‘ಅನಿತಾಗೆ ಟಿಕೆಟ್ ಕೊಟ್ರೆ ನಂಗೂ ಕೊಡಿ’ – ಭವಾನಿ ರೇವಣ್ಣ ಪಟ್ಟು, ‘ದೊಡ್ಡಗೌಡ್ರ’ ಮನೆಯಲ್ಲಿ ಕಗ್ಗಂಟು!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾನಾ ಕಸರತ್ತು ಮಾಡ್ತಿವೆ. ಆದ್ರೆ ಜೆಡಿಎಸ್ ಮನೆಯಲ್ಲಿ ಮಾತ್ರ ಟಿಕೆಟ್ಗಾಗಿ ದೊಡ್ಡ ಫೈಟೇ ಶುರುವಾಗಿದೆ. ಅದೂ ಕೂಡ ದೊಡ್ಡಗೌಡ್ರ ಫ್ಯಾಮಿಲಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಹಾಸನ ಜಿಲ್ಲೆ ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆ. ಆದ್ರೆ ಈಗ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಹೈಡ್ರಾಮಾವೇ ನಡೀತಿದೆ. ಇತ್ತೀಚೆಗಷ್ಟೇ ಭವಾನಿ ರೇವಣ್ಣ ಹಾಸನಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಘೋಷಣೆ ಮಾಡಿಕೊಂಡಿದ್ರು. ಆದ್ರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಭವಾನಿಗೆ ಟಿಕೆಟ್ ಕೊಡಲ್ಲ. ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿದ್ರು.
ಇದನ್ನೂ ಓದಿ : ವಿಜಯನಗರ ಗತವೈಭವಕ್ಕೆ ಕೌಂಟ್ ಡೌನ್ – ಹಂಪಿ ಉತ್ಸವದಲ್ಲಿ ಈ ಸಲ ಏನೆಲ್ಲಾ ವಿಶೇಷತೆ..!?
ಹೆಚ್.ಡಿ ಕುಮಾರಸ್ವಾಮಿ ಬಹಿರಂಗವಾಗೇ ಟಿಕೆಟ್ ನಿರಾಕರಿಸಿದ್ರೂ ಭವಾನಿ ರೇವಣ್ಣ ಮಾತ್ರ ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಖುದ್ದು ಹೆಚ್ಡಿಕೆಯೇ ಘೋಷಣೆ ಮಾಡಿದ್ರು. ಈ ಮೂಲಕ ನಿಖಿಲ್ ಮತ್ತು ಹೆಚ್ಡಿಕೆ ಸ್ಪರ್ಧೆ ಫೈನಲ್ ಆಗಿದೆ. ಆದ್ರೆ ಈಗ ಅನಿತಾ ಕುಮಾರಸ್ವಾಮಿಗೆ ಜೆಡಿಎಸ್ನಿಂದ ಟಿಕೆಟ್ ಕೊಡ್ತಾರಾ ಅನ್ನೋ ಕುತೂಹಲ ಮೂಡಿದೆ. ಹಾಗೇನಾದ್ರೂ ಅನಿತಾ ಕುಮಾರಸ್ವಾಮಿಗೆ ಈ ಬಾರಿಯೂ ಟಿಕೆಟ್ ನೀಡಿದ್ರೆ ನನಗೂ ಕೊಡಬೇಕೆಂದು ಭವಾನಿ ರೇವಣ್ಣ ಕೇಳಿದ್ದಾರಂತೆ.
ಭವಾನಿ ರೇವಣ್ಣ ಹಾಸನ ಟಿಕೆಟ್ ನಿರೀಕ್ಷೆಯಲ್ಲಿದ್ದ ಟೈಮಲ್ಲೇ ನಿಖಿಲ್ ಕುಮಾರಸ್ವಾಮಿಯನ್ನ ಹೆಚ್.ಡಿ ಕುಮಾರಸ್ವಾಮಿ ರಾಮನಗರ ಅಭ್ಯರ್ಥಿಯಾಗಿ ಘೋಷಿಸಿದ್ರು. ಹೀಗಾಗಿ ಹಾಸನದ ಮೇಲೆ ಭವಾನಿ ರೇವಣ್ಣ ಕಣ್ಣಿಟ್ಟಿದ್ದಾರೆ. ಅನಿತಾಗೆ ಟಿಕೆಟ್ ಕೊಟ್ಟಿದ್ದೇ ಆದ್ರೆ ನನಗೂ ಕೊಡಿ ಎಂದು ಕೇಳಿದ್ದಾರೆ. ಜೊತೆ ಜೊತೆಗೆ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಈ ಮೂಲಕ ಹಾಸನ ವಿಧಾನಸಭಾ ಕ್ಷೇತದ ಟಿಕೆಟ್ ಮ್ಯಾಟರ್ ದೊಡ್ಡಗೌಡ್ರ ಮನೆಯಲ್ಲಿ ಮತ್ತೊಂದು ಹಂತಕ್ಕೆ ತಲುಪಿದೆ. ಟಿಕೆಟ್ ವಿಚಾರ ದೇವೇಗೌಡ್ರ ಮನೆಯಲ್ಲಿ ಕಗ್ಗಂಟಾಗಿದೆ.