ರಾಜ್ಯ ರಾಜಧಾನಿಯಲ್ಲಿ ನೀರಿನ ಸಮಸ್ಯೆ – ವರ್ಕ್ ಫ್ರಂ ಹೋಮ್, ಆನ್​ಲೈನ್ ತರಗತಿಗಳಿಗೆ ಫುಲ್‌ ಡಿಮ್ಯಾಂಡ್‌

ರಾಜ್ಯ ರಾಜಧಾನಿಯಲ್ಲಿ ನೀರಿನ ಸಮಸ್ಯೆ – ವರ್ಕ್ ಫ್ರಂ ಹೋಮ್, ಆನ್​ಲೈನ್ ತರಗತಿಗಳಿಗೆ ಫುಲ್‌ ಡಿಮ್ಯಾಂಡ್‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರಲ್ಲಿ ನಿರಂತರವಾಗಿ ನೀರಿನ ಸಮಸ್ಯೆ ತಲೆದೂರಿದೆ. ಅದರಲ್ಲೂ ನಗರದ ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡಗಳಲ್ಲಿ ಅತೀ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಈ ಬೆನ್ನಲ್ಲೇ ಮಳೆಗಾಲ ಆರಂಭವಾಗುವ ವರೆಗೆ ವರ್ಕ್ ಫ್ರಂ ಹೋಮ್ ಹಾಗೂ ಆನ್​ಲೈನ್ ತರಗತಿಗಳ ಆಯ್ಕೆ ನೀಡುವಂತೆ ನಗರದ ನಿವಾಸಿಗಳಿಂದ ಆಗ್ರಹ ವ್ಯಕ್ತವಾಗಿದೆ.

ಇದನ್ನೂ ಓದಿ:  ​ರಿಷಭ್ ಪಂತ್‌ ಫಿಟ್‌ ಅಂಡ್‌ ಫೈನ್‌ – ಕೊನೆಗೂ ಹಸಿರು ನಿಶಾನೆ ತೋರಿಸಿದ ಎನ್​ಸಿಎ!

2023 ರ ಮುಂಗಾರಿನಲ್ಲಿ ಮಳೆ ಕೊರತೆಯ ಕಾರಣ ಕರ್ನಾಟಕದಲ್ಲಿ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಳೆದ ಒಂದು ತಿಂಗಳಿನಿಂದ ತೀವ್ರ ನೀರಿನ ಸಮಸ್ಯೆಯಿಂದ ಬೆಂಗಳೂರಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ತಾಪಮಾನ ಏರಿಕೆಯಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ನೀರನ್ನು ಉಳಿಸುವುದರ ಜತೆಗೆ ನೌಕರರು ಮತ್ತು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು, ಮನೆಯಿಂದಲೇ ಕೆಲಸದ ಅವಕಾಶ ನೀಡುವಂತೆ ಐಟಿ ಕ್ಷೇತ್ರದ ಉದ್ಯೋಗಿಗಳು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಏತನ್ಮಧ್ಯೆ, ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸವನ್ನು ಕಡ್ಡಾಯಗೊಳಿಸುವಂತೆ ಮತ್ತು ಶಾಲೆಗಳು ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಮನವಿಗಳು ಸಲ್ಲಿಕೆಯಾಗಿವೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮಾಡಿದಂತೆಯೇ ನೀರಿನ ಬಿಕ್ಕಟ್ಟಿನ ಸಮಯದಲ್ಲಿಯೂ ವರ್ಕ್ ಫ್ರಂ ಹೋಮ್, ಆನ್​ಲೈನ್ ತರಗತಿಗಳು ಸೂಕ್ತ ಎಂದು ಬೆಂಗಳೂರಿಗರು ಅಭಿಪ್ರಾಯಪಟ್ಟಿದ್ದಾರೆ.

Shwetha M