ದಿಲ್ಲಿ ಚಲೋಗೆ ಹೊರಟಿದ್ದ ರೈತರನ್ನು ಬಂಧಿಸಿದ ಭೋಪಾಲ್ ಪೊಲೀಸರು! – ಕುರುಬೂರು ಶಾಂತಕುಮಾರ್ ಪತ್ನಿ ತಲೆಗೆ ಗಾಯ
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ), ರೈತರಿಗೆ ಪಿಂಚಣಿ ಯೋಜನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತರು ಕೂಡ ದೆಹಲಿಗೆ ಹೋಗುತ್ತಿದ್ದು, ಮಧ್ಯಪ್ರದೇಶದ ಪೊಲೀಸರು ಕರ್ನಾಟಕದ ರೈತರ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಲು ಕರ್ನಾಟಕದ ರೈತರ ಗುಂಪು ದೆಹಲಿ ಕಡೆಗೆ ತೆರಳುತ್ತಿದೆ. ಸೋಮವಾರ ಮಧ್ಯಪ್ರದೇಶ ಭೋಪಾಲ್‌ಗೆ ರೈತರ ಗುಂಪು ತಲುಪಿದೆ. ಈ ವೇಳೆ ಭೋಪಾಲ್ ಪೊಲೀಸರು ರೈತರ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರ ರಾಕ್ಷಸಿ ಕೃತ್ಯದಿಂದ ರೈತ ಮಹಿಳೆಯರಿಗೆ ಗಾಯಗಳಾಗಿದ್ದು, ಇದರಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮಾ ಶಾಂತಕುಮಾರ್ ಅವರ ತಲೆಗೆ ಗಾಯವಾಗಿದೆ.
ಇದನ್ನೂ ಓದಿ: ಅಥ್ಲೆಟಿಕ್ಸ್ ಅಂಗಳದಲ್ಲಿ ಮೆರೆದ ರೈಸಿಂಗ್ ಸ್ಟಾರ್ ಇನ್ನಿಲ್ಲ – ಅಪಘಾತಕ್ಕೆ ಬಲಿಯಾದ ಕೆಲ್ವಿನ್ ಕಿಪ್ಟಮ್
ಈ ಕುರಿತು ರೈತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ರಾಕ್ಷಸಿ ಕೃತ್ಯದ ಬಗ್ಗೆ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಬೀದಿಗಳಿಯಲು ಸಜ್ಜಾಗಿರುವುದನ್ನು ಗಮನಿಸಿ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲವನ್ನ ಬಳಸಿ ಬಳಸಿಕೊಳ್ಳುತಿದೆ ಇದು ಖಂಡನೀಯ. ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದಾಗ, ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ 2 ಗಂಟೆ ವೇಳೆ ರೈಲಿನೊಳಗೆ ನುಗ್ಗಿ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿದ್ದಾರೆ. ರೈಲಿನ ಒಳಗೆ ರೈತರನ್ನು ಎಳೆದಾಡಿದ್ದು, ಈ ವೇಳೆ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರೈತ ಮಹಿಳೆ ಪದ್ಮಾ ಶಾಂತಕುಮಾರ್ ಅವರ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿಯೂ ಸರಿಯಾದ ಚಿಕಿತ್ಸೆ ಕೊಡಿಸದೆ ಡಿಸ್ಚಾರ್ಜ್ ಮಾಡಿಸಿ, ಬಂಧಿತ ರೈತರ ಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.
ಕರ್ನಾಟಕದಿಂದ ಮಹಿಳೆಯರು ಸೇರಿ ನೂರಾರು ರೈತರು ರೈಲಿನ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ನೂರಾರು ಪೊಲೀಸರು ನಿದ್ರೆಯಲ್ಲಿದ್ದ ರೈತರನ್ನು ಬಂಧಿಸಲು ಮುಂದಾದರು. ನಾವು ವಿರೋಧ ವ್ಯಕ್ತಪಡಿಸಿದಾಗ ಪೊಲೀಸರು ಎಲ್ಲಾ ಭೋಗಿಗಳಿಗೂ ಬಂದು ಮಹಿಳೆಯರನ್ನು ದನಗಳಂತೆ ಎಳೆದುಕೊಂಡು ಬಂದಿಸಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧವನ್ನು ಖಂಡಿಸಿ ಕರ್ನಾಟಕದ ರೈತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ರೈತ ವಿರೋಧ ನೀತಿಯನ್ನು ಖಂಡಿಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.