ಮಾರ್ಚ್​​ನಲ್ಲಿ ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ಪೆನಾಲ್ಟಿ ಚಿಂತೆ ಬೇಡ! – ಯಾಕೆ ಗೊತ್ತಾ?

ಮಾರ್ಚ್​​ನಲ್ಲಿ ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ಪೆನಾಲ್ಟಿ ಚಿಂತೆ ಬೇಡ! – ಯಾಕೆ ಗೊತ್ತಾ?

ಮಾರ್ಚ್‌ ತಿಂಗಳಿನಲ್ಲಿ ಬರೋಬ್ಬರಿ 10 ದಿನಗಳ ಕಾಲ ಎಸ್ಕಾಂನ ಎಲ್ಲಾ ಆನ್​ಲೈನ್​ ಸೇವೆಗಳು ಬಂದ್ ಆಗಿತ್ತು. ತಂತ್ರಾಂಶ ಉನ್ನತೀಕರಣ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ವ್ಯಾಪ್ತಿಯ ಎಲ್ಲ‌ ಎಸ್ಕಾಂಗಳಲ್ಲಿ ಆನ್ ಲೈನ್ ಸೇವೆ ಅಲಭ್ಯವಾಗಿತ್ತು. ಹೀಗಾಗಿ ಅನೇಕ ಗ್ರಾಹಕರಿಗೆ ಬಿಲ್‌ ಪಾವತಿಗೆ ತೊಂದರೆ ಉಂಟಾಗಿತ್ತು. ಬಿಲ್‌ ಪಾವತಿ ವಿಳಂಬವಾದರೆ, ಫೈನ್‌ ಕಟ್ಟಬೇಕಾ ಅಂತಾ ಗ್ರಾಹಕರಿಗೆ ಗೊಂದಲ ಉಂಟಾಗಿತ್ತು. ಇದೀಗ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಗ್ರಾಹಕರ ಚಿಂತೆಯನ್ನು ದೂರ ಮಾಡಿದೆ. ಬಿಲ್ ಪಾವತಿ ವಿಳಂಬವಾದರೆ ಅದಕ್ಕೆ ವಿಳಂಬ ಶುಲ್ಕ ಪಾವತಿ ಮಾಡಬೇಕಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಪಾಂಡ್ಯಾಗೆ ಸೋಲಿನ ಸ್ವಾಗತ ಕೋರಿದ ಗಿಲ್ – ಗೆಲ್ಲುವ ಮ್ಯಾಚ್‌ ಸೋತಿದ್ದು ಹೇಗೆ ಮುಂಬೈ ಇಂಡಿಯನ್ಸ್?

ಮಾರ್ಚ್ 10 ಮತ್ತು 19 ರ ನಡುವೆ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದಾಗಿ ಅನೇಕ ಗ್ರಾಹಕರಿಗೆ ಪಾವತಿ ಸಾಧ್ಯವಾಗಿರಲಿಲ್ಲ. ಇದನ್ನು ಪರಿಗಣಿಸಿ ಮಾರ್ಚ್ ತಿಂಗಳ ತಡವಾದ ವಿದ್ಯುತ್ ಬಿಲ್ ಪಾವತಿ ಮೇಲೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬೆಸ್ಕಾಂ ಹೇಳಿದೆ. ಡಿಜಿಟಲ್ ಸೇವೆಗಳಲ್ಲಿನ ಅಡೆತಡೆಗಳ ನಿವಾರಣೆಗಾಗಿ ಆನ್‌ಲೈನ್ ಪಾವತಿ ವ್ಯವಸ್ಥೆಗೆ ತಾಂತ್ರಿಕ ನವೀಕರಣಗಳನ್ನು ಮಾಡಿದ ನಂತರ ಬೆಸ್ಕಾಂ ಈ ಕುರಿತು ಪ್ರಕಟಣೆ ಹೊರಡಿಸಿದೆ. ಈ ಸೌಲಭ್ಯ ಬೆಂಗಳೂರು ಮಾತ್ರವಲ್ಲದೆ, ಬೆಸ್ಕಾಂ ವ್ಯಾಪ್ತಿಯಡಿ ಬರುವ ಇತರ ಜಿಲ್ಲೆಗಳಲ್ಲೂ ಲಭ್ಯ ಇರಲಿದೆ.

ಮಾರ್ಚ್ 20 ರಂದು ಆನ್‌ಲೈನ್ ಪಾವತಿ ಸೇವೆಗಳು ಪುನರಾರಂಭಗೊಂಡಿದ್ದರೂ ಸಹ ಎಂಟು ದಿನಗಳ ಅಡಚಣೆಯಿಂದಾಗಿ ಬಿಲ್ ಪಾವತಿಗೆ ಭಾರೀ ರಷ್ ಕಂಡುಬಂದಿದೆ. ಆದ್ದರಿಂದ, ಕೆಲವು ಗ್ರಾಹಕರು ತೊಂದರೆಗಳನ್ನು ಎದುರಿಸಿದ್ದಾರೆ. ಗ್ರಾಹಕರು ತಮ್ಮ ಬಿಲ್‌ಗಳನ್ನು ಮಾರ್ಚ್ 30 ರವರೆಗೆ ಪಾವತಿಸಬಹುದು ಮತ್ತು ಯಾವುದೇ ದಂಡ ಅಥವಾ ತಡವಾದ ಪಾವತಿಗಾಗಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬೆಸ್ಕಾಂ ಹೇಳಿರುವುದಾಗಿ ವರದಿಯಾಗಿದೆ.

ಬೆಸ್ಕಾಂ ಅಡಿಯಲ್ಲಿ ಬರುವ ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ವಿಳಂಬ ಪಾವತಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.

Shwetha M