ಗುಜರಾತ್ ಮುಖ್ಯಮಂತ್ರಿಯಾಗಿ ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಪ್ರಮಾಣವಚನ
ಗುಜರಾತ್ : ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಭೂಪೇಂದ್ರ ಪಟೇಲ್ ಪ್ರಮಾಣವಚನಕ್ಕೆ ಮುಹೂರ್ತ ಕೂಡಾ ನಿಗದಿಯಾಗಿದ್ದು, ಡಿಸೆಂಬರ್ 12ರಂದು ಸಿಎಂ ಆಗಿ ಪಟ್ಟಕ್ಕೇರಲಿದ್ದಾರೆ. ಡಿಸೆಂಬರ್ 12ರಂದು ನಡೆಯುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಆಪರೇಷನ್ ಕಮಲದ ಭೀತಿ: ಗೆದ್ದ ಹಿಮಾಚಲ ಕಾಂಗ್ರೆಸ್ ಶಾಸಕರು ರಾಜಸ್ಥಾನಕ್ಕೆ ಶಿಫ್ಟ್?
ಘಟ್ಲೋಡಿಯಾ ಕ್ಷೇತ್ರದಿಂದ ಚುನಾವಣೆಗೆ ನಿಂತ ಭೂಪೇಂದ್ರ ಪಟೇಲ್, ಕಾಂಗ್ರೆಸ್ ಅಭ್ಯರ್ಥಿ ಡಾ. ಅಮೀ ಯಾಗ್ನಿಕ್ ಅವರನ್ನು ಬರೋಬ್ಬರಿ 50,000 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದರು. ಈ ಬಗ್ಗೆ ಸಿಎಂ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದು, “ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಅಭಿನಂದಿಸಿದ್ದಾರೆ. ಗುಜರಾತ್‌ನ ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.
ಚುನಾವಣೆಯ ನಂತರ ಭೂಪೇಂದ್ರ ಪಟೇಲ್ ಅವರನ್ನೇ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ಘೋಷಿಸಿತ್ತು. ಭೂಪೇಂದ್ರ ಪಟೇಲ್ ಕೂಡಾ ಭರ್ಜರಿ ಜಯ ಸಾಧಿಸಿ, ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಹಾದಿಯನ್ನು ಸುಗಮ ಮಾಡಿಕೊಂಡಿದ್ದಾರೆ. 60ರ ಹರೆಯದ ಭೂಪೇಂದ್ರ ಪಟೇಲ್, 1982ರಲ್ಲಿ ಅಹಮದಾಬಾದ್‌ನ ಸರ್ಕಾರಿ ಪಾಲಿಟೆಕ್ನಿಕ್ ನಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದ ನಾಯಕರಾಗಿದ್ದಾರೆ.