ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ದಿನಕ್ಕೊಂದು ಕಂಟಕ! – ಪಶ್ಚಿಮ ಬಂಗಾಳದಲ್ಲಿ ರಾಹುಲ್ ಗಾಂಧಿ ಸಭೆಗೆ ಅನುಮತಿ ಇಲ್ಲ!
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಾರಂಭವಾಗಿದೆ. ಈ ಯಾತ್ರೆ ಅಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ತಲುಪಿದೆ. ಆದ್ರೆ ಈಗ ಈ ಯಾತ್ರೆಗೆ ದಿನಕ್ಕೊಂದು ಕಂಟಕ ಎದುರಾಗುತ್ತಿದೆ. ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿಲ್ಲ. ಇದೀಗ ಪಶ್ಚಿಮ ಬಂಗಾಳದಲ್ಲೂ ಈ ಯಾತ್ರೆಗೆ ಸಮಸ್ಯೆ ಎದುರಾಗಿದೆ. ಯಾತ್ರೆಯ ಎರಡನೇ ದಿನ ನಡೆಸಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕಾಗಿದೆ.
ಇದನ್ನೂ ಓದಿ: ಸುಮಲತಾ ಮುಂದೆ ಟಿಕೆಟ್ ಸವಾಲು – ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಮಾಡ್ತಾರಾ..?
ಹೌದು, ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಪಶ್ಚಿಮ ಬಂಗಾಳದಲ್ಲೂ ಸಮಸ್ಯೆ ಎದುರಾಗಿದೆ. ಯಾತ್ರೆಯ ಎರಡನೇ ದಿನ ನಡೆಯಬೇಕಾಗಿದ್ದ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ಸಭೆಗೆ ಅಲ್ಲಿನ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಲಿಗುರಿಯಲ್ಲಿ ರಾಹುಲ್ ಗಾಂಧಿ ಅವರು ಎರಡು ಸಭೆಗಳನ್ನು ನಡೆಸಬೇಕಿತ್ತು. ಆದರೆ ಪಶ್ಚಿಮ ಬಂಗಾಳ ಪೊಲೀಸರು, ಪೊಲೀಸ್ ಪರೀಕ್ಷೆ ನಡೆಯುತ್ತಿದೆ, ಆ ಕಾರಣಕ್ಕೆ ಸಭೆಗೆ ಅವಕಾಶವಿಲ್ಲ ಎಂದಿದ್ದಾರೆ. ಈ ಕಾರಣದಿಂದ ಸಭೆ ರದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಹೇಳಿದ್ದಾರೆ.
ಸಭೆ ರದ್ದಾಗಿದ್ದರು, ಯಾತ್ರೆ ಮಾತ್ರ ಈಗಾಗಲೇ ನಿಗದಿ ಮಾಡಿರುವ ಮಾರ್ಗದಲ್ಲಿಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಅಸ್ಸಾಂನಲ್ಲಿ ಸಮಸ್ಯೆಗಳು ಎದುರಾಗಿತ್ತು. ಅಲ್ಲಿ ಕಾನೂನು ಸುವ್ಯವಸ್ಥೆಯ ಕಾರಣ ಎಂದು ಹೇಳಿ ರಾಹುಲ್ ಗಾಂಧಿ ಅವರನ್ನು ಯಾತ್ರೆಯಲ್ಲಿ ಭಾಗವಹಿಸಲು ತಡೆ ನೀಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಇತ್ತೀಚೆಗಷ್ಟೇ ಇಂಡಿಯಾ ಒಕ್ಕೂಟದಿಂದ ಅಂತ ಕಾಯ್ದುಕೊಳ್ಳುತ್ತಿರುವ ಮಮತಾ ಬ್ಯಾನರ್ಜಿ ಕೂಡ ಈ ಯಾತ್ರೆಯಲ್ಲಿ ಭಾಗವಹಿಸಿಲ್ಲ, ಹಾಗೂ ಯಾತ್ರೆಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂಬುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಜ.27ರಿಂದ ನ್ಯಾಯ ಯಾತ್ರೆ ದೆಹಲಿಯಿಂದ ಆರಂಭವಾಗಲಿದೆ. ಈ ಯಾತ್ರೆಯಲ್ಲೂ ರಾಹುಲ್ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ಮಿರ್ ಹೇಳಿದ್ದಾರೆ. ಜ.28ರಂದು ಫಲಕಟ್ಟಾದಿಂದ ಮೆರವಣಿಗೆ ಹೊರಟು ನಿಗದಿತ ಮಾರ್ಗದಲ್ಲಿ ಸಾಗಲಿದೆ. ಅಲ್ಲಿಂದ ಜಲ್ಪೈಗುರಿಯಿಂದ ಸಿಲಿಗುರಿಗೆ ಬರಲಿದೆ. ಅಲ್ಲಿಂದ ಜ. 29ರಂದು ಬಿಹಾರದಿಂದ ಇಸ್ಲಾಂಪುರ ಮಾರ್ಗವಾಗಿ, ಜನವರಿ 31ರಂದು ಮತ್ತೆ ಬಂಗಾಳಕ್ಕೆ ಬರಲಿದೆ. ಮಾಲ್ದಾ ಮತ್ತು ಮುರ್ಷಿದಾಬಾದ್‌ನಲ್ಲಿ ಎರಡು ದಿನಗಳ ಕಾಲ ಮೆರವಣಿಗೆ ಮುಂದುವರಿಯಲಿದೆ. ನಂತರ ರಾಹುಲ್ ಗಾಂಧಿ ಜಾರ್ಖಂಡ್ ಹೋಗಲಿದ್ದಾರೆ ಎಂದು ಹೇಳಿದೆ.