ಶಿವಮೊಗ್ಗದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಇಓ – ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಶಿಕ್ಷಣಾಧಿಕಾರಿ

ಶಿವಮೊಗ್ಗದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಇಓ – ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಶಿಕ್ಷಣಾಧಿಕಾರಿ

ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅದು ಕೂಡಾ ಶಿಕ್ಷಣಾಧಿಕಾರಿಯನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಭದ್ರಾವತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಈಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:ಮಲೆ ಮಹದೇಶ್ವರನಿಗೆ ತಟ್ಟಲ್ಲ ಗ್ರಹಣದ ಎಫೆಕ್ಟ್! – ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ!

ಭದ್ರಾವತಿ ತಾಲೂಕಿನ ಒಂದು ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು, ಇತರೆ ಭತ್ಯೆಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಬಿಇಒ ನಾಗೇಂದ್ರಪ್ಪ ಎ.ಕೆ. ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಕೆಲಸಕ್ಕಾಗಿ ಬಿಇಒ ಅವರು 4 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಶಿಕ್ಷಕರು ಬಿಇಒ ಕಚೇರಿಗೆ ತೆರಳಿದಾಗಲೆಲ್ಲಾ ಲಂಚದ ಬೇಡಿಕೆ ಹೆಚ್ಚಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಶಿಕ್ಷಕ ಲಿಂಗರಾಜು ಅವರು ದಿನಾಂಕ ಮಾರ್ಚ್​ 02ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡು, ಭ್ರಷ್ಟಾಚಾರ ನಿರೋಧಕ ಕಾಯ್ದೆ–1988 (ತಿದ್ದುಪಡಿ–2018)ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಈ ವಿಚಾರವಾಗಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಗೆ ರೆಡಿಯಾದರು. ಸೋಮವಾರ ಸಂಜೆ 7 ಗಂಟೆ ವೇಳೆಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ ಶಿಕ್ಷಕ ಲಿಂಗರಾಜು ಅವರಿಂದ 1 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಬಿಇಒ ನಾಗೇಂದ್ರಪ್ಪ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದರು. ಈವೇಳೆ ಬಿಇಒ ನಾಗೇಂದ್ರಪ್ಪ ಎ.ಕೆ. ಹಾಗೂ ಮಧ್ಯವರ್ತಿ ಮಂಜುನಾಥ್ ಅವರನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಲೋಕಾಯುಕ್ತ ಇಲಾಖೆಯ ಈ ಕ್ರಮವು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ.

Sulekha

Leave a Reply

Your email address will not be published. Required fields are marked *