನ್ನ ಹಾಂಗ್​​ಕಾಂಗ್ ಮತ್ತು ಅಮೆರಿಕ ಮಧ್ಯೆ ಕನೆಕ್ಟ್ ಮಾಡೋಕೆ ಮುಂದಾದಾಗ ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ಪ್ಯಾನಲ್ ಅದಕ್ಕೆ ತಡೆಯೊಡ್ಡಿತ್ತು. ಹಾಂಗ್​ಕಾಂಗ್ ಜೊತೆಗೆ ಕೇಬಲ್ ಕನೆಕ್ಟ್ ಮಾಡಿದ್ರೆ ಚೀನಾ ಇಂಟರ್​ನೆಟ್ ಟ್ರಾಫಿಕ್​ನ್ನೇ ಹ್ಯಾಕ್ ಮಾಡಬಹುದು. ಇನ್​ಫಾರ್ಮೇಶನ್ ಕದಿಯಬಹುದು ಅಂತಾ ವಾರ್ನಿಂಗ್ ಮಾಡಿತ್ತು. ಈಗಾಗ್ಲೇ ಚೀನಾ ಜಾಗತಿಕ ಇಂಟರ್​ನೆಟ್ ವ್ಯವಸ್ಥೆಯನ್ನ ಹ್ಯಾಕ್ ಮಾಡೋಕೆ ಪ್ರಯತ್ನ ಪಡ್ತಾ ಇದೆ. ಒಂದನೇ ಮಹಾಯುದ್ಧದ ವೇಳೆ ಬ್ರಿಟನ್ ಜಾಗತಿಕ ಟೆಲಿಗ್ರಾಫ್ ಸಂಪರ್ಕ ವ್ಯವಸ್ಥೆಯನ್ನ ತನ್ನ ಕಂಟ್ರೋಲ್​ನಲ್ಲಿಟ್ಟುಕೊಂಡಿದ್ದಾಗ ಇಡೀ ಜರ್ಮನಿಯ ಕಮ್ಯುನಿಕೇಶನ್ ವ್ಯವಸ್ಥೆಯನ್ನೇ ಕಟ್ ಮಾಡಿತ್ತು. ಹಾಗೆಯೇ 1970ರಲ್ಲಿ ಅಮೆರಿಕ ತನ್ನ ಬದ್ಧ ವೈರಿ ರಷ್ಯಾಗೆ ಸೇರಿದ ಸಮುದ್ರದಾಳದ ಕಮ್ಯುನಿಕೆಶನ್ ಸಿಸ್ಟಮ್​ ಕೇಬಲ್​​​ನ್ನ ಹ್ಯಾಕ್ ಮಾಡೋಕೆ ಯತ್ನಿಸಿತ್ತು. ಹೀಗೆ ಭವಿಷ್ಯದಲ್ಲಿ ಇಂಟರ್​ನೆಟ್ ವಾರ್ ಅನ್ನೋದೆ ದೊಡ್ಡ ಮಟ್ಟದ ಸಮರವಾಗಲಿದೆ. ಇಂಟರ್​ನೆಟ್ ಕನೆಕ್ಷನ್ ಕಟ್ ಮಾಡಿದ್ರೆ ಸಾಕು ಇಡೀ ದೇಶವನ್ನೇ ಬುಡಮೇಲು ಮಾಡಿಬಿಡಬಹುದು. ಈಗಾಗ್ಲೇ ನಡೀತಾ ಇರೋ ಹ್ಯಾಕಿಂಗ್​ಗಳೆಲ್ಲಾ ಈ ಇಂಟರ್​​ನೆಟ್ ಸಮರದ ಸಣ್ಣ ಟ್ರೈಲರ್ ಅಷ್ಟೇ.. ಪಿಕ್ಚರ್ ಅಭೀ ಬಾಕಿ ಹೈ..

Shwetha M