3 ವರ್ಷ.. 4 ಕ್ಯಾಪ್ಟನ್.. 8 ಕೋಚ್! – ಬದಲಾವಣೆಯಲ್ಲೂ ಪಾತಾಳಕ್ಕಿಳಿದ PAK
AUS ಪ್ರವಾಸದಲ್ಲೂ ಮಹಾ ಬಿರುಕು
ಪಾಕ್ ತಂಡದಲ್ಲಿ ಏನೊಂದು ಸರಿ ಇಲ್ಲ ಅನ್ನೋದು ನಿಮ್ಗೆಲ್ಲಾ ಗೊತ್ತಿರೋ ವಿಚಾರನೇ. ಇದೀಗ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಒಡಕು ಮುಂದುವರಿದಿದೆ. ಬಾಬರ್ ಆಝಂ ನೇತೃತ್ವದ ಒಂದು ಗುಂಪು ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ರೆ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಇನ್ನೊಂದು ಗುಂಪು ಬೇರೆಯಾಗಿ ತೆರಳ್ತಿದೆ. ಇದೇ ಈಗ ಪಾಕ್ ತಂಡದಲ್ಲಿನ ಬಿರುಕಿನ ಬಗ್ಗೆ ಕನ್ನಡಯಂತಿದೆ. ಹೊಸ ನಾಯಕ ಮತ್ತು ಕೋಚ್‌ನ ನೇಮಕ ಮಾಡಿದ್ರೂ ಟೀಂ ಸ್ಪಿರಿಟ್ ಅಂತೂ ಇಲ್ವೇ ಇಲ್ಲ. ಅಷ್ಟಕ್ಕೂ ಕಳೆದ ಮೂರು ವರ್ಷಗಳಲ್ಲಿ ಪಾಕ್ ತಂಡದಲ್ಲಿ ನಾಯಕರ ಬದಲಾವಣೆ ಪರ್ವವೇ ನಡೆದಿದೆ. ಕೋಚ್ಗಳ ನೇಮಕ ಸರಣಿ ಮುಂದುವರಿದಿದೆ. ಅಷ್ಟಕ್ಕೂ ಪಾಕ್ನಲ್ಲಿ ಆಂತರಿಕ ಕಲಹ ಹೆಚ್ಚಾಗ್ತಿರೋದೇಕೆ? ಎಷ್ಟು ಬಾರಿ ಕ್ಯಾಪ್ಟನ್ಸಿ ಮಾಡಿದ್ರು? ಕೋಚ್ಗಳನ್ನ ಬದಲಾಯಿಸಿದ್ರೂ ಯಾಕೆ ಸಮಸ್ಯೆ ಬಗೆ ಹರಿಯುತ್ತಿಲ್ಲ. ಪಾಕ್ ತಂಡದಲ್ಲಿನ ಕರ್ಮಕಾಂಡಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IND ಬಗ್ಗೆ ನಾಲಗೆ ಹರಿಬಿಟ್ಟ NZ – ಟೆಸ್ಟ್ ಸರಣಿ ಗೆದ್ದು ಸೌಥಿ ದರ್ಪ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಆಫ್ಟರ್ ಎ ಲಾಂಗ್ ಟೈಂ ಪಾಕಿಸ್ತಾನ ಟೀಂ ಕಮ್ ಬ್ಯಾಕ್ ಮಾಡಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ 20 ಸರಣಿಗಾಗಿ ಆಸ್ಟ್ರೇಲಿಯಾಗೆ ಪಾಕ್ ಟೀಂ ತೆರಳಿದೆ. ಆ ಬಳಿಕವೂ ತಂಡದ ಮುಖ್ಯ ಕೋಚ್ ಬದಲಾಗಿದ್ದು, ಸೀಮಿತ ಓವರ್ಗಳ ನಾಯಕನೂ ಚೇಂಜ್ ಆಗಿದ್ದಾರೆ. ಆದ್ರೂ ಕೂಡ ಪಾಕಿಸ್ತಾನ ಕ್ರಿಕೆಟ್‌ನ ಸಮಸ್ಯೆಗಳು ಮುಗೀತಿಲ್ಲ. ಆಯ್ಕೆ ಸಮಿತಿ, ಆಡಳಿತ ಸಮಿತಿ, ನಾಯಕರ ಬದಲಾವಣೆ ಗದ್ದಲ ಮುಂದುವರಿದಿದೆ. ಮೂರು ವರ್ಷಗಳ ಅವಧಿಯಲ್ಲಿ ಪಿಸಿಬಿಯಲ್ಲಿ ಬದಲಾವಣೆಗಳ ಪರ್ವವೇ ನಡೆದಿದೆ. 