ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ – ಪ್ರಧಾನಿ ಮೋದಿ ಘೋಷಣೆ

ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ – ಪ್ರಧಾನಿ ಮೋದಿ ಘೋಷಣೆ

ಭಾರತದ ಪರಮೋಚ್ಚ ನಾಗರಿಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್‌ ಅವರಿಗೆ ಕೇಂದ್ರ ಸರ್ಕಾರ ಘೋಷಿಸಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಾಜಿ ಪ್ರಧಾನ ಮಂತ್ರಿಗಳಾದ ಪಿ ವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ದೇಶದ ಹಸಿರು ಕ್ರಾಂತಿಯ ಹರಿಕಾರ ಡಾ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಗೌರವ ನೀಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಸುಮಲತಾ ನಡೆಯೇನು? – ದೆಹಲಿಗೆ ಹಾರಿದ್ಯಾಕೆ ಸಂಸದೆ?

ನರಸಿಂಹ ರಾವ್ ಅವರು ಭಾರತವನ್ನು ನಿರ್ಣಾಯಕ ಪರಿವರ್ತನೆಗಳ ಮೂಲಕ ಮುನ್ನಡೆಸಿ ದೇಶದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು, ಚರಣ್ ಸಿಂಗ್ ಅವರು ದೇಶಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ನರಸಿಂಹ ರಾವ್ ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ಅದರ ಸಮೃದ್ಧಿ, ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಸೌಭಾಗ್ಯ. ದೇಶಕ್ಕೆ ಅವರು ನೀಡಿದ ಅನುಪಮ ಕೊಡುಗೆಗೆ ಈ ಗೌರವ ಸಮರ್ಪಿಸಲಾಗಿದೆ. ಅವರು ತಮ್ಮ ಇಡೀ ಜೀವನವನ್ನು ರೈತರ ಹಕ್ಕುಗಳು ಮತ್ತು ಅವರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ದೇಶದ ಗೃಹ ಮಂತ್ರಿಯಾಗಿ ಅವರು ಯಾವಾಗಲೂ ರಾಷ್ಟ್ರ ನಿರ್ಮಾಣಕ್ಕೆ ಉತ್ತೇಜನ ನೀಡಿದರು. ತುರ್ತು ಪರಿಸ್ಥಿತಿಯ ವಿರುದ್ಧವೂ ಅವರು ದೃಢವಾಗಿ ನಿಂತಿದ್ದರು. ನಮ್ಮ ರೈತ ಸಹೋದರ ಸಹೋದರಿಯರಿಗೆ ಅವರ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

ಭಾರತ ಸರ್ಕಾರವು ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣದಲ್ಲಿ ನಮ್ಮ ದೇಶಕ್ಕೆ ನೀಡಿದ ಸ್ಮಾರಕ ಕೊಡುಗೆಗಳನ್ನು ಗುರುತಿಸಿ ಭಾರತ ರತ್ನ ನೀಡುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ಸವಾಲಿನ ಸಮಯದಲ್ಲಿ ಭಾರತವು ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದರು. ಭಾರತೀಯ ಕೃಷಿಯನ್ನು ಆಧುನೀಕರಿಸುವಲ್ಲಿ ಮಹೋನ್ನತ ಪ್ರಯತ್ನಗಳನ್ನು ಮಾಡಿದರು. ನಾವೀನ್ಯತೆ ಮತ್ತು ಮಾರ್ಗದರ್ಶಕರಾಗಿ ಅವರ ಅಮೂಲ್ಯವಾದ ಕೆಲಸವನ್ನು ನಾವು ಗುರುತಿಸುತ್ತೇವೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುತ್ತೇವೆ. ಡಾ. ಸ್ವಾಮಿನಾಥನ್ ಅವರ ದಾರ್ಶನಿಕ ನಾಯಕತ್ವವು ಭಾರತೀಯ ಕೃಷಿಯನ್ನು ಪರಿವರ್ತಿಸಿದ್ದು ಮಾತ್ರವಲ್ಲದೆ ರಾಷ್ಟ್ರದ ಆಹಾರ ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸಿದೆ ಎಂದು ಹೊಗಳಿದ್ದಾರೆ.

ಔಧರಿ ಚರಣ್ ಸಿಂಗ್ 979 ಜುಲೈ 28 ರಿಂದ 1980ರ ಜನವರಿ 14ರವರೆಗೆ ಪ್ರಧಾನಿಯಾಗಿದ್ದರೆ ಪಿವಿ ನರಸಿಂಹ ರಾವ್ 1991ರ ಜೂನ್‌ 21 ರಿಂದ 1996 ಮೇ 16ರವರೆಗೆ ಪ್ರಧಾನಿಯಾಗಿದ್ದರು.

Shwetha M