ಭಾಗ್ಯಲಕ್ಷ್ಮೀ ಬಿಟ್ಟು ಹೊರನಡೆದ ಸುನಂದಾ – ಸುನೀತಾ ಶೆಟ್ಟಿ ನೋವಿನ ಮಾತು
ಖಡಕ್ ಮಾತು, ಗಟ್ಟಿ ಧ್ವನಿ ಮಿಸ್ಸಿಂಗ್

ಭಾಗ್ಯಲಕ್ಷ್ಮೀ ಬಿಟ್ಟು ಹೊರನಡೆದ ಸುನಂದಾ – ಸುನೀತಾ ಶೆಟ್ಟಿ ನೋವಿನ ಮಾತುಖಡಕ್ ಮಾತು, ಗಟ್ಟಿ ಧ್ವನಿ ಮಿಸ್ಸಿಂಗ್

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯಲಕ್ಷ್ಮೀ ಸೀರಿಯಲ್‌ ವೀಕ್ಷಕರ ಮನಗೆದ್ದಿದೆ. ಟಿಆರ್‌ಪಿ ರೇಸ್‌ನಲ್ಲೂ ಮುಂದಿದೆ. ತಾಂಡವ್‌ ಹಾಗೂ ಭಾಗ್ಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಅವರಿಬ್ಬರನ್ನ ಒಂದು ಮಾಡಲು ಮನೆಯವರೆಲ್ಲರೂ ಶತಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಭಾಗ್ಯಲ ಕ್ಷ್ಮೀ ಸೀರಿಯಲ್‌ ವೀಕ್ಷಕರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ತಾಯಿ ಸುನಂದಾ ಪಾತ್ರ ಮಾಡ್ತಾ ಇದ್ದ ನಟಿ ಸುನಿತಾ ಶೆಟ್ಟಿ ಸೀರಿಯಲ್‌ ನಿಂದ ಹೊರಬಂದಿದ್ದಾರೆ.

ಇದನ್ನೂ ಓದಿ: 1 ಪಂದ್ಯ ಗೆದ್ರೆ ಭಾರತಕ್ಕೆ ಜಿಂಬಾಬ್ವೆ ಸರಣಿ ಕೈ ವಶ – ಸವಾಲುಗಳೆಷ್ಟು?

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ ಕತೆ ರೋಚಕತೆ ಪಡೆದುಕೊಂಡಿದೆ. ತಾಂಡವ್ – ಶ್ರೇಷ್ಠ ಪ್ರೀತಿ ವಿಷಯ ಯಾವಾಗ ಅವನ ಮನೆಯವರಿಗೆ ಗೊತ್ತಾಗತ್ತೋ ಏನೋ ಅಂತ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಎಲ್ಲ ವಿಷಯ ಗೊತ್ತಿರುವ ಹಿತಾ ಕೂಡ ಭಾಗ್ಯಗೆ ಏನೂ ಹೇಳದೆ ಸುಮ್ಮನೆ ಇದ್ದಾಳೆ. ಅತ್ತ ಭಾಗ್ಯ ಮನೆಯಲ್ಲಿ ತಾಂಡವ್‌ ದಿನಕ್ಕೊಂಡು ಡ್ರಾಮ ಮಾಡಿ ಮನೆಯವರ ನೆಮ್ಮದಿ ಹಾಳು ಮಾಡ್ತಾ ಇದ್ದಾನೆ. ಇದೀಗ ಭಾಗ್ಯ ತಾಯಿ ಸುನಂದಾಳನ್ನು ಮನೆಯಿಂದ ಓಡಿಸಬೇಕು ಅಂತಾ ತಾಂಡವ್‌ ಮನಬಂದಂತೆ ಮಾತನಾಡಿದ್ದಾನೆ. ಅವನ ಮಾತಿನಿಂದ ನೊಂದಿರುವ ಸುನಂದ ತನ್ನ ಮನೆಗೆ ಹೋಗಿದ್ದಾಳೆ. ಆದ್ರೆ, ಇಲ್ಲೇ ಇರೋದು ಟ್ವಿಸ್ಟ್. ಸ್ನೇಹಿತರೇ, ಇಲ್ಲಿ ಭಾಗ್ಯ ತಾಯಿಯನ್ನ ಮನೆಯಿಂದ ತಾಂಡವ್ ಓಡ್ಸಿಲ್ಲ. ಭಾಗ್ಯ ತಾಯಿಯೇ ಮನೆಬಿಟ್ಟು ಹೋಗಿದ್ದಾರೆ. ಅಂದರೆ, ಸುನಂದಾ ಪಾತ್ರ ಮಾಡ್ತಿದ್ದ ಸುನೀತಾ ಶೆಟ್ಟಿಯೇ ಸೀರಿಯಲ್ ನಿಂದ ಹೊರ ನಡೆದಿದ್ದಾರೆ.

ಈ ಧಾರಾವಾಹಿಯಲ್ಲಿ ಭಾಗ್ಯ ತಾಯಿ ಸುನಂದಾ ಪಾತ್ರಕ್ಕೆ ನಟಿ ಸುನೀತಾ ಶೆಟ್ಟಿ ಜೀವ ತುಂಬಿದ್ದರು. ಸದಾ ಖಡಕ್ಕಾಗಿ ಮಾತನಾಡುವ ಸುನಂದಾ ಅಂದ್ರೆ ವೀಕ್ಷಕರಿಗಂತೂ ತುಂಬಾ ಇಷ್ಟ. ಸುನಂದಾ ಡೈಲಾಗ್ ಗೆ ಅದೆಷ್ಟೋ ವೀಕ್ಷಕರು ಕಾಯ್ತಿದ್ರು. ಬಹಳಷ್ಟು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸುನೀತಾ ಶೆಟ್ಟಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದರು. ಈ ಪಾತ್ರ ವೀಕ್ಷಕರ ಮನಗೆದ್ದಿತ್ತು. ಆದ್ರೀಗ ನಟಿ ಸುನೀತಾ ಶೆಟ್ಟಿ ದಿಢೀರ್ ಅಂತ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ನಟಿ ಸುನೀತಾ ಶೆಟ್ಟಿ ವಿದೇಶಕ್ಕೆ ಹೋಗುತ್ತಿರುವುದು. ಹೌದು. ಸುನಿತಾ ಶೆಟ್ಟಿ ಅಮೆರಿಕ ತೆರಳಲಿದ್ದಾರೆ. ಸುಮಾರು ಮೂರು ತಿಂಗಳ ಕಾಲ ಅಲ್ಲೇ ಇರಲಿದ್ದಾರಂತೆ. ಸುನೀತಾ ಶೆಟ್ಟಿ ಅವರ ಮಗಳು ಅಮೆರಿಕದಲ್ಲೇ ನೆಲೆಸಿದ್ದು, ಮಗಳ ಮನೆಯಲ್ಲಿ ಮೂರು ತಿಂಗಳ ಕಾಲ ಇದ್ದು ಬರುವ ಪ್ಲಾನ್ ಹಾಕಿಕೊಂಡಿದ್ದಾರೆ. ಹೀಗಾಗಿ ಸುನೀತಾ ಶೆಟ್ಟಿ ಸೀರಿಯಲ್‌ನಿಂದ ಹೊರ ಬರುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸೀರಿಯಲ್ ನಲ್ಲಿ ಭಾಗ್ಯ ಪಾತ್ರಕ್ಕೆ ಎಷ್ಟು ತೂಕವಿತ್ತೋ ಅಷ್ಟೇ ತೂಕ ಸುನಂದಾ ಪಾತ್ರಕ್ಕೂ ಇತ್ತು. ಸುನಂದಾ ಬಾಯಲ್ಲಿ ಬೀಗ್ತಿಯಮ್ಮ ಅನ್ನೋ ಪದ ಕೇಳೋದೇ ಚೆಂದ. ಜೊತೆಗೆ ನಾನೇ ಬೇರೆ ನನ್ ಮಾತೇ ಬೇರೆ ಅಂತಿದ್ದ ಕುಸುಮಾಗೆ ಟಾಂಗ್ ಕೊಡುವಲ್ಲೂ ಸುನಂದಾ ಎಕ್ಸಫರ್ಟ್. ಇವರಿಬ್ಬರೂ ಜೊತೆಯಲ್ಲಿದ್ರು ಅಂದ್ರೆ ಭಾಗ್ಯಲಕ್ಷ್ಮೀ ಸೀರಿಯಲ್ ನೋಡೋದೇ ಒಂಥರಾ ಮಜಾ. ಜೊತೆಗೆ ಸುನೀತಾ ಶೆಟ್ಟಿ ಹಾಗೂ ಸುಷ್ಮಾ ಕಾಂಬಿನೇಶನ್‌ನನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದರು. ಆನ್‌ ಸ್ಟ್ರೀನ್‌ ಮಾತ್ರವಲ್ಲದೇ ಆಫ್ ಸ್ಕ್ರೀನ್‌ ನಲ್ಲೂ  ಸುಷ್ಮಾ ರಾವ್ ಹಾಗೂ ಸುನೀತಾ ಶೆಟ್ಟಿ ನಡುವೆ ಒಳ್ಳೆಯ ಬಂಧವಿತ್ತು. ಇದೀಗ ಸುನೀತಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದು ಸೀರಿಯಲ್ ತಂಡಕ್ಕೂ ಸಿಕ್ಕಾಪಟ್ಟೆ ಸೆಟ್ ಬ್ಯಾಕ್ ಆದಂಗೆ. ಯಾಕೆಂದ್ರೆ, ಖಡಕ್ ಮಾತಿನ ಸುನಂದಾ ಮತ್ತು ಕಡ್ಡಿ ತುಂಡು ಮಾಡಿದಂಗೆ ಮಾತಾಡೋ ಕುಸುಮಾ ಇದ್ರೇನೇ ಸೀರಿಯಲ್ ಗೊಂದು ಕಳೆ. ಈ ಇಬ್ಬರು ಮಹಿಳಾ ಮಣಿಗಳ ನಡುವೆ ಸಿಲುಕಿ ತಾಂಡವ್ ಒದ್ದಾಡೋದು ನೋಡೋದೇ ಒಂಥರಾ ಖುಷಿ. ಇಲ್ಲಿ ಸೀರಿಯಲ್ ನಾಯಕ ಮತ್ತು ನಾಯಕಿಗಿಂತ ಕುಸುಮಾ ಮತ್ತು ಸುನಂದಾ ಕಾಂಬಿನೇಷನ್ ನೋಡೋದೇ ಚೆಂದಾ. ಆದ್ರೀಗ ಸುನೀತಾ ಶೆಟ್ಟಿ ಮಗಳ ಮನೆಗೆ ಹೋಗಲು ದೂರದ ಅಮೇರಿಕಾಕ್ಕೆ ಹೊರಟು ನಿಂತಿದ್ದಾರೆ. ಫರ್ಸನಲ್ ಅಂತಾ ಬಂದಾಗ ತಾಯಿಗೆ ಮಗಳೇ ಮುಖ್ಯ ಅನ್ನೋದು ಸತ್ಯ ಬಿಡಿ. ಹೀಗಾಗಿ ಸುನೀತಾ ಶೆಟ್ಟಿಯನ್ನ ತಡೆಯೋಕ್ಕಂತೂ ಆಗಲ್ಲ. ಆದ್ರೆ, ಸುನಂದಾ ಮಾತು ಕೇಳದೇ ಭಾಗ್ಯಲಕ್ಷ್ನೀ ಸೀರಿಯಲ್ ಕೂಡಾ ಒಂದ್ ರೀತಿ ತೂಕ ಕಳ್ಕೊಂಡಂತೆ. ಅದೇನೇ ಇರಲಿ, ಸುನೀತಾ ಶೆಟ್ಟಿ ಕೂಡಾ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನ ತುಂಬಾ ಮಿಸ್ ಮಾಡಿಕೊಳ್ತಾರಂತೆ. ಹೀಗೆ ಹೇಳ್ತಾನೇ ಭಾವುಕಾರಿದ್ದಾರೆ ಸುನಂದಾ. ಇನ್ನು ಸೀರಿಯಲ್ ಸೆಟ್‌ನಲ್ಲಿ ಕೊನೆಯ ದಿನದ ಶೂಟ್ ನಂತರ ತಂಡದವರು ಕೇಕ್ ಕತ್ತರಿಸಿ ಸೀನಿಯರ್ ನಟಿಯನ್ನ ಬೀಳ್ಕೊಟ್ಟಿದ್ದಾರೆ. ಈ ವೇಳೆ ನಟಿ ಸುನೀತಾ ಶೆಟ್ಟಿ ಭಾವುಕರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇರುವ ನಟಿ ಸುನೀತಾ ಶೆಟ್ಟಿ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಿಂದ ಹೊರ ಬರುತ್ತಿರುವುದರ ಬಗ್ಗೆ ಬರೆದುಕೊಂಡಿದ್ದು “ಭಾಗ್ಯಲಕ್ಷ್ಮಿ ಧಾರಾವಾಹಿ ಯಾವತ್ತಿಗೂ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಸಿಹಿಯಾದ ಜೇನು. ತಂಡದ ಎಲ್ಲಾ ಸ್ನೇಹಿತರಿಗೂ ಪ್ರೀತಿಯ ಅಪ್ಪುಗೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಸೀರಿಯಲ್‌ ಗೆ ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚು. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ, ಭಾಷೆ ಯಾವುದೇ ಇರಲಿ ಮಹಿಳೆಯರಿಗೇ ಪ್ರಾಧಾನ್ಯತೆ ಹೆಚ್ಚು. ಇಲ್ಲಿಯವರೆಗೆ ಅಳುಮುಂಜಿಯಂತಿದ್ದ ಭಾಗ್ಯಳ ಬಾಯಲ್ಲಿ ಖಡಕ್‌ ಡೈಲಾಗ್​ಗಳನ್ನು ಹೇಳಿಸುತ್ತಿರುವ ನಿರ್ದೇಶಕರಿಗೆ ಭಾಗ್ಯ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಖಡಕ್‌ ಮಹಿಳೆಯ ಪಾತ್ರ ಮಾಡ್ತಾ ಇದ್ದ ಸುನಂದಾ ಪಾತ್ರ ಕೂಡ ವೀಕ್ಷಕರಿಗೆ ಅಚ್ಚುಮೆಚ್ಚಾಗಿತ್ತು. ಇದೀಗ ಸುನಿತಾ ಶೆಟ್ಟಿ ಸೀರಿಯಲ್‌ನಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇನ್ನು  ಪ್ರೇಕ್ಷಕರಲ್ಲಿ ಮತ್ತೊಂದು ವಿಚಾರದ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಸೀರಿಯಲ್‌ ನಲ್ಲಿ ಮುಂದೆ ಸುನಂದ ಪಾತ್ರ ಕಾಣಿಸಿಕೊಳ್ಳುವುದಿಲ್ಲವೋ ಅಥವಾ ಸುನಂದಾ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುತ್ತಾರೋ ಎಂಬ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿದೆ. ಮೂರು ತಿಂಗಳ ಅಮೆರಿಕ ಪ್ರವಾಸದ ನಂತರ ಮತ್ತೆ ನಟಿ ಸುನೀತಾ ಶೆಟ್ಟಿ ಅವರೇ ಸುನಂದಾ ಪಾತ್ರಕ್ಕೆ ಮರಳಿ ಬರುತ್ತಾರಾ ಎಂಬ ಪ್ರಶ್ನೆಯು ಕೆಲವರಲ್ಲಿ ಮೂಡಿದೆ. ಆದರೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಧಾರಾವಾಹಿ ತಂಡದಿಂದಲೇ ಬರಬೇಕಿದೆ.

Shwetha M

Leave a Reply

Your email address will not be published. Required fields are marked *