ಭುವನೇಶ್ವರ್‌ಗೆ ಲಕ್ಕಿ ಆಯ್ತಾ RCB? ಟೀಂ INDಕ್ಕೆ ಸ್ವಿಂಗ್ ಕಿಂಗ್ ಕಂಬ್ಯಾಕ್?
ಸಾಲಿಡ್ ಫಾರ್ಮ್‌ಗೆ ಚಾನ್ಸ್ ಏಕಿಲ್ಲ?

ಟೀಂ ಇಂಡಿಯಾದ ಸ್ವಿಂಗ್ ಕಿಂಗ್ ಅಂದ್ರೆ ಅದು ಬೌಲರ್ ಭುವನೇಶ್ವರ್ ಕುಮಾರ್. ಟೆಸ್ಟ್, ಟಿ-20 ಹಾಗೇ ಏಕದಿನ ಮಾದರಿಯಲ್ಲೂ ಭಾರತದ ಪರ ಅತ್ಯದ್ಭುತ ಪ್ರದರ್ಶನ ನೀಡಿದ ಸ್ಟಾರ್ ಕ್ರಿಕೆಟರ್. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಭುವಿ ಬ್ಲ್ಯೂ ಜೆರ್ಸಿ ತೊಟ್ಟಿಲ್ಲ. ಆರ್‌ಸಿಬಿ ಬ್ಯಾಕ್ ಟೂ ಬ್ಯಾಕ್ ಕಪ್ ಗೆಲ್ಲೋಕೆ ಒಂದು ರೀತಿಯಲ್ಲಿ ಭುವಿ ಕಾರಣ. ಈ ಸೀಸನ್‌ನಲ್ಲಿ 28 ವಿಕೆಟ್ ಕಬಳಿಸಿರೋ ಬುವಿ ಒಂದೇ ಒಂದು ವಿಕೆಟ್ ಅಂತರದಲ್ಲಿ ಪರ್ಪಲ್ ಕ್ಯಾಪ್ ಕಳೆದುಕೊಂಡಿದ್ದಾರೆ. ಆದ್ರೆ ಆರ್‌ಸಿಬಿ ಆರ್ಭಟಿಸಿರೋ ಭುವಿಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಕೊಡಿ ಅನ್ನೋ ಕೂಗು ಜೋರಾಗಿದೆ..
ಕ್ರಿಕೆಟ್ ಲೋಕದಲ್ಲಿ ಯಾರು ಯಾವಾಗ ಶೈನ್ ಆಗ್ತಾರೆ ಮತ್ತೆ ಯಾವಾಗ ಸೈಡ್ಲೈನ್ ಆಗ್ತಾರೆ ಅಂತಾ ಹೇಳೋಕಾಗಲ್ಲ. ಕೆಲವ್ರಿಗೆ ಪರ್ಫಾಮೆನ್ಸ್ ಇಲ್ಲದೆ ಚಾನ್ಸ್ ಕೈ ತಪ್ಪಿದ್ರೆ ಇನ್ನೂ ಕೆಲವ್ರಿಗೆ ಸಾಲಿಡ್ ಪ್ರದರ್ಶನ ನೀಡಿದ್ರೂ ಅವಕಾಶ ಸಿಗೋದಿಲ್ಲ. ಯಾಕೆ ಅನ್ನೋ ಕಾರಣ ನಿಗೂಢ. ಇವತ್ತಲ್ಲ ನಾಳೆ ಸಿಗುತ್ತೆ ಅಂತ ಸಾಕಷ್ಟು ಜನ ಕಾಯ್ತಾರೆ. ಹೀಗೆ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯ್ತಿರೋ ಸ್ಟಾರ್ ಆಟಗಾರ ಭುವನೇಶ್ವರ್ ಕುಮಾರ್. ಭಾರತ ಕ್ರಿಕೆಟ್ ತಂಡ ಕಂಡಂತಹ ಸರಳ ಮತ್ತು ಸಜ್ಜನಿಕೆಯ ಆಟಗಾರರಲ್ಲಿ ಭುವನೇಶ್ವರ್ ಕುಮಾರ್ ಟಾಪ್ನಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಪ್ರಮುಖ ವೇಗದ ಬೌಲರ್ ಆಗಿದ್ದರು. ಚೆಂಡನ್ನ ಸ್ವಿಂಗ್ ಮಾಡುತ್ತಲೇ ಎದುರಾಳಿ ಬ್ಯಾಟರ್ಗಳ ವಿಕೆಟ್ ಎಗರಿಸ್ತಿದ್ರು. ಬ್ಯಾಟಿಂಗ್ನಲ್ಲೂ ಆಸರೆಯಾಗಿದ್ರು. ಆರ್‌ಸಿಬಿ ಎರಡು ಕಪ್ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿರೋ ಭುವಿಗೆ ಭಾರತದ ಪರ ಆಡ್ಬೇಕು ಅನ್ನೋ ಆಸೆ ಇದ್ರೂ ತಂಡದ ಬಾಗಿಲು ತೆರೆಯುತ್ತಿಲ್ಲ. ಆರ್‌ಸಿಬಿಯಲ್ಲಿ ಭುವಿ ಆಟ ನೋಡಿದವರು ಭಾರತ ಟಿ20ಐ ಟೀಂನಲ್ಲಿ ಭುವನೇಶ್ವರ್ ಕುಮಾರ್‌ಗೆ ಚಾನ್ಸ್ ನೀಡಬೇಕು ಅನ್ನೋ ಕೂಗೂ ಜೋರಾಗಿದೆ.
ನಾಲ್ಕು ವರ್ಷಗಳಿಂದ ಭುವಿಗೆ ಸಿಗುತ್ತಿಲ್ಲ ಚಾನ್ಸ್
ಭುವನೇಶ್ವರ್ ಕುಮಾರ್ ಅವರು ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು 2022ರ ಜನವರಿ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಬಳಿಕ 2022ರ ನವೆಂಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಅವರು ತಮ್ಮ ಕೊನೆಯ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದಾದ ನಂತರ ಅವರಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡುವ ಅದೃಷ್ಟ ಸಿಕ್ಕಿಲ್ಲ. ಉತ್ತಮ ಫಾರ್ಮ್‌ನಲ್ಲಿರೋ ಭುವಿಗೆ ಯಾಕೆ ಚಾನ್ಸ್ ಸಿಗುತ್ತೆ ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಅದ್ರಲ್ಲೂ ಭಾರತದ ಪರ ಮೂರೂ ಮಾದರಿಯಲ್ಲಿ ತಮ್ಮ ಮೊದಲ ವಿಕೆಟ್ನ ಕ್ಲೀನ್ ಬೌಲ್ಡ್ ಮೂಲಕವೇ ತೆಗೆದುಕೊಂಡಿದ್ದಾರೆ. ಈ ಸಾಧನೆ ಮಾಡಿರೋ ಜಗತ್ತಿನ ಏಕೈಕ ಬೌಲರ್ ಭುವಿ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಭಾರತ ಪರ 121 ಏಕದಿನ, 21 ಟೆಸ್ಟ್ ಮತ್ತು 87 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 294 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಿದ್ರೂ ಭುವಿಗೆ ಭಾರತ ತಂಡದಲ್ಲಿ ಅವಕಾಶ ಸಿಗ್ತಿಲ್ಲ. 2024 ರ ಹರಾಜಿನಲ್ಲಿ ಎಸ್‌ಆರ್‌ಹೆಚ್ ಅವರನ್ನು ಕೈಬಿಟ್ಟ ನಂತರ ಆರ್‌ಸಿಬಿ ಅವರನ್ನು ₹10.75 ಕೋಟಿಗೆ ಖರೀದಿಸಿತು. 2025ರ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು. 2026ರ ಐಪಿಎಲ್ ಟೂರ್ನಿಯಲ್ಲಿ ಕೇವಲ 16 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸುವ ಮೂಲಕ ಕೇವಲ ಒಂದು ವಿಕೆಟ್ ಅಂತರದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶದಿಂದ ವಂಚಿತರಾದರು. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಕಗಿಸೋ ರಬಾಡ 17 ಮ್ಯಾಚ್ ಆಡಿ 29 ವಿಕೆಟ್ ಕಬಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. ಭುವಿ ಬಲದಿಂದ ಆರ್‌ಸಿಬಿ 2ನೇ ಕಪ್ ಕೂಡ ಗೆದ್ದಿದೆ. 16 ಪಂದ್ಯಗಳಿಂದ ಭುವಿ 63 ಓವರ್ ಬೌಲಿಂಗ್ ಮಾಡಿ ಕೇವಲ 7.95ರ ಎಕನಮಿಯಲ್ಲಿ ರನ್ ನೀಡಿ 28 ವಿಕೆಟ್ ಕಿತ್ತಿದ್ದದಾರೆ.
ಭುವನೇಶ್ವರ್ ಕುಮಾರ್ 19ನೇ ಸೀಸನ್ ಐಪಿಎಲ್ ಟೂರ್ನಿಯುದ್ದಕ್ಕೂ ಅತ್ಯಂತ ಶಿಸ್ತುಬದ್ದ ಬೌಲಿಂಗ್ ಮಾಡಿದ್ದು ಟೀಂ ಇಂಡಿಯಾದ ಟಿ20ಐ ತಂಡದಲ್ಲಿ ಚಾನ್ಸ್ ನೀಡಬೇಕು ಅನ್ನೋ ಕೂಗು ಜೋರಾಗಿದೆ. ಆಟಗಾರರ ಪ್ರದರ್ಶನವೇ ಆಯ್ಕೆಯ ಮಾನದಂಡ ಎನ್ನುವುದಾದರೇ, ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕು ಎಂದನಿಸುವುದಿಲ್ಲವೇ? ಇದಕ್ಕಿಂತ ಅವರು ಇನ್ನೇನು ಮಾಡಲು ಸಾಧ್ಯ? 2028ರ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭುವನೇಶ್ವರ್ ಕುಮಾರ್‌ಗೆ ಭಾರತ ತಂಡದಲ್ಲಿ ಮಣೆಹಾಕಬೇಕು ಅನ್ನೋ ಕೂಗೂ ಜೋರಾಗಿದೆ.

ನೋಡಿರಿ

