ಮಕ್ಕಳು ವಾಹನ ಓಡಿಸಿದ್ದಕ್ಕೆ ಹೆತ್ತವರಿಗೆ ದಂಡದ ಬಿಸಿ – ಒಂದೇ ದಿನ 1,800 ಪೋಷಕರಿಗೆ ಫೈನ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೆಡೆ ಸಿಕ್ಕ ಸಿಕ್ಕಲ್ಲಿ ವಾಹನ ನುಗ್ಗಿಸಿ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ರೂಲ್ಸ್ ಬ್ರೇಕ್ ಮಾಡ್ತಿದ್ರೆ, ಇನ್ನೊಂದ್ಕಡೆ 18 ವರ್ಷ ವಯಸ್ಸಾಗದ, ಚಾಲನಾ ಪರವಾನಗಿ ಹೊಂದಿಲ್ಲದ ಶಾಲೆ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ವಾಹನ ಚಲಾಯಿಸುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ. ಇದೀಗ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಗುರುವಾರ ಒಂದೇ ದಿನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1800 ಮಕ್ಕಳ ಪೋಷಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ತೆರಿಗೆ ಮಿತಿ ಯಥಾಸ್ಥಿತಿ, ಅಭಿವೃದ್ಧಿಯೇ ಮಂತ್ರ! – ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ನಲ್ಲಿ ಯಾರಿಗುಂಟು ಲಾಭ?
ಸಂಚಾರಿ ಪೊಲೀಸರು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಶಾಲಾ ಕಾಲೇಜುಗಳ ಬಳಿಯೇ ಹೋಗಿ ವಿದ್ಯಾರ್ಥಿಗಳು ತಂದ ವಾಹನಗಳನ್ನು ತಡೆದು ಡಿಎಲ್ ಹಾಗೂ ವಯಸ್ಸು ತಪಾಸಣೆ ಮಾಡಿದ್ದಾರೆ. ನಗರದ ಒಟ್ಟು 150ಕ್ಕೂ ಹೆಚ್ಚು ಶಾಲೆಗಳಲ್ಲಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 1500ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ. ಬಳಿಕ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಗುರುವಾರ ಒಂದೇ ದಿನದಲ್ಲಿ ನಗರದಲ್ಲಿ 1800 ಮಕ್ಕಳ ಪೋಷಕರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಎಫ್ಐಆರ್ ದಾಖಲಿಸುವ ಎಚ್ಚರಿಕೆ
ಪೋಷಕರನ್ನು ಕರೆಸಿ ದಂಡ ವಿಧಿಸಿದ ಪೊಲೀಸರು, ಪುನಃ ಇದೇ ರೀತಿ ಮಾಡಿದರೆ ಎಫ್ಐಆರ್ ದಾಖಲಿಸುವುದಾಗಿ ಪೋಷಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಅಲ್ಲದೆ, ಶಾಲೆಗಳಿಂದ ಸುತ್ತೋಲೆ ಕೂಡ ಹೊರಡಿಸಲು ಸೂಚನೆ ನೀಡಿದ್ದಾರೆ. ಡಿಎಲ್ ಇಲ್ಲದ ಹಾಗೂ 18 ವರ್ಷ ತುಂಬದ ವಿದ್ಯಾರ್ಥಿಗಳು ಬೈಕ್ ತರದಂತೆ ಸುತ್ತೋಲೆ ಹೊರಡಿಸಬೇಕು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಸಮ್ಮತಿಸಿರುವ ಆಡಳಿತ ಮಂಡಳಿಯವರು ಕೆಲವೇ ದಿನಗಳಲ್ಲಿ ಸುತ್ತೋಲೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳು ಬೈಕ್ ರೈಡ್ ಮಾಡಿಕೊಂಡು ತೆರಳುತ್ತಿರವುದು ಅಪಘಾತಗಳಿಗೂ ಕಾರಣವಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಸಂಚಾರ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.