ಬಾಂಗ್ಲಾ ದಂಗೆ ಹಿಂದೆ ಯೂನಸ್ ಕೈವಾಡ? – ಸರ್ಕಾರದ ಮೇಲೆ ಹಾದಿ ಸಹೋದರನ ಗಂಭೀರ ಆರೋಪ

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಢಾಕಾದಲ್ಲಿ ತಲೆಗೆ ಗುಂಡು ಹಾರಿಸಿ ಸಾವನ್ನಪ್ಪಿದ ಕೆಲವು ದಿನಗಳ ನಂತರ, ಅವರ ಸಹೋದರ ಸರ್ಕಾರದ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯನ್ನು ಹಳಿತಪ್ಪಿಸಲು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಒಂದು ಭಾಗವು ಹತ್ಯೆಯನ್ನು ಸಂಘಟಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ 2024 ರ ಜುಲೈ ದಂಗೆಯಿಂದ ಹುಟ್ಟಿಕೊಂಡ ಸಾಂಸ್ಕೃತಿಕ ಸಂಘಟನೆಯಾದ ಇಂಕ್ವಿಲಾಬ್ ಮೊಂಚೊದ ವಕ್ತಾರ ಷರೀಫ್ ಉಸ್ಮಾನ್ ಹಾದಿ ಅವರನ್ನು ಡಿಸೆಂಬರ್ 12 ರಂದು ಢಾಕಾದಲ್ಲಿ ಗುಂಡು ಹಾರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಿಂಗಾಪುರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಡಿಸೆಂಬರ್ 18 ರಂದು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.
ಉಸ್ಮಾನ್ ಹಾದಿ ಅವರ ಹತ್ಯೆ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯ್ತು. ಭಾರತ ವಿರೋಧಿ ಹೇಳಿಕೆಗೆ ಕಾರಣವಾಗಿದೆ. ಹಾದಿ ಸಾವಿಗೆ ಭಾರತವೇ ಕಾರಣ ಅನ್ನೋ ರೀತಿಯಲ್ಲಿ ಬಿಂಬಿಸಿ ಹಿಂದೂಗಳಿಗೆ ಸಾಕಷ್ಟು ಹಿಂಸೆಯನ್ನ ನೀಡಲಾಗಿದೆ. ಇದೇ ವಿಚಾರವಾಗಿ ಢಾಕಾದ ಶಹಬಾಗ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉಸ್ಮಾನ್ ಹಾದಿ ಅವರ ಸಹೋದರ ಷರೀಫ್ ಒಮರ್ ಹಾದಿ, ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದರು. “ನೀವು ಉಸ್ಮಾನ್ ಹಾದಿಯನ್ನು ಕೊಲ್ಲುವಂತೆ ಮಾಡಿದ್ದೀರಿ, ಮತ್ತು ಈಗ ಇದನ್ನು ಒಂದು ವಿಷಯವಾಗಿ ಬಳಸಿಕೊಂಡು ಚುನಾವಣೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದೀರಿ” ಎಂದು ಭಾರೀ ಆರೋಪವನ್ನು ಮಾಡಿದ್ದಾರೆ.
ಇದನ್ನೂ ಓದಿ: ನಭಕ್ಕೆ ಹಾರಿದ ಬಾಹುಬಲಿ ರಾಕೆಟ್ – ಅಮೆರಿಕದ ಭಾರೀ ಭಾರದ ಉಪಗ್ರಹ ನಭಕ್ಕೆ ಹಾರಿಸಿದ ಇಸ್ರೋ
ಚುನಾವಣಾ ವಾತಾವರಣಕ್ಕೆ ಹಾನಿಯಾಗದಂತೆ ಹಂತಕರ ತ್ವರಿತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಿ. ಉಸ್ಮಾನ್ ಹಾದಿಗೆ ನ್ಯಾಯ ಸಿಗದಿದ್ದರೆ, ನೀವು ಕೂಡ ಒಂದು ದಿನ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇಂಕ್ವಿಲಾಬ್ ಮೊಂಚೊ ಸದಸ್ಯ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಜಾಬರ್, ಉಸ್ಮಾನ್ ಹತ್ಯೆಯು ಜುಲೈ ದಂಗೆಯ ಸಾಧನೆಗಳು ಮತ್ತು ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ನಾಶಮಾಡುವ “ಆಳವಾದ ಪಿತೂರಿಯ” ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಮತ್ತು ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ “ಫ್ಯಾಸಿಸ್ಟ್ ಸಹಚರರು” ಉಸ್ಮಾನ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು. ನ್ಯಾಯ ಸಿಗುವವರೆಗೂ ಬೀದಿಗಳಲ್ಲಿಯೇ ಇದ್ದು ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ನೋಡಿರಿ

