ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾರಿ ಬದಲಾವಣೆ – ಈ ಬಾರಿ ವಾಹನದಲ್ಲಿ ಅಂಬಾರಿ ಮೆರವಣಿಗೆ!

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾರಿ ಬದಲಾವಣೆ – ಈ ಬಾರಿ ವಾಹನದಲ್ಲಿ ಅಂಬಾರಿ ಮೆರವಣಿಗೆ!

ಶಿವಮೊಗ್ಗದಲ್ಲಿ ದಸರಾ ಹಬ್ಬದಾಚರಣೆ ಜೋರಾಗಿದೆ. ಇಲ್ಲಿನ ದಸರಾ ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಪಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಾರಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತಿದೆ. ಆದರೆ ಈ ಬಾರಿಯ ಶಿವಮೊಗ್ಗ ದಸರಾ ವಿಭಿನ್ನವಾಗಿ ನಡೆಯಲಿದೆ. ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಹೌದು ಈ ಬಾರಿಯ ಶಿವಮೊಗ್ಗ ದಸರಾಗೆ ಬಂದಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಹಿನ್ನೆಲೆ ಈ ಬಾರಿ ಅಂಬಾರಿಯನ್ನು ವಾಹನದಲ್ಲಿ ಮೆರವಣಿಗೆ ಮಾಡಲು ಶಿವಮೊಗ್ಗ ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಸಾಗರ, ಹೇಮಾವತಿ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಂಬೂಸವಾರಿಗೆ ಕರೆತಂದಿದ್ದ ಆನೆಗೆ ಹೆರಿಗೆ! – ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ!

ಪ್ರತಿ ವರ್ಷ ಸಾಗರ ಆನೆಯು ಅಂಬಾರಿ ಹೊರುತಿತ್ತು ಅದರ ಜತೆಗೆ ಎರಡು ಆನೆಗಳು ಸಾಥ್ ನೀಡುತ್ತಿದ್ದವು‌‌‌. ಕುಂತಿ ಆನೆ ಮರಿ ಹಾಕಿದ್ದು ಭಾನುಮತಿ ಗರ್ಭಿಣಿಯಾಗಿದ್ದ ಕಾರಣಕ್ಕೆ ಹೇಮಾವತಿ, ನೇತ್ರಾವತಿ ಆನೆಗಳನ್ನು ಸಾಗರ ಆನೆಗೆ ಸಾಥ್ ‌ನೀಡಲು ಕರೆತರಲಾಗಿತ್ತು. ಆದರೆ ಇದೀಗ ನೇತ್ರಾವತಿ ಗರ್ಭ ಧರಿಸಿದ ಯಾವುದೇ ಲಕ್ಷಣ ಬಿಟ್ಟು ಕೊಡದೆ ಮರಿ ಹಾಕಿದೆ. ಈಗ ನೇತ್ರಾವತಿ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ಕಳುಹಿಸಲಾಗಿದ್ದು ಸಾಗರ ಆನೆ ಮೇಲೆ ಅಂಬಾರಿ ಹೊರಿಸದೆ ಮೆರವಣಿಗೆಯಲ್ಲಿ ಕೊಂಡೊಯ್ಯಲು ತೀರ್ಮಾನಿಸಲಾಗಿದೆ.

ಇನ್ನು ಮೆರವಣಿಗೆ ಕೋಟೆ ಅರಮನೆಯಿಂದ ಹೊರಟು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ, ಜೈಲ್ ಸರ್ಕಲ್, ಲಕ್ಷ್ಮಿ ಟಾಕೀಸ್ ಮೂಲಕ ಸಾಗಿ ಫ್ರೀಡಂ ಪಾರ್ಕ್‌ನಲ್ಲಿ ಸಮಾರೋಪಗೊಳ್ಳಲಿದೆ‌‌.

Shwetha M