2021ರ ಆಗಸ್ಟ್‌ನಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಸ್ಥಾನದಿಂದ ಎಹ್ಸಾನ್ ಮಾಣಿ ಕೆಳಗಿಳಿದ ಬಳಿಕ ಅಲ್ಲಿನ ಕ್ರಿಕೆಟ್ ವ್ಯವಸ್ಥೆಯೂ ಕುಸಿಯುತ್ತಿದೆ. ಕಳೆದ 3 ವರ್ಷಗಳಲ್ಲಿ ಪಿಸಿಬಿ 4 ಮುಖ್ಯಸ್ಥರನ್ನು ಕಂಡಿದೆ. ರಮೀಜ್ ರಾಜಾ, ನಜಂ ಸೇಠಿ, ಜಾಕಾ ಆಶ್ರಫ್ ಬಳಿಕ ಈಗ ಮೊಹ್ಸಿನ್ ನಖ್ವಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಹಾಗೇ ದೀರ್ಘ ಕಾಲದ ನಾಯಕ ಬಾಬರ್ ಆಜಂ ಬಳಿಕ ಶಾಹೀನ್ ಅಫ್ರಿದಿ, ಶಾನ್ ಮಸೂದ್, ಮೊಹಮದ್ ರಿಜ್ವಾನ್ ಕ್ಯಾಪ್ಟನ್ ಆಗಿದ್ದಾರೆ.
ಇದು ಬರೀ ಕೋಚ್ ಮಾತ್ರವೇ ಅಲ್ಲ. ಆಯ್ಕೆ ಸಮಿತಿಯಲ್ಲೂ ಇದೇ ಗೋಳು. ಕೇವಲ ಮೂರೇ ವರ್ಷದಲ್ಲಿ ಆಯ್ಕೆ ಸಮಿತಿಗೆ ಮೂವರು ಮುಖ್ಯಸ್ಥರು ಹಾಗೂ ಬರೋಬ್ಬರಿ 28 ಮಂದಿ ಆಯ್ಕೆಯಾಗಿದ್ದಾರೆ. ವಿದೇಶದಲ್ಲಿ ಲೀಗ್ ಆಡುತ್ತಿರುವಾಗಲೇ ಆಯ್ಕೆ ಸಮಿತಿಗೆ ಆಯ್ಕೆಯಾಗುವುದು, ನಿವೃತ್ತಿ ಘೋಷಿಸಿ ಕೆಲ ತಿಂಗಳಲ್ಲೇ ಮುಖ್ಯಸ್ಥರಾಗಿ ನೇಮಕಗೊಳ್ಳುವುದೆಲ್ಲಾ ಸದ್ಯ ಪಾಕ್ ಕ್ರಿಕೆಟ್‌ನಲ್ಲಿ ಮಾತ್ರ ಕಾಣಲು ಸಾಧ್ಯ. ಕೋಚ್‌ಗಳು ಕೂಡಾ ಪದೇ ಪದೇ ಬದಲಾಗುತ್ತಿದ್ದು, ಪಿಸಿಬಿ ಜೊತೆಗಿನ ಕಿತ್ತಾಟದಿಂದಾಗಿ ಅವಧಿ ಪೂರ್ಣಗೊಳ್ಳುವ ಮೊದಲೇ ಹುದ್ದೆ ತೊರೆಯುತ್ತಿದ್ದಾರೆ. 2021ರಲ್ಲಿ ಮಿಸ್ಬಾಹುಲ್ ಹಕ್ ಕೋಚ್ ಆಗಿದ್ದರೆ, ಬಳಿಕ ಈವರೆಗೂ ಏಳು ಮಂದಿ ಹುದ್ದೆಗೇರಿದ್ದಾರೆ. ಈಗ ಪಿಸಿಬಿ ಮತ್ತೋರ್ವ ಕೋಚ್‌ನ ಹುಡುಕಾಟದಲ್ಲಿದೆ.
ಕೋಚ್ ಹುದ್ದೆಗೆ ಗುಡ್ ಬೈ ಹೇಳಿದ್ದೇಕೆ ಗ್ಯಾರಿ ಕರ್ಸ್ಟನ್?
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಪಾಕಿಸ್ತಾನದ ಸೀಮಿತ ಓವರ್ ತಂಡದ ಕೋಚ್ ಆಗಿದ್ದು ಆರು ತಿಂಗಳಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ತಂಡಕ್ಕೆ ಕೋಚ್ ಆಗಿದ್ದ ಕರ್ಸ್ಟನ್ ಕಳೆದ ಏಪ್ರಿಲ್‌ನಲ್ಲಿ ಪಾಕ್ ತಂಡದ ಕೋಚ್ ಹುದ್ದೆಗೇರಿದ್ದರು. ಕೋಚ್ ಅವಧಿ ಎರಡು ವರ್ಷ ಇರಲಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಆದರೆ ಪಿಸಿಬಿ ಜೊತೆಗಿನ ಮನಸ್ತಾಪದ ಕಾರಣಕ್ಕೆ ಅವರು ಅವಧಿಗೂ ಮುನ್ನವೇ ಹುದ್ದೆ ತೊರೆದಿದ್ದಾರೆ. ಹುದ್ದೆ ಬಿಡಲು ಕಾರಣ ಬಹಿರಂಗಗೊಳ್ಳದಿದ್ದರೂ, ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ವಿರುದ್ಧ ಸರಣಿಗಳಿಗೆ ತಂಡ ಪ್ರಕಟಿಸುವಾಗ ತಮ್ಮನ್ನು ಕಡೆಗಣಿಸಿದ್ದಕ್ಕೆ ಕರ್ಸ್ಟನ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಗ್ಯಾರಿ ಕರ್ಸ್ಟನ್ ರಾಜೀನಾಮೆ ಬೆನ್ನಲ್ಲೇ, ಟೆಸ್ಟ್ ತಂಡದ ಹಾಲಿ ಕೋಚ್ ಆಗಿರುವ ಜೇಸನ್ ಗಿಲೆಸ್ಪಿಯನ್ನು ಪಾಕಿಸ್ತಾನದ ಸೀಮಿತ ಓವರ್ ತಂಡದ ಹೊಸ ಕೋಚ್ ಎಂದು ಪಿಸಿಬಿ ಘೋಷಿಸಿದೆ. ಆದರೆ ನಾನು ಕೇವಲ ಟೆಸ್ಟ್ ತಂಡದ ಕೋಚ್ ಆಗಿ ಇರುತ್ತೇನೆ. ಏಕದಿನ, ಟಿ20ಗೆ ಕೋಚಿಂಗ್ ಮಾಡಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗಿಲೆಪ್ಸಿ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪಿಸಿಬಿಗೆ ಭಾರಿ ಮುಜುಗರ ಎದುರಾಗಿದೆ. ಈ ನಡುವೆ ಪಿಸಿಬಿ, ಏಕದಿನ ಹಾಗೂ ಟಿ20ಗೆ ಹೊಸ ಕೋಚ್‌ನ ಹುಡುಕಾಟದಲ್ಲಿದ್ದು, ಮಾಜಿ ಆಟಗಾರರಾದ ಆಖಿಬ್ ಜಾವೆದ್, ಸಕಲೈನ್ ಮುಷ್ತಾಕ್ ರೇಸ್‌ನಲ್ಲಿದ್ದಾರೆ.
ತಂಡದಲ್ಲಿ ಬದಲಾವಣೆಯಾದ್ರೂ ಆಟಗಾರರ ವೈಮನಸ್ಸು
ಟೀಮ್ನಲ್ಲಿ ಏನೆಲ್ಲ ಬದಲಾವಣೆಯಾದರೂ, ಆಟಗಾರರ ನಡುವಿನ ವೈಮನಸು ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸೀಮಿತ ಓವರ್ಗಳ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ಅಧಿಕಾರ ವಹಿಸಿಕೊಂಡ ಬಳಿಕ ತಂಡದೊಳಗಿರುವ ಒಡುಕಿಗೆ ಪರಿಹಾರ ಸಿಕ್ಕಿದೆ ಎಂದು ಪಾಕ್ ಮಂಡಳಿ ಕೂಡ ಬಾವಿಸಿತ್ತು. ಆದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟಿರುವ ಪಾಕ್ ಆಟಗಾರರು ತಂಡದಲ್ಲಿ ಇನ್ನೂ ಯಾವುದು ಸರಿ ಹೋಗಿಲ್ಲ ಎಂಬುದನ್ನು ಮತ್ತೆ ಜಗಜ್ಜಾಹೀರು ಮಾಡಿದ್ದಾರೆ. ಒಟ್ನಲ್ಲಿ ಪಾಕ್ನಲ್ಲಿ ಕ್ರಿಕೆಟ್‌ನಲ್ಲಿ ಏನೊಂದು ಸರಿ ಇಲ್ಲ ಅನ್ನೋದು ಪದೇಪದೇ ಸಾಬೀತಾಗ್ತಿದೆ.