ಲೋಕಸಭೆ ಚುನಾವಣೆಗೆ ಮುನ್ನವೇ ರಾಹುಲ್ ಗಾಂಧಿಯಿಂದ ಮತ್ತೊಂದು ಯಾತ್ರೆ! – ʼಭಾರತ್ ಜೋಡೊ-2.0ʼಗೆ ಕಾಂಗ್ರೆಸ್ ಚಿಂತನೆ?
ಮುಂಬರುವ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳುತ್ತಿದೆ. ಇದೀಗ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ 2ನೇ ಹಂತದ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಿಂದ ಜನವರಿ 2023ರವರೆಗೂ ನಡೆಯಿತು. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಸರಿಸುಮಾರು 4,080 ಕಿಮೀ ಗಳಷ್ಟು ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯನ್ನ ಮುಕ್ತಾಯಗೊಳಿಸಲಾಗಿತ್ತು. ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳಲ್ಲಿ ಸಾಗಿತು, ಇದು ಭಾರತದ ಸುದೀರ್ಘ ಪಾದಯಾತ್ರೆಯಾಗಿದೆ. ಇದೀಗ ಕಾಂಗ್ರೆಸ್ ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಚಿಂತನೆ ನಡೆಸಿದೆ. 2ನೇ ಹಂತದ ಭಾರತ್ ಜೋಡೊ ಯಾತ್ರೆ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಲಾಗತ್ತಿದೆ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಹೂವಿಲ್ಲದ ಬೊಕ್ಕೆ ಕೊಟ್ಟ ಕಾಂಗ್ರೆಸ್ ನಾಯಕ! – “ಪುಷ್ಪಗುಚ್ಛ ಹಗರಣ”ಎಂದು ಬಿಜೆಪಿ ನಾಯಕರಿಂದ ಗೇಲಿ!
2ನೇ ಹಂತದ ಭಾರತ್ ಜೋಡೊ ಯಾತ್ರೆ ಡಿಸೆಂಬರ್ ತಿಂಗಳಿಂದ ಫೆಬ್ರವರಿ ನಡುವೆ ಯಾವುದೇ ಸಮಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಕಾರ್ಯಕ್ರದಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಮೆರವಣಿಗೆ ಅಥವಾ ವಾಹನಗಳನ್ನು ಬಳಸಬಹುದಾಗಿದೆ. ಆದ್ರೆ ರಾಹುಲ್ ಗಾಂಧಿ ಈ ಮೊದಲಿನಂತೆ ಕಾಲ್ನಡಿಗೆಯಲ್ಲೇ ಯಾತ್ರೆ ಮಾಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪಕ್ಷವು 2ನೇ ಹಂತದ ಭಾರತ್ ಜೋಡೋ ಯಾತ್ರೆ ಯೋಜಿಸುತ್ತಿದೆ. ಯೋಜನೆಯು ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ರಾಹುಲ್ ಗಾಂಧಿ ಅವರನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವಂತೆ ಒತ್ತಾಯಿಸಿದ್ದರು.