ನಮ್ಮ ಮೆಟ್ರೋಗಾಗಿ ಮರಗಳ ಮಾರಣ ಹೋಮ! – ಎರಡು ವರ್ಷಗಳಲ್ಲಿ 3,626 ಮರಗಳಿಗೆ ಕೊಡಲಿ ಏಟು
ಬೆಂಗಳೂರು: ಮೆಟ್ರೋ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ಇದರಿಂದ, ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಜತೆಗೆ, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಲಾಗಿದೆ. ಆದರೆ 2021 ರಿಂದ 2023ರ ನಡುವೆ ನಮ್ಮ ಮೆಟ್ರೋ ಯೋಜನೆಗಳಿಗಾಗಿ ಮರಗಳನ್ನು ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಬಗ್ಗೆ ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳ ಪ್ರಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಂತ-2, ಹಂತ-2ಎ ಮತ್ತು ಹಂತ-2ಬಿ ಯೋಜನೆಗಳಿಗಾಗಿ 3,626 ಮರಗಳನ್ನು ಕಡಿಯಲಾಗಿದೆ ಎಂಬ ಸ್ಪೋಟಕ ವಿಚಾರ ಬಹಿರಂಗಗೊಂಡಿದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ! – ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
2021 ರಿಂದ 2022 ರವರೆಗೆ, 72 ಮರಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು 856 ಮರಗಳನ್ನು ನಗರದ ವಿವಿಧ ಭಾಗಗಳಿಗೆ ಮತ್ತು ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. BMRCL ನ ಹಂತ-2 ಮತ್ತು ಹಂತ 2A ಯೋಜನೆಗಳಿಗಾಗಿ 2,461 ಮರಗಳನ್ನು ಕಡಿಯಲಾಗಿದೆ. ಅದೇ ರೀತಿ, 2022 ರಿಂದ ಜನವರಿ 2023 ರವರೆಗೆ ಹಂತ 2A ಮತ್ತು 2B ಗಾಗಿ 36 ಮರಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು 107 ಮರಗಳನ್ನು ಸ್ಥಳಾಂತರಿಸಲಾಗಿದೆ. ಇದೇ ವೇಳೆ 1,165 ಮರಗಳನ್ನು ಕಡಿಯಲಾಗಿದೆ ಎಂದು ಬಿಬಿಎಂಪಿಯ ಅರಣ್ಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಿಎಂಆರ್‌ಸಿಎಲ್‌ನ ಸಾಮಾಜಿಕ ಮತ್ತು ಪರಿಸರ ಘಟಕದ ಪ್ರಧಾನ ವ್ಯವಸ್ಥಾಪಕಿ ದಿವ್ಯಾ ಹೊಸೂರ್ ಮಾತನಾಡಿದ್ದು, ಇದುವರೆಗೆ 1,193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ನಾವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನೀಡಿದ ಸ್ಥಳಾಂತರ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ಸ್ಥಳಾಂತರದಲ್ಲಿ ತರಬೇತಿ ಪಡೆದ ಜನರಿಗೆ ಕಾರ್ಯವನ್ನು ನೀಡಲಾಗುತ್ತದೆ ಮತ್ತು ಮರಗಳನ್ನು 5 ಕಿಮೀ ವ್ಯಾಪ್ತಿಯೊಳಗೆ ಮಾತ್ರ ಸ್ಥಳಾಂತರಿಸಲಾಗುತ್ತದೆ. ನಾವು ಬಾಗಮನೆ ಟೆಕ್ ಪಾರ್ಕ್, ಕಾಡುಗೋಡಿ ಮತ್ತು ಇತರ ಸ್ಥಳಗಳಿಗೆ ಮರಗಳನ್ನು ಸ್ಥಳಾಂತರಿಸಿದ್ದೇವೆ’ ಎಂದು ಹೇಳಿದ್ದಾರೆ.