ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ – 2 ವರ್ಷಗಳ ಹಗ್ಗಜಗ್ಗಾಟಕ್ಕೆ ತೆರೆ!

ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ – 2 ವರ್ಷಗಳ ಹಗ್ಗಜಗ್ಗಾಟಕ್ಕೆ ತೆರೆ!

2 ವರ್ಷಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಅಮೆರಿಕ ಭಾರತಕ್ಕೆ ನೂತನ ರಾಯಭಾರಿಯನ್ನ ನೇಮಕ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆಪ್ತ ಸಹಾಯಕರಾಗಿರುವ ಎರಿಕ್ ಗಾರ್ಸೆಟ್ಟಿ ಅವರನ್ನು ಬುಧವಾರ ಯುಎಸ್ ಸೆನೆಟ್ ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ನೇಮಕಗೊಳಿಸಿದೆ. ಎರಡು ವರ್ಷಗಳಿಂದ ಖಾಲಿಯಾಗಿದ್ದ ಪ್ರಮುಖ ರಾಜತಾಂತ್ರಿಕ ಸ್ಥಾನವನ್ನು ತುಂಬಲು ಸೆನೆಟ್ 52-42 ಮತಗಳನ್ನು ನೀಡಿತು. ಲಾಸ್ ಏಂಜಲೀಸ್‌ನ ಮಾಜಿ ಮೇಯರ್‌ ಎರಿಕ್ ನಾಮನಿರ್ದೇಶನವು ಜುಲೈ 2021 ರಿಂದ ಯುಎಸ್ ಕಾಂಗ್ರೆಸ್‌ನಲ್ಲಿ ಬಾಕಿ ಉಳಿದಿತ್ತು.

ಇದನ್ನೂ ಓದಿ : ಅಮೆರಿಕದ ಎರಿಕ್ ಗರ್ಸೆಟ್ಟಿ ಭಾರತದ ನೂತನ ರಾಯಭಾರಿ – ಸೆನೆಟ್ ಸಮಿತಿಯಲ್ಲಿ ಅನುಮೋದನೆ..!

ಪ್ರತಿಷ್ಠಿತ ರಾಜತಾಂತ್ರಿಕ ಪೋಸ್ಟಿಂಗ್‌ಗೆ ಬೈಡನ್ ಅವರಿಂದ ಎರಿಕ್ ನಾಮನಿರ್ದೇಶನಗೊಂಡಿದ್ದರು. ಕಳೆದ ವಾರ, ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯು ಅವರ ನಾಮನಿರ್ದೇಶನದ ಪರವಾಗಿ 13-8 ಮತಗಳನ್ನು ನೀಡಿತು. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಬೈಡೆನ್ ಅವರ ನಿಕಟ ಸಹಾಯಕ ಎರಿಕ್‌ ಅವರನ್ನು ನೇಮಕ ಮಾಡಲು ವಿರೋಧಿಸಿತ್ತು. ಹೀಗಾಗಿ ಎರಿಕ್ ನಾಮನಿರ್ದೇಶನವನ್ನು ಮತಕ್ಕಾಗಿ ಸೆನೆಟ್ ಅಂಗಳಕ್ಕೆ ತರಲಾಗಿರಲಿಲ್ಲ. ನಂತರ ಅಮೆರಿಕ ಅಧ್ಯಕ್ಷ ಜೋ ಬೈಡೆನ್  2021ರಲ್ಲೂ ಮರು ನಾಮನಿರ್ದೇಶನ ಮಾಡಿದ್ದರು. ಆಗಲೂ ವಿರೋಧ ವ್ಯಕ್ತವಾಗಿ ನೇಮಕ ಮುಂದೂಡಲ್ಪಟ್ಟಿತ್ತು. ಇದೀಗ ಕೊನೆಗೂ ಅವರನ್ನು ಸೆನೆಟ್‌ ಅನುಮೋದನೆಯೊಂದಿಗೆ ಭಾರತದ ರಾಯಭಾರಿಯಾಗಿ ನೇಮಿಸಲಾಗಿದೆ.

suddiyaana