15 ಕ್ಕಿಂತ ಹೆಚ್ಚು ದಿನ ಫುಟ್ಪಾತ್, ರಸ್ತೆಗಳಲ್ಲಿ ಪಾರ್ಕ್ ಮಾಡಿದ್ರೆ ವಾಹನ ಹರಾಜು ಆಗುತ್ತೆ ಹುಷಾರ್!
ವಾಹನ ಸವಾರರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನುಮುಂದೆ ವಾಹನಗನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್ಪಾತ್ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ನಿಲ್ಲಿದ್ರೆ ಭಾರಿ ದಂಡ ಬೀಳಲಿದೆ. ಅಷ್ಟೇ ಅಲ್ಲದೇ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ವಾಹನಗಳನ್ನು ತಮ್ಮದೆಂದು ಸಾಬೀತುಪಡಿಸಲು ಮಾಲೀಕರು ವಿಫಲವಾದರೆ ಇ-ಹರಾಜು ಪ್ರಕ್ರಿಯೆಗಳ ಮೂಲಕ ಅವುಗಳನ್ನು ಸ್ಕ್ರ್ಯಾಪ್ಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವನ್ಯಜೀವಿಗಳ ಅಂಗಾಂಗ ಸರ್ಕಾರಕ್ಕೆ ಹಿಂದಿರುಗಿಸಲು ಏಪ್ರಿಲ್ 10 ಕೊನೆ ದಿನ!
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ನಲ್ಲಿ ಬೆಂಗಳೂರು ನಗರದ ಫುಟ್ಪಾತ್ಗಳು, ಸಾರ್ವಜನಿಕ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು ತಂಡಗಳನ್ನು ರಚಿಸಲಾಗುವುದು. ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್ಪಾತ್ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ವಾರಸುದಾರರು ತ್ಯಜಿಸಿದ ವಾಹನ ಎಂದು ಪರಿಗಣಿಸಲಾಗುತ್ತದೆ ಮತ್ತು ನೋಂದಾಯಿತ ಮಾಲೀಕರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ವಾರಸುದಾರರಿಲ್ಲದ ವಾಹನಗಳಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ಮಾಹಿತಿ ನೀಡುವ ಸಂದರ್ಭ ಇದನ್ನು ಉಲ್ಲೇಖಿಸಿದ್ದಾರೆ.
ಈ ಮಧ್ಯೆ, ಬೆಂಗಳೂರು ನಗರದ ರಸ್ತೆಗಳು ಮತ್ತು ಫುಟ್ಪಾತ್ಗಳಲ್ಲಿರುವ ವಾರಸುದಾರರಿಲ್ಲದ ಮತ್ತು ಕೈಬಿಟ್ಟ ವಾಹನಗಳನ್ನು ತೆರವುಗೊಳಿಸಲು ಕಾಲಮಿತಿ ನಿಗದಿಪಡಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ ಅವರು ಸಲ್ಲಿಸಿದ ಅಫಿಡವಿಟ್ಗಳನ್ನು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ರಸ್ತೆ ಮತ್ತು ಫುಟ್ಪಾತ್ಗಳಲ್ಲಿ ವಾಹನಗಳನ್ನು ನಿಲ್ಲಿಸುವ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಂಬಂಧಿಸಿ ಬಿಬಿಎಂಪಿ ಮತ್ತು ಪೊಲೀಸರು ಕೈಗೊಂಡ ಪ್ರಯತ್ನಗಳ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಾರಸುದಾರರಿಲ್ಲದ ವಾಹನಗಳನ್ನು ತೆಗೆದುಕೊಂಡು ಹೋಗಿ ಗೊತ್ತುಪಡಿಸಿದ ಮೈದಾನದಲ್ಲಿ ಸಂಗ್ರಹಿಸಲಾಗುತ್ತಿದೆ. ಆರ್ಟಿಒ ಮತ್ತು ಪೊಲೀಸ್ ಮೂಲಗಳ ಮೂಲಕ ಅವುಗಳ ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ತರುವಾಯ, ಕಾನೂನಿನ ಪ್ರಕಾರ ಅಂತಹ ವಾಹನಗಳನ್ನು ಹರಾಜು ಮಾಡಲು ಅಥವಾ ಸ್ಕ್ರ್ಯಾಪ್ ಮಾಡಲು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ಗಳಿಂದ ಅನುಮತಿಯನ್ನು ಪಡೆಯಲಾಗುತ್ತದೆ